ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಳಾಯಿ ಬಂದರು 2022ಕ್ಕೆ ಸಿದ್ಧ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಘೋಷಣೆ

Last Updated 5 ಮಾರ್ಚ್ 2019, 8:33 IST
ಅಕ್ಷರ ಗಾತ್ರ

ಮಂಗಳೂರು: ಸಾಗರ ಮಾಲಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಕುಳಾಯಿ ಸರ್ವ ಋತು ಮೀನುಗಾರಿಕಾ ಬಂದರು2022ರ ಮೇ ವೇಳೆಗೆ ಸಿದ್ಧವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಬಂದರು ಸಚಿವ ನಿತಿನ್‌ ಗಡ್ಕರಿ ಘೋಷಿಸಿದರು.

ಕುಳಾಯಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಮಂಗಳವಾರ ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ಶಿಲಾನ್ಯಾಸ ನೆರವೇರಿಸಿ ಅವರು ನವದೆಹಲಿಯಿಂದ ಮಾತನಾಡಿದರು. ಇದೇ ವೇಳೆ ಅವರು ಮೂಲ್ಕಿಯಿಂದ ಕೊಣಾಜೆವರೆಗಿನ ₹ 2,500 ಕೋಟಿ ವೆಚ್ಚದ ಮಂಗಳೂರು ಬೈಪಾಸ್‌, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಕಾರ್ಕಳದ ಸಾಣೂರಿನಿಂದ ಮಂಗಳೂರಿನ ಬಿಕರ್ನಕಟ್ಟೆವರೆಗೆ ₹ 1,163 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮತ್ತು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರಿನಲ್ಲಿ ₹ 65 ಕೋಟಿ ವೆಚ್ಚದಲ್ಲಿ ಫಲ್ಗುಣಿ ನದಿಗೆ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

₹ 196 ಕೋಟಿ ವೆಚ್ಚದಲ್ಲಿ ಕುಳಾಯಿ ಬಂದರು ನಿರ್ಮಿಸಲಾಗುತ್ತಿದೆ. ನವ ಮಂಗಳೂರು ಬಂದರು ನಿರ್ಮಾಣದ ವೇಳೆ ನೆಲೆ ಕಳೆದುಕೊಂಡ ಮೀನುಗಾರರಿಗೆ ಇದರಿಂದ ಅನುಕೂಲವಾಗಲಿದೆ. 120 ದೋಣಿಗಳ ನಿಲುಗಡೆಗೆ ಸ್ಥಳಾವಕಾಶ ಇರಲಿದ್ದು, 4,500 ಜನರಿಗೆ ನೇರವಾಗಿ ಉದ್ಯೋಗ ದೊರೆಯಲಿದೆ ಎಂದರು.

ವಾರ್ಷಿಕ 27,000 ಟನ್‌ ಮೀನು ಮತ್ತು ಇತರೆ ಸಮುದ್ರ ಉತ್ಪನ್ನಗಳ ನಿರ್ವಹಣೆಯ ಸಾಮರ್ಥ್ಯ‌ ಹೊಂದಿರಲಿದ್ದು, ₹ 170 ಕೋಟಿ ವಹಿವಾಟು ನಡೆಯಲಿದೆ. ಕುಳಾಯಿ ಬಂದರು ನಿರ್ಮಾಣದ ಬಳಿಕ ಮಂಗಳೂರು ಬಂದರಿನಲ್ಲಿ ದಟ್ಟಣೆ ತಗ್ಗಲಿದೆ. ಮೀನುಗಾರರ ಆದಾಯವೂ ಹೆಚ್ಚಲಿದೆ ಎಂದು ತಿಳಿಸಿದರು.

ಸಾಗರ ಮಾಲಾ ಯೋಜನೆಯಲ್ಲಿ ದೇಶದಲ್ಲಿ ಒಟ್ಟು ₹ 4,142 ಕೋಟಿ ವೆಚ್ಚದಲ್ಲಿ 28 ಬಂದರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯಡಿ ಕರ್ನಾಟಕದಲ್ಲಿ ನಾಲ್ಕು ಬಂದರುಗಳನ್ನು ನಿರ್ಮಿಸಲಾಗುತ್ತಿದೆ. ಬಂದರು ನಿರ್ಮಾಣದ ಜೊತೆಗೆ ಮೀನುಗಾರರಿಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT