ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ– ಗುತ್ತಿಗೆ ಮುಂದುವರಿಸುವುದಿಲ್ಲ

ಪೌರಕಾರ್ಮಿಕರ ಸಮಾವೇಶದಲ್ಲಿ ಜಿಲ್ಲಾಧಿಕಾರಿ ಭರವಸೆ
Last Updated 22 ಸೆಪ್ಟೆಂಬರ್ 2022, 3:57 IST
ಅಕ್ಷರ ಗಾತ್ರ

ಮಂಗಳೂರು: ‘ನಗರದಲ್ಲಿ ಕಸ ವಿಲೇವಾರಿ ನಿರ್ವಹಣೆ ಸಲುವಾಗಿ ಆಂಟನಿ ಸಂಸ್ಥೆ ಜೊತೆ ಮಾಡಿಕೊಂಡಿರುವ ಗುತ್ತಿಗೆಯ ಅವಧಿ ಮುಗಿದ ಬಳಿಕವೂ ತಾಂತ್ರಿಕ ಕಾರಣಗಳಿಗಾಗಿ ಒಂದು ವರ್ಷಕ್ಕೆ ಸೀಮಿತವಾಗಿ ಅದನ್ನು ವಿಸ್ತರಿಸಿದ್ದೇವೆ. ಈ ಗುತ್ತಿಗೆಯನ್ನು ಇನ್ನು ಮುಂದುವರಿಸುವುದಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಭರವಸೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಪೌರಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಆಶ್ರಯದಲ್ಲಿ ‌ಬುಧವಾರ ಇಲ್ಲಿ ಏರ್ಪಡಿಸಿದ್ದ ಪೌರಕಾರ್ಮಿಕರ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಕಸ ವಿಲೇವಾರಿ ವ್ಯವಸ್ಥೆಯನ್ನು ಗುತ್ತಿಗೆ ನೀಡಬಾರದು ಎಂಬ ನಿಲುವನ್ನು ಜಿಲ್ಲಾಡಳಿತವೂ ಹೊಂದಿದೆ. ಆದರೆ, ಕಸ ವಿಲೇವಾರಿಗೆ ಅಗತ್ಯ ಇರುವ ವಾಹನಗಳು ಹಾಗೂ ಯಂತ್ರೋಪಕರಣಗಳ ಖರೀದಿಗೆ ಸಮಯಾವಕಾಶ ಬೇಕಾಗುತ್ತದೆ’ ಎಂದರು.

‘ಕಸ ವಿಲೇವಾರಿ ವಾಹನ ಚಾಲಕರು, ಲೋಡರ್‌ಗಳು, ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನೂ ಕಾಯಂಗೊಳಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಈ ಬಗ್ಗೆ ರಾಜ್ಯಮಟ್ಟದಲ್ಲೇ ನಿರ್ಧಾರವಾಗಬೇಕಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಲೂ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಹಂತ ಹಂತವಾಗಿ ಕಾಯಂಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

ಪೌರಕಾರ್ಮಿಕರ ರಾಜ್ಯ ಮಹಾಸಂಘದ ಅಧ್ಯಕ್ಷ ನಾರಾಯಣ್‌, ‘ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ₹ 184 ಕೋಟಿ ಪೌರಾಡಳಿತ ನಿರ್ದೇಶನಾಲಯದಲ್ಲಿ ಖರ್ಚಾಗದೆ ಉಳಿದಿದೆ. ಜಿಲ್ಲೆಯ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಒದಗಿಸಲು ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿ’ ಎಂದರು.

’ಪಚ್ಚನಾಡಿಯಲ್ಲಿ ಪೌರಕಾರ್ಮಿಕರ 16 ಮನೆಗಳು ತೀರಾ ಕೆಟ್ಟ ಸ್ಥಿತಿಯಲ್ಲಿವೆ. ಅವರಿಗೆ ಯಾವುದೇ ಮೂಲಸೌಕರ್ಯಗಳಿಲ್ಲ. ಪಾಲಿಕೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಕುಂದುಕೊರತೆ ಆಲಿಸಬೇಕು. ಪಚ್ಚನಾಡಿ ಕಸ ಸಂಸ್ಕರಣಾ ಘಟಕದಲ್ಲಿ ದುಡಿಯುವ ಕುಟುಂಬಗಳಿಗೆ ಪರ್ಯಾಯ ನೆಲೆ ಕಲ್ಪಿಸದೆ ಒಕ್ಕಲೆಬ್ಬಿಸಬಾರದು‘ ಎಂದು ಒತ್ತಾಯಿಸಿದರು.

ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ನಿವೃತ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಸಂಘದ ಅಧ್ಯಕ್ಷ ಅನಿಲ್‌ ಕುಮಾರ್‌ ಕಂಕನಾಡಿ, ಕಾರ್ಯದರ್ಶಿ ಎಸ್‌.ಪಿ.ಆನಂದ, ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ರಘು ಸಾಲ್ಯಾನ್‌, ವಿರೋಧ ಪಕ್ಷದ ನಾಯಕ ನವೀನ್‌ ಡಿಸೋಜ, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ಮನೋಜ್‌ ಕುಮಾರ್ ಕೋಡಿಕಲ್‌, ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ದೇವದಾಸ್‌, ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಸುಂದರ, ಸಿಇಡಿಎಸ್‌ಇ ನಿರ್ದೇಶಕಿ ರೀಟಾ ನೊರೊನ್ಹಾ, ಸಮುದಾಯದ ಪ್ರಮುಖರದ ಸುಮಿತ್ರಾ, ಅಪ್ಪಿ ಮೊದಲಾದವರು ಇದ್ದರು.

‘ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸಿ’

‘ಪೌರಕಾರ್ಮಿಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಅವರ ಉನ್ನತ ಶಿಕ್ಷಣಕ್ಕೆ ಜಿಲ್ಲಾಡಳಿತ ಸಕಲ ನೆರವು ನೀಡಲಿದೆ. ಪೌರಕಾರ್ಮಿಕರ ಮಕ್ಕಳು ಐಎಎಸ್‌, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದರೆ ತರಬೇತಿ ನೀಡಲು ಅಧಿಕಾರಿಗಳು ಸಿದ್ಧ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಕೆಲವು ಪೌರಕಾರ್ಮಿಕರು ದುಡಿಮೆಯ ಶೇ 30ರಷ್ಟು ಹಣವನ್ನು ಪಾನ್‌, ಗುಟ್ಕಾ, ಮದ್ಯಪಾನ ಧೂಮಪಾನದಂತಹ ದುಶ್ಚಟಗಳಿಗೆ ವ್ಯಯಿಸಿ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ದುಶ್ಚಟಗಳಿಂದ ದೂರವಿದ್ದು, ಆರೋಗ್ಯದ ಕಾಳಜಿ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT