ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ .ದೊಡ್ಡವರ ಭ್ರಷ್ಟಾಚಾರ ದೇಶದ ದೌರ್ಭಾಗ್ಯ

Last Updated 7 ಮಾರ್ಚ್ 2011, 8:25 IST
ಅಕ್ಷರ ಗಾತ್ರ

ಪುತ್ತೂರು: ದೇಶದಲ್ಲಿ ಉನ್ನತ ಸ್ಥಾನದಲ್ಲಿರುವವರೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರಸಂಘಚಾಲಕ ಮೋಹನ ಭಾಗವತ್ ಖೇದ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ವಿವೇಕಾನಂದ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್‌ನ ಬೌದ್ಧಿಕ ವರ್ಗದಲ್ಲಿ ಅವರು ಮಾತನಾಡಿದರು.

‘ದೊಡ್ಡವರ ಭ್ರಷ್ಟಾಚಾರ ದೇಶದ ದೌರ್ಭಾಗ್ಯ. ಸಣ್ಣವರು ಭ್ರಷ್ಟರಾಗುವುದಿಲ್ಲ. ಒಳ್ಳೆಕೆಲಸ ಮಾಡಲು ಯತ್ನಿಸ್ತಾರೆ. ಯಾರಲ್ಲಿ ಸಾಕಷ್ಟು ಸಂಪತ್ತು ಇದೆಯೋ, ಅವರು ತಿಜೋರಿಯನ್ನು ಮತ್ತಷ್ಟು ತುಂಬಿಸಿಕೊಳ್ಳುತ್ತಿದ್ದಾರೆ. ಬಡವರು ರಕ್ತ-ಬೆವರು ಹರಿಸಿ ಸಂಪಾದಿಸಿದ ಹಣವನ್ನು ಲೂಟಿ ಮಾಡಿ ರಾಜ, ಮಹಾರಾಜರನ್ನೂ ಮೀರಿಸುವಂತಹ ಬಂಗಲೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಕೋಟಿಗಟ್ಟಲೆ ಹಣವನ್ನು ವಿದೇಶಿ ಬ್ಯಾಂಕ್‌ಗಳಲ್ಲಿಟ್ಟು ದೇಶದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ. ಆತಂಕವಾದಿಗಳ ಜತೆ ಸಂಬಂಧ ಬೆಳೆಸಿ ದೇಶದ ಸುರಕ್ಷತೆಗೂ ಧಕ್ಕೆ ತರುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ದೇಶದ ಎಲ್ಲ ಪ್ರಜೆಗಳು ತಮ್ಮವರು ಎಂದು ಭಾವಿಸದೆ, ಕುಟುಂಬದ ಬಗ್ಗೆ ಮಾತ್ರ ಯೋಚಿಸುವವರ ಸ್ವಾರ್ಥವೇ ಭ್ರಷ್ಟಾಚಾರದ ಮೂಲ. ನಮ್ಮ ಮತದಾರರು, ಬೇರೆಯವರ ಮತದಾರರು ಎಂದು ವಿಭಜಿಸಿ, ಜಾತಿ-ಪಂಥ ಹೆಸರಲ್ಲಿ ಜಗಳ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ’ ಎಂದು ಸದ್ಯದ ಸಮಾಜ, ರಾಜಕೀಯ ಸ್ಥಿತಿಗತಿ ಬಗ್ಗೆ ಮಾತನಾಡುತ್ತಾ ವಿಷಾದಿಸಿದರು.

‘ನಾಯಕ ಪ್ರಾಮಾಣಿಕನಾಗಿರಬೇಕು. ನಿಸ್ವಾರ್ಥದಿಂದ ಕೆಲಸ ಮಾಡಬೇಕು. ಆತ ಸ್ವತಃ ಪ್ರತಿಭಾವಂತನಾಗಿರಬೇಕಾಗಿಲ್ಲ. ಆದರೆ ಜನತೆಯ ವಿಶ್ವಾಸಗಳಿಸುವಂತಹ, ಪ್ರತಿಭಾವಂತರನ್ನು ಸೆಳೆಯುವಂತಹ ವ್ಯಕ್ತಿತ್ವ ಹೊಂದಿರಬೇಕು’ ಎಂದರು. ‘ಕಾಶ್ಮೀರ ಸಮಸ್ಯೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತೆ ಭಾರತಕ್ಕೆ ಯಾವಾಗ ಬರುತ್ತದೆ ಎಂಬುದಷ್ಟೇ ಸರ್ಕಾರದ ಮುಂದಿರುವ ಪ್ರಶ್ನೆ. ಆದರೆ ಸರ್ಕಾರವೇ ಪ್ರತ್ಯೇಕತಾವಾದಿಗಳ ಜತೆ ಮಾತುಕತೆಗೆ ಹೋಗುತ್ತದೆ. ಅಲ್ಲಿನ ಸ್ವಾಯತ್ತತೆ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ ಮಾತನಾಡಲಾಗುತ್ತಿದೆ. ಅಖಂಡ ಭಾರತ ನಮ್ಮ ಮಾತೃಭೂಮಿ. ಮಾತೃಭೂಮಿಯ ವಿಭಜನೆ ಅಸಾಧ್ಯ. ದೇಶದ ಸ್ವರೂಪದ ಬಗ್ಗೆಯೇ ಸರ್ಕಾರಕ್ಕೆ ಅಸ್ಪಷ್ಟತೆ ಇದೆ’ ಎಂದರು.

‘ಹಿಂದೂ- ಮುಸ್ಲಿಮರು ಜಗಳವಾಡುತ್ತಲೇ ನಿರ್ನಾಮವಾಗುತ್ತಾರೆ ಎಂದು ಭಾವಿಸಬೇಡಿ. ಸಂಘರ್ಷದ ನಡುವೆಯೂ ಒಟ್ಟಿಗೆ ಬಾಳುವ ದಾರಿಯನ್ನು ಅವರು ಕಂಡುಕೊಳ್ಳುತ್ತಾರೆ’ ಎಂದು ರವೀಂದ್ರನಾಥ ಠಾಗೂರರು ಹಿಂದೆಯೇ ತಿಳಿಸಿದ್ದಾರೆ. ಭಾರತ ಹಿಂದೂ ರಾಷ್ಟ್ರವಾದ ಕಾರಣ ಆ ದಾರಿಯೂ ಹಿಂದೂಗಳು ಪಾಲಿಸುವ ದಾರಿಯೇ ಆಗಿರುತ್ತದೆ ಎಂದರು. 

‘ಶಕ್ತಿ ಉಪಾಸನೆ ಬಿಟ್ಟಿದ್ದರಿಂದ ದೇಶವು ಸಾವಿರಾರು ವರ್ಷ ಗುಲಾಮಗಿರಿಗೆ ಒಳಗಾಗಬೇಕಾಯಿತು. ನಮ್ಮ ಶಕ್ತಿ ಇರುವುದು ಸಶಸ್ತ್ರ ಸೈನಿಕರ ಅಥವಾ ಪೊಲೀಸರ ಶಕ್ತಿಯಲ್ಲಲ್ಲ. ಅದು ಜನಶಕ್ತಿ. ಅದನ್ನು ಜಾಗೃತಗೊಳಿಸಬೇಕಿದೆ. ಜನರ ಮನಸ್ಸಿನಲ್ಲಿರುವ ಸ್ವಾರ್ಥವನ್ನು ಕಿತ್ತೊಗೆದು ‘ಭಾರತ ವೈಭವ’ದ ಕನಸು ತುಂಬಬೇಕು ಎಂದು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಹೇಳಿದ್ದಾರೆ. ಅವರು ಹಿಂದೂಗಳ ಹೆಸರನ್ನು ಉಲ್ಲೇಖಿಸದೆಯೇ ಎಲ್ಲಿ ಲೋಪವಾಗಿದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಅವರ ಮಾತನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದು ಗಮನ ಸೆಳೆದರು.ಆರ್‌ಎಸ್‌ಎಸ್ ಸರ ಕಾರ್ಯವಾಹ ಸುರೇಶ್ ಜೋಷಿ ಹಾಗೂ ಮಂಗಳೂರು ವಿಭಾಗದ ಸಹಸಂಘಚಾಲಕ ವಾಮನ ಶೆಣೈ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT