ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯ ಅಭಿವೃದ್ಧಿಗೆ ಶ್ರಮಿಸಿದ ರಾಜಕಾರಣಿ

Last Updated 4 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ಮಂಗಳೂರು: 1980ರ ದಶಕದಿಂದ ಇತ್ತೀಚಿನವರೆಗೂ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಹಿರಿಯ ನೇತಾರ ವಿ.ಧನಂಜಯ ಕುಮಾರ್‌ ಸಿಕ್ಕ ಎಲ್ಲ ಅವಕಾಶಗಳನ್ನೂ ಕರಾವಳಿಯ ಅಭಿವೃದ್ಧಿಗಾಗಿ ಬಳಸಿಕೊಂಡವರು. ಕೇಂದ್ರೀಯ ತೆರಿಗೆ ಮಂಡಳಿ ಕಚೇರಿ, ಪಾಸ್‌ಪೋರ್ಟ್‌ ಸ್ವೀಕೃತಿ ಕೇಂದ್ರ, ನವಮಂಗಳೂರು ಬಂದರಿನಲ್ಲಿ ಹೊಸ ಜೆಟ್ಟಿಗಳ ನಿರ್ಮಾಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದರು.

ಒಮ್ಮೆ ಶಾಸಕರಾಗಿದ್ದು, ನಾಲ್ಕು ಬಾರಿ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಧನಂಜಯ ಕುಮಾರ್‌, ಅಲ್ಪಸಂಖ್ಯಾತ ಜೈನ ಧರ್ಮೀಯರು. ಆದರೆ, ಬಿಜೆಪಿಯಲ್ಲಿ ಸಕ್ರಿಯವಾಗಿದ್ದುಕೊಂಡು ಎತ್ತರಕ್ಕೆ ಏರುತ್ತಾ ಹೋಗಿದ್ದರು.

ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರೊಂದಿಗೆ ನಿಕಟ ಸಂಬಂಧ ಇರಿಸಿಕೊಂಡು ಕೇಂದ್ರದಲ್ಲಿ ಎರಡು ಬಾರಿ ಸಚಿವರಾಗಿದ್ದರು. ಆ ಎರಡೂ ಅವಕಾಶಗಳಲ್ಲಿ ಕರಾವಳಿಗಾಗಿ ಹಲವು ಕೆಲಸಗಳನ್ನು ಮಾಡಿದ್ದರು ಎಂದು ಅವರ ಒಡನಾಡಿಗಳು ಸ್ಮರಿಸಿಕೊಳ್ಳುತ್ತಾರೆ.

‘ನವ ಮಂಗಳೂರು ಬಂದರಿನಲ್ಲಿ (ಎನ್‌ಎಂಪಿಟಿ) ಎರಡು ಹೊಸ ಜೆಟ್ಟಿಗಳು ನಿರ್ಮಾಣವಾಗಲು ಧನಂಜಯ ಕುಮಾರ್‌ ಅವರೇ ಕಾರಣ. ಕಸ್ಟಮ್ಸ್‌ ಮತ್ತು ಆದಾಯ ತೆರಿಗೆ ಇಲಾಖೆಗಳ ಪ್ರಾದೇಶಿಕ ಕಚೇರಿಗಳು ಮಂಗಳೂರಿನಲ್ಲಿ ಆರಂಭವಾಗಿದ್ದು ಅವರ ಪ್ರಯತ್ನದಿಂದಲೇ. ಮೊದಲು ಕೋಸ್ಟ್‌ ಗಾರ್ಡ್‌ನ ಮಾಹಿತಿ ಸಂಗ್ರಹ ಗೋಪುರ ಇರಲಿಲ್ಲ. ಅದನ್ನು ಇಲ್ಲಿ ಸ್ಥಾಪಿಸುವುದಕ್ಕೂ ಅವರೇ ಕಾರಣೀಭೂತರು’ ಎಂದು ಬಿಜೆಪಿಯ ಹಿರಿಯ ಮುಖಂಡ ಮೋನಪ್ಪ ಭಂಡಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಪಾಸ್‌ಪೋರ್ಟ್‌ ಸ್ವೀಕೃತಿ ಕೇಂದ್ರ ಇರಲಿಲ್ಲ. ಆದರೆ, ಪಟ್ಟುಬಿಡದೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಪಾಸ್‌ಪೋರ್ಟ್‌ ಸ್ವೀಕೃತಿ ಕೇಂದ್ರ ಮಂಜೂರು ಮಾಡಿಸಿದ್ದರು. ಪಾಣೆಮಂಗಳೂರಿನ ಬೃಹತ್‌ ಸೇತುವೆಯ ಮಂಜೂರಾತಿ ಮತ್ತು ತ್ವರಿತವಾಗಿ ಕೆಲಸ ಮುಗಿಸುವುದರಲ್ಲಿ ಅವರ ಪಾತ್ರ ದೊಡ್ಡದಿತ್ತು. ಮಂಗಳೂರು ಜಂಕ್ಷನ್‌ ರೈಲ್ವೆ ನಿಲ್ದಾಣದ ಆರಂಭಕ್ಕೂ ಸಾಕಷ್ಟು ಕೊಡುಗೆ ನೀಡಿದ್ದರು ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT