ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾವಂತರಿಂದಲೇ ಸಂಚಾರ ನಿಯಮ ಉಲ್ಲಂಘನೆ’

ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ‘ಟ್ರಾಫಿಕ್ ಪಾಠಶಾಲೆ’ಗೆ ಚಾಲನೆ
Last Updated 14 ಮೇ 2019, 14:05 IST
ಅಕ್ಷರ ಗಾತ್ರ

ಮಂಗಳೂರು: ಸಂಚಾರ ನಿಯಮ ಪಾಲನೆ ನಿಟ್ಟಿನಲ್ಲಿ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಹಮ್ಮಿಕೊಂಡಿದ್ದ ‘ಟ್ರಾಫಿಕ್ ಪಾಠಶಾಲೆ’ಗೆ ಸಂಚಾರ ಪೂರ್ವ ಠಾಣೆ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್ ಮಂಗಳವಾರ ಬ್ಯಾಂಕ್‌ನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿ ಅವರು, ಸಂಚಾರ ನಿಯಮವನ್ನು ವಿದ್ಯಾವಂತರೇ ಉಲ್ಲಂಘಿಸುತ್ತಿದ್ದಾರೆ. ಇದು ವಿಷಾದನೀಯ. ಪ್ರತಿಯೊಬ್ಬ ನಾಗರಿಕನೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಹೊಂದಿರಬೇಕು. ಆಗ ಮಾತ್ರ ಅಪಘಾತ, ಸಾವು-ನೋವುಗಳ ಪ್ರಕರಣವನ್ನು ಇಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ‘ಟ್ರಾಫಿಕ್ ಪಾಠಶಾಲೆ’ ಆರಂಭಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಚಾಲನೆ ವೇಳೆಯಲ್ಲಿ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್‌ ಧರಿಸುವುದು, ಸೂಚನಾ ನಿಯಮಗಳನ್ನು ಪಾಲನೆ ಮಾಡುವಂತೆ ಜಾಗೃತಿ ಮೂಡಿಸಲು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಉದ್ಯೋಗಿಗಳು ಮತ್ತು ಸ್ವಯಂ ಸೇವಕರ ತಂಡವು ಟ್ರಾಫಿಕ್ ಸಿಗ್ನಲ್ ವೃತ್ತದ ಬಳಿ ಭಿತ್ತಿ ಪತ್ರ ಪ್ರದರ್ಶಿಸಲಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ವೃತ್ತ ಮುಖ್ಯಸ್ಥ ರಜನೀಶ್ ಬರುವಾ ಹೇಳಿದರು.

ಎಚ್‌ಡಿಎಫ್‌ಸಿ ಬ್ಯಾಂಕ್ ಮಂಗಳೂರು ಪೊಲೀಸರೊಂದಿಗೆ ನಗರದಲ್ಲಿ ರಸ್ತೆ ಸುರಕ್ಷತೆ ಉಪ ಕ್ರಮ ‘ಟ್ರಾಫಿಕ್ ಪಾಠಶಾಲಾ’ಗೆ ಸಹಯೋಗ ಹೊಂದಿದ್ದು, ಮಂಗಳೂರಿನ ರಸ್ತೆಗಳನ್ನು ಸುರಕ್ಷಿತಗೊಳಿಸಲು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಿದೆ. ಇದರಿಂದಾಗಿ 8.5 ಲಕ್ಷ ಮಂದಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ನಗರದ ಪ್ರಮುಖ ರಸ್ತೆ ತಿರುವುಗಳಾದ ಹಂಪನಕಟ್ಟೆ ಸಿಗ್ನಲ್, ಜ್ಯೋತಿ ಸರ್ಕಲ್, ಮಹಾವೀರ್ ಸರ್ಕಲ್, ಟೌನ್ ಹಾಲ್ ಮಂಗಳೂರು, ಬಲ್ಮಠ ಜಂಕ್ಷನ್, ನಂತೂರ್ ಜಂಕ್ಷನ್, ಮಂಗಳೂರು ರೈಲ್ವೆ ನಿಲ್ದಾಣ, ಮಂಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಕೆಪಿಟಿ ಜಂಕ್ಷನ್, ಬಿಜೈ ಮುಖ್ಯರಸ್ತೆ, ಎಂ.ಜಿ.ರಸ್ತೆ, ನೆಹರೂ ಅವೆ ಕ್ರಾಸ್ ರೋಡ್, ಕೂಳೂರು ಫೆರ್ರಿ ರಸ್ತೆ, ಬಜ್ಪೆ ಮುಖ್ಯ ರಸ್ತೆ, ಬಂದರ್ ಅಜೀಜುದ್ದೀನ್ ರಸ್ತೆ, ಸೆಂಟ್ರಲ್ ಮಾರ್ಕೆಟ್, ಪ್ಲಾಟಿನಂ ಚಿತ್ರಮಂದಿರ, ಫಳ್ನೀರ್ ರೋಡ್, ಜೆಪ್ಪುಬಪ್ಪಾಲ್ ರಸ್ತೆ, ನಂದಿಗುಡ್ಡ ರಸ್ತೆ-ಸರ್ಕಲ್‌ಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಜಾಗೃತಿ ಮೂಡಿಸುವ ರ‍್ಯಾಲಿಯಲ್ಲಿ ಸ್ವಯಂ ಸೇವಕರ ತಂಡ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿಗಳಿದ್ದು, ಎಲ್ಲ ಪ್ರಮುಖ ಮತ್ತು ಒತ್ತಡದ ಟ್ರಾಫಿಕ್ ವೃತ್ತಗಳಲ್ಲಿ ಸಂಚರಿಸಲಿದೆ. ಈ ಸ್ವಯಂ ಸೇವಕರು ‘ಜನರಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಿ’ ಎಂದು ಹೇಳುವ ಸಂದೇಶ ಹೊತ್ತ ಭಿತ್ತಿ ಪತ್ರಗಳನ್ನು ಹಿಡಿದು ಸಂಚರಿಸಲಿದ್ದಾರೆ. ಟ್ರಾಫಿಕ್ ಶಿಸ್ತು ಅನುಸರಿಸುವ ಚಾಲಕರಿಗೆ ಸ್ವಯಂ ಸೇವಕರು ಪುರಸ್ಕಾರಗಳನ್ನು ನೀಡುವ ಮೂಲಕ ಅವರನ್ನು ಉತ್ತೇಜಿಸಲಿದ್ದಾರೆ ಎಂದರು.

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರನ್ನು ‘ಟ್ರಾಫಿಕ್ ಪಾಠಶಾಲಾ’ದಲ್ಲಿ ದಾಖಲಿಸಿಕೊಂಡು ಅವರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಿದ್ದಾರೆ. ಇದು ಮೇ 16 ರವರೆಗೆ ನಡೆಯಲಿದೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಬ್ಯಾಂಕ್‌ನ ವೃತ್ತ ಮುಖ್ಯಸ್ಥ ರಜನೀಶ್ ಬರುವಾ ಹೇಳಿದರು.

ಚಾಲನೆ ಸಂದರ್ಭ ಹೆಲ್ಮೆಟ್ ಧರಿಸುವುದು,ಸೀಟ್ ಬೆಲ್ಟ್‌ ಧರಿಸುವುದು, ಸಿಗ್ನಲ್‌ಗಳು ಮತ್ತು ಲೇನ್ ಶಿಸ್ತಿಗೆ ಬದ್ಧರಾಗಿರುವುದು, ಚಾಲನೆ ಸಂದರ್ಭ ಮೊಬೈಲ್ ಬಳಸದೇ ಇರುವುದು, ಎಲ್ಲ ಅಗತ್ಯ ದಾಖಲೆ ಒಂದು ಕಡೆ ಇರಿಸಿಕೊಳ್ಳುವುದು, ಮದ್ಯಪಾನ ಮಾಡಿ ಚಾಲನೆ ಮಾಡದಿರುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಚಿದಾನಂದ ಶೆಟ್ಟಿ, ಆರ್‌ಜೆ ಅಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT