ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಮ್ಮೆಕೆರೆ ಈಜುಕೊಳ ಪಾಲಿಕೆಗೆ ಹಸ್ತಾಂತರ ಇಲ್ಲ: ಸಚಿವ ಬಿ.ನಾಗೇಂದ್ರ

ಯುವಸಬಲೀಕರಣ, ಕ್ರೀಡಾ ಸಚಿವ ನಾಗೇಂದ್ರ ಸ್ಪಷ್ಟನೆ
Published 13 ಜನವರಿ 2024, 13:47 IST
Last Updated 13 ಜನವರಿ 2024, 13:47 IST
ಅಕ್ಷರ ಗಾತ್ರ

ಮಂಗಳೂರು: ನಗರದ ಎಮ್ಮೆಕೆರೆ ಈಜುಕೊಳವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವುದಿಲ್ಲ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಸ್ಪಷ್ಟಪಡಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಿರುವ ಈ ಈಜುಕೊಳವನ್ನು ಪಾಲಿಕೆಯು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದೆ. ಇದನ್ನು ಮರಳಿ ಪಾಲಿಕೆಯ ತೆಕ್ಕೆಗೆ ಪಡೆಯುವ ಬಗ್ಗೆ ಈಚೆಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಪಾಲಿಕೆಯ ಈ ಪ್ರಸ್ತಾವವನ್ನು ಸಚಿವರು ಸಾರಾಸಗಟಾಗಿ ತಿರಸ್ಕರಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನಗರದ ಎಮ್ಮೆಕೆರೆ ಈಜುಕೊಳವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದು ಕ್ರೀಡಾಪಟುಗಳಿಗೆ ಸೇರಿದ ಸೌಕರ್ಯ. ಇಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಲಿದ್ದೇವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಈಜುಪಟುಗಳನ್ನು ಇಲ್ಲಿ ಅಣಿಗೊಳಿಸಲಿದ್ದೇವೆ. ನಮಗಿಂತಲೂ ಚೆನ್ನಾಗಿ ಇದನ್ನು ಯಾರಾದರೂ ನಿರ್ವಹಣೆ ಮಾಡುತ್ತಾರೆ ಎಂದಾದರೆ, ಆಗ ನೋಡೋಣ’ ಎಂದರು.

‘ಇಲ್ಲಿನ ಮಂಗಳಾ ಕ್ರೀಡಾಂಗಣಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇದು ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಗೆ ಒಂದು ಕ್ರೀಡೆಯನ್ನು ಗುರುತಿಸಿ, ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದಕ್ಕೆ ಇಲಾಖೆ ನಿರ್ಧರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯು ಅಥ್ಲೆಟಿಕ್ಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಇಲ್ಲಿ ಈ ಕ್ರೀಡೆಗೆ ಉತ್ತೇಜನ ನೀಡಲು ಕ್ರಮವಹಿಸಲಿದ್ದೇವೆ’ ಎಂದರು. 

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿ ಜಿ.ಎ.ಬಾವ, ಉಪಾಧ್ಯಕ್ಷ ಪಿ.ವಿ.ಮೋಹನ್, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ, ಪಕ್ಷದ ಮುಖಂಡರಾದ ಐವನ್ ಡಿಸೋಜ, ರಕ್ಷಿತ್ ಶಿವರಾಂ ಸಂತೋಷ್‌ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT