ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚ್ ದಾಳಿಗೆ ಸಿಬಿಐ ತನಿಖೆ ಸೂಕ್ತವಲ್ಲ: ನ್ಯಾ.ಸಲ್ಡಾನ

Last Updated 25 ಫೆಬ್ರುವರಿ 2011, 7:15 IST
ಅಕ್ಷರ ಗಾತ್ರ

ಮಂಗಳೂರು: ‘ಚರ್ಚ್ ದಾಳಿ ವಿಚಾರಣೆಯನ್ನು ಸಿಬಿಐಗೆ ಒಪ್ಪಿಸುವುದು ಅಷ್ಟೇನೂ ಸಮಂಜಸವಲ್ಲ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಎಫ್.ಸಲ್ಡಾನ ಅಭಿಪ್ರಾಯಪಟ್ಟರು.ಚರ್ಚ್ ದಾಳಿ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಹಾಗೂ ಟ್ರಾಸ್ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯ ಕರ್ನಾಟಕ ವಿಭಾಗದ ನೇತೃತ್ವದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ವರದಿ ಆಧಾರಿತ ಪುಸ್ತಕವನ್ನು ನಗರದಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಟೆಲಿಕಾಂ ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಕೆಲಸದ ಒತ್ತಡ ಎದುರಿಸುತ್ತಿದೆ. ಸಿಬ್ಬಂದಿ ಕೊರತೆ ಇದೆ. ಇಂಥ ಸಂದರ್ಭದಲ್ಲಿ 2008ರ ಚರ್ಚ್‌ದಾಳಿ ತನಿಖೆ ನಡೆಸುವಂತೆ ಕೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ’ ಎಂದರು.‘ನ್ಯಾ.ಸೋಮಶೇಖರ ಆಯೋಗ ಸಾಕಷ್ಟು ಕಾಲಹರಣ ಮಾಡಿದೆ. ಬಹುತೇಕ ಸಾಕ್ಷ್ಯಗಳನ್ನೂ ಕಳೆದುಕೊಂಡಿದ್ದೇವೆ. ಈಗ ಸಿಬಿಐ ತನಿಖೆ ಆರಂಭಿಸಿದರೆ ಅದರಿಂದ ಹೆಚ್ಚಿನ ಪ್ರಯೋಜನ ಆಗದು’ ಎಂದರು.

‘ರಾಜ್ಯದಲ್ಲಿ ಇಂಥ ದಾಳಿ ಹಿಂದೆಂದೂ ನಡೆದಿರಲಿಲ್ಲ. ಬಿಜೆಪಿ ಸರ್ಕಾರ ಪ್ರಾಯೋಜಿತ ದಾಳಿ ಎಂಬುದರಲ್ಲಿ ಸಂದೇಹವೇ ಇಲ್ಲ. ಗಲಭೆ ವೇಳೆ ಬಳಸಲಾದ ಕಲ್ಲುಗಳನ್ನೂ ದುಷ್ಕರ್ಮಿಗಳು ಹೊರಗಿನಿಂದ ಚೀಲದಲ್ಲಿ ತುಂಬಿ ತಂದಿದ್ದರು. ಪೊಲೀಸರು ಅವಧಿ ಮೀರಿದ ವಿಷಕಾರಿ ಅಶ್ರುವಾಯು ಶೆಲ್ ಸಿಡಿಸಿದ್ದರಿಂದ 176 ಮಂದಿ ಆಸ್ಪತ್ರೆ ಸೇರಿದ್ದರು. ಕೆಲವು ಪೊಲೀಸ್ ಅಧಿಕಾರಿಗಳ ವರ್ತನೆಯೂ ಅತಿರೇಕದಿಂದ ಕೂಡಿತ್ತು’ ಎಂದು ಎರಡು ವರ್ಷ ಹಿಂದಿನ ಘಟನೆಗಳನ್ನು ವಿಶ್ಲೇಷಿಸಿದರು. ಚರ್ಚ್ ದಾಳಿ ವೇಳೆ ಬಳಸಲಾದ ಕಲ್ಲು, ಅಶ್ರುವಾಯು ಶೆಲ್‌ಗಳನ್ನು ಪ್ರದರ್ಶಿಸಿದರು.

ಸತ್ಯದರ್ಶಿನಿ ಆಘಾತಕಾರಿ: ‘ಸತ್ಯದರ್ಶಿನಿ ಪುಸ್ತಕದಲ್ಲಿರುವ ಸಾಹಿತ್ಯ ನಿಜಕ್ಕೂ ಆಘಾತಕಾರಿ. ಆ ಪುಸ್ತಕ ನಿಜಕ್ಕೂ ಕಾನೂನು ವಿರೋಧಿ. ದಾಳಿಗೆ ಈ ಪುಸ್ತಕ ಹಂಚಿದ್ದು ಕಾರಣ ಎಂಬುದರಲ್ಲಿ ಹುರುಳಿಲ್ಲ. ಪೊಲೀಸ್ ಇಲಾಖೆಗೇ ಈ ಪುಸ್ತಕದ ಮೂಲಪ್ರತಿ ಒದಗಿಸಲು ಸಾಧ್ಯವಾಗಿಲ್ಲ. ಅದನ್ನು ಯಾರು ಹಂಚಿದ್ದು ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ತಮಗೆ ದೊರಕಿದ್ದು ಅದರ ಛಾಯಾ ಪ್ರತಿ ಮಾತ್ರ’ ಎಂದರು.

‘ಎಲ್ಲಿದೆ ಸಾಕ್ಷ್ಯ?’: ‘ವಿದೇಶಿ ಹಣದಿಂದ ಮತಾಂತರ ನಡೆಸಲಾಗುತ್ತಿದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಎಲ್ಲಿ ಮತಾಂತರ ನಡೆಯುತ್ತಿದೆ. ಅದಕ್ಕೆ ಯಾವ ಸಂಸ್ಥೆಯಿಂದ ಯಾವಾಗ ಹಣ ಬಂತು? ಮತಾಂತರ ನಡೆಸುತ್ತಿರುವವರು ಯಾರು? ಈ ಬಗ್ಗೆ ಯಾರ ಬಳಿ ದಾಖಲೆಗಳಿವೆ? ಎಂದು ಸಲ್ಡಾನ ಪ್ರಶ್ನಿಸಿದರು.

‘ಮತಾಂತರ ಬಗ್ಗೆ ರಾಜ್ಯದಲ್ಲಿ ಎಷ್ಟು ಪ್ರಕರಣ ದಾಖಲಿಸಲಾಗಿದೆ. ಅವುಗಳಿಗಿರುವ ಪುರಾವೆಗಳೇನು ಎಂಬುದಕ್ಕೆ ಎಲ್ಲೂ ಸ್ಪಷ್ಟ ಉತ್ತರವಿಲ್ಲ. ನ್ಯಾ.ಸೋಮಶೇಖರ ಆಯೋಗ ಇಂಥ ಗಂಭೀರ ಆರೋಪ ಮಾಡುವುದಕ್ಕೆ ಮುನ್ನ ಈ ಬಗ್ಗೆ ಯೋಚಿಸಬೇಕಿತ್ತು. ಸಾಕಷ್ಟು ಪುರಾವೆ ಕಲೆಹಾಕಬೇಕಿತ್ತು’ ಎಂದರು.ಕ್ರೈಸ್ತ ಮುಖಂಡ ಅಲ್ವಿನ್ ಕುಲಾಸೊ, ಕರ್ನಾಟಕ ಮಿಷನ್ ನೆಟ್‌ವರ್ಕ್ ಅಧ್ಯಕ್ಷ ವಾಲ್ಟರ್ ಮಾಬೆನ್, ಪಿಯುಸಿಎಲ್‌ನ ಡೆನ್ನಿಸ್ ಡೆಸಾ, ಸುರೇಶ್ ಭಟ್, ಮಹಮ್ಮದ್ ಕಕ್ಕಿಂಜೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT