ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯನ ಕುಟುಂಬ ಸೇರಿಸಿದ ‘ವೈಟ್‌ ಡವ್ಸ್‌’

ಮಾನಸಿಕ ಅಸ್ವಸ್ಥೆಯಿಂದ ಬೆಂಕಿ ಹಚ್ಚಿಕೊಂಡಿದ್ದ ಯುವಕನ ಆರೈಕೆ
Last Updated 4 ಅಕ್ಟೋಬರ್ 2020, 13:56 IST
ಅಕ್ಷರ ಗಾತ್ರ

ಮಂಗಳೂರು: ಮಾನಸಿಕ ಅಸ್ವಸ್ಥತೆಯಿಂದ ಮೈಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಸುಟ್ಟ ಗಾಯಗಳಿಂದ ನಗರದ ನವಭಾರತ ವೃತ್ತದ ಬಳಿಯ ಬಸ್‌ ತಂಗುದಾಣದಲ್ಲಿ ಬಿದ್ದಿದ್ದ ಯುವಕನನ್ನು ಒಂದೂವರೆ ವರ್ಷ ಆರೈಕೆ ಮಾಡಿದ ನಗರದ ಕುಲಶೇಖರ ಮರೋಳಿಯ ‘ವೈಟ್‌ ಡವ್ಸ್‌’, ಮತ್ತೆ ಮನೆ ಸೇರಿಸಿದೆ.

ಆಂಧ್ರಪ್ರದೇಶದ ಕಡಪದ ಕೊಡೂರಿನ ಸುಬ್ರಹ್ಮಣ್ಯ ಕುಟುಂಬ ಸೇರಿದ ಯುವಕ.2019ರ ಮೇ 19ರಂದು ವೈಟ್ ಡವ್ಸ್ ಸಂಸ್ಥೆಯ ಕೊರೀನಾ ರಸ್ಕಿನ ಅವರು ತಂಗುದಾಣದಲ್ಲಿ ಮೈಯೆಲ್ಲ ಸುಟ್ಟಗಾಯಗಳೊಂದಿಗೆ ಬಿದ್ದ ಯುವಕನನ್ನು ಕಂಡು ಮರುಗಿದ್ದಾರೆ. ತಕ್ಷಣವೇ, ತಮ್ಮ ಸಂಸ್ಥೆ ಸಿಬ್ಬಂದಿ ಮೂಲಕ ಆತನನ್ನು ಕರೆದೊಯ್ದು ಗಾಯಗಳಿಗೆ ಹಾಗೂ ಮಾನಸಿಕ ಚಿಕಿತ್ಸೆಯನ್ನು ಕೊಡಿಸಿದ್ದಾರೆ.

ಒಂದೂವರೆ ವರ್ಷ ತಮ್ಮ ಸಂಸ್ಥೆಯಲ್ಲಿ ಆರೈಕೆ ಮಾಡಿದ್ದಾರೆ. ವಾರದ ಹಿಂದೆ ಸುಬ್ರಹ್ಮಣ್ಯ ಮೊಬೈಲ್ ಸಂಖ್ಯೆಯೊಂದನ್ನು ನೆನಪು ಮಾಡಿಕೊಂಡಿದ್ದು, ಸಂಸ್ಥೆಯವರು ಕರೆ ಮಾಡಿದಾಗ ಅವರ ಸಹೋದರ ವೆಂಕಟೇಶ್‌ ಮಾತನಾಡಿದ್ದಾರೆ. ಆ ಮೂಲಕ ಕುಟುಂಬ ಪತ್ತೆಯಾಗಿದೆ. ಕುಟುಂಬದ ಜೊತೆ ಶನಿವಾರ ಮಂಗಳೂರಿಗೆ ಬಂದ ವೆಂಕಟೇಶ್, ಸಹೋದರ ಸುಬ್ರಹ್ಮಣ್ಯನಿಗೆ ಸಂಬಂಧಿಸಿದ ದಾಖಲೆಗಳನ್ನೆಲ್ಲ ನೀಡಿ, ದೃಢೀಕರಿಸಿ ವಾಪಸ್ ಮನಗೆ ಕರೆದೊಯ್ದಿದ್ದಾರೆ.

‘ಸುಬ್ರಹ್ಮಣ್ಯನಿಗೆ ಸ್ವಲ್ಪ ಮಾನಸಿಕ ಸಮಸ್ಯೆ ಇತ್ತು. ಅದ್ದರಿಂದ ಆತನು ಮನೆಯಲ್ಲಿಯೂ ಪ್ರತ್ಯೇಕವಾಗಿ ಇರುತ್ತಿದ್ದನು. ಈ ನಡುವೆ ಮೈಗೆ ಬೆಂಕಿ ಹಚ್ಚಿಕೊಂಡು, ಪರಾರಿ ಆಗಿರಬೇಕು. ಆತ ನಾಪತ್ತೆಯಾದ ಬಳಿಕ ನಾವು ಸತತ ಹುಡುಕಾಟ ನಡೆಸಿ, ಸೋತು ಹೋದೆವು. ಅಮ್ಮ ಬಹಳ ನೊಂದಿದ್ದರು. ಮೊನ್ನೆ ‘ವೈಟ್‌ ಡವ್ಸ್‌’ ಸಂಸ್ಥೆಯಿಂದ ಕರೆ ಬಂದಾಗ ಅಮ್ಮ, ಮನೆಯಲ್ಲಿ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಸಂಸ್ಥೆಗೆ ನಾವು ಚಿರಋಣಿಗಳು’ ಎಂದು ವೆಂಕಟೇಶ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ನಾವು ಪುನರ್ವಸತಿ ಕಲ್ಪಿಸಿ ಕುಟುಂಬಕ್ಕೆ ಸೇರಿಸಿದ 390ನೇ ಯುವಕ ಸುಬ್ರಹ್ಮಣ್ಯ. ದೈಹಿಕ ಹಾಗೂ ಮಾನಸಿಕವಾಗಿ ಗುಣಮುಖನಾಗಿ ಕುಟುಂಬ ಸೇರಿರುವುದು ಖುಷಿಯಾಗಿದೆ ಎಂದು ಕೊರೀನಾ ರಸ್ಕಿನ ಪ್ರತಿಕ್ರಿಯಿಸಿದರು

ತಾಯಿಗೆ ಕಾಯುತ್ತಿರುವ ಹಾವೇರಿಯ ಹುಡುಗ

‘ನಗರದಲ್ಲಿ ಗಂಭೀರ ಗಾಯಗೊಂಡ ಯುವಕನೊಬ್ಬನನ್ನು ನಾವು ರಕ್ಷಣೆ ಮಾಡಿದ್ದೆವು. ಆತನ ಕಾಲಿನ ಗಾಯದಲ್ಲಿ ಹುಳವಾಗಿತ್ತು. ಈಗ ಗುಣಮುಖನಾಗಿದ್ದಾನೆ. ಹಾವೇರಿಯ ಅವರ ಮನೆಗೆ ಕರೆ ಮಾಡಿದ್ದು, ಕರೆದುಕೊಂಡು ಹೋಗುವಂತೆ ಹೇಳಿದ್ದೆವು. ಆತನ ತಾಯಿ ಬಳಿ, ಬಂದು ಹೋಗಲೂ ಹಣವಿಲ್ಲ. ಅದಕ್ಕಾಗಿ, ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗೆ ಸಂಪರ್ಕಿಸಿದ್ದೇವೆ. ಆತನೂ ಶೀಘ್ರವೇ ಮನೆ ಸೇರಲಿದ್ದಾನೆ’ ಎಂದು ಕೊರೀನಾ ರಸ್ಕಿನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT