ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ವೃದ್ಧಿಗೆ ಕೈಜೋಡಿಸಿದ ಮಹಿಳೆಯರು

ನರೇಗಾದ ಅಡಿಯಲ್ಲಿ ಕೆಲಸಕ್ಕೆ ಕಾರ್ಯಾದೇಶ; ಹೋರಾಟಕ್ಕೆ ಸಂದ ಜಯ
Last Updated 16 ಸೆಪ್ಟೆಂಬರ್ 2020, 5:36 IST
ಅಕ್ಷರ ಗಾತ್ರ

ಬೈಂದೂರು: ಕೆರ್ಗಾಲ್ ಗ್ರಾಮ ಪಂಚಾಯಿತಿಯಲ್ಲಿ ನಿಯಮದಂತೆ ಹೆಸರು ದಾಖಲಿಸಿಕೊಂಡ ಕೂಲಿಯಾಳುಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು ಎಂದು ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ.

ಗ್ರಾಮ ಪಂಚಾಯಿತಿ ನೀಡಿದ ಕಾರ್ಯಾದೇಶದಂತೆ ಮಂಗಳವಾರ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ 100ಕ್ಕೂ ಅಧಿಕ ಕೂಲಿಕಾರರು ಅಂತರ್ಜಲ ವೃದ್ಧಿಗಾಗಿ ಇಂಗುಗುಂಡಿ ಕಾಮಗಾರಿ ಆರಂಭಿಸಿದರು.

ಪಂಚಾಯಿತಿ ವ್ಯಾಪ್ತಿಯ ಸುಮಾರು 300 ಮಹಿಳಾ ಕಾರ್ಮಿಕರು ಆರು ಕಾಯಕ ಸಂಘಗಳನ್ನು ರಚಿಸಿಕೊಂಡು ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡಿದ್ದರು. ನಿಯಮದಂತೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದ್ದರು. ಬೇಡಿಕೆ ಸಲ್ಲಿಸಿ 25 ದಿನಗಳು ಉರುಳಿದರೂ ಬೇಡಿಕೆ ಈಡೇರದಿದ್ದಾಗ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ಬೈಂದೂರು ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ’ಕೆಲಸ ಕೊಡಿ, ಇಲ್ಲ ನಿರುದ್ಯೋಗ ಭತ್ಯೆಕೊಡಿ’ ಎಂದು ಒತ್ತಾಯಿಸಿ, ಪ್ರತಿಭಟನೆ ನಡೆಸಿದ್ದರು. ಕಾರ್ಯನಿರ್ವಹಣಾಧಿಕಾರಿ ಭಾರತಿ ಅವರು ನರೇಗಾ ಅಡಿ ಕೆಲಸ ಕೊಡುವ ಭರವಸೆ ನೀಡಿದರೂ ಪಟ್ಟುಬಿಡದ ಪ್ರತಿಭಟನಾಕಾರರು, ಲಿಖಿತ ದಾಖಲೆ ಪಡೆದು, ಧರಣಿ ಹಿಂಪಡೆದಿದ್ದರು.

ಅಭಿವೃದ್ಧಿ ಅಧಿಕಾರಿ ನಾಗವೇಣಿ, ಕೃಷಿ ಕೂಲಿಕಾರರ ಸಂಘದ ಮುಖಂಡ ಕೋಣಿ ವೆಂಕಟೇಶ ನಾಯಕ್, ಕಾರ್ಯಕರ್ತ ಉದಯ ಗಾಣಿಗ ಮೊಗೇರಿ ಇದ್ದರು.

ವೈದ್ಯರೊಂದಿಗೆ ವಾಗ್ವಾದ : ಕೆಲಸ ಪ್ರಾರಂಭವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಆರೋಗ್ಯ ಸಿಬ್ಬಂದಿ, ಎಲ್ಲ ಕಾರ್ಮಿಕರು ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಿಕೊಳ್ಳಬೇಕು ಎಂದು ಸೂಚಿಸಿದರು. ‘ದೀರ್ಘಕಾಲದಿಂದ ಕೆಲಸ ವಂಚಿತರಾಗಿರುವ ನಮಗೆ ಈಗ ಕೆಲಸ ಸಿಕ್ಕಿದೆ. ನಾವೆಲ್ಲ ಆರೋಗ್ಯವಾಗಿದ್ದೇವೆ. ನಿಯಮದಂತೆ ಅಂತರ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದೇವೆ. ಪರೀಕ್ಷೆಗೆ ಒಳಗಾಗುವುದಿಲ್ಲ’ ಎಂದು ಕಾರ್ಮಿಕರು ವಾದಿಸಿದರು. ಕೆಲಕಾಲ ಉಭಯರ ನಡುವೆ ವಾಗ್ವಾದ ನಡೆಯಿತು. ಮಹಿಳೆಯರು ಪಟ್ಟು ಬಿಡದಿದ್ದಾಗ ವೈದ್ಯಾಧಿಕಾರಿ, ಜಿಲ್ಲಾಧಿಕಾರಿ ಸೇರಿದಂತೆ ಉನ್ನತಾಧಿಕಾರಿಗಳ ಜತೆ ಚರ್ಚಿಸುವುದಾಗಿ ಹೇಳಿ ನಿರ್ಗಮಿಸಿದರು. ಆ ಬಳಿಕ ಕೆಲಸ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT