ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಕ್ಷ ಸಂಘಟನೆಯಲ್ಲಿ ಮೈಗಳ್ಳತನಕ್ಕೆ ಅವಕಾಶವಿಲ್ಲ’

Last Updated 23 ಸೆಪ್ಟೆಂಬರ್ 2017, 9:10 IST
ಅಕ್ಷರ ಗಾತ್ರ

ಮಂಗಳೂರು: ‘ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಪದಾಧಿಕಾರಿಗಳ ಹುದ್ದೆಯಲ್ಲಿರುವವರು ಪಕ್ಷ ಸಂಘಟನೆಯಲ್ಲಿ ಮೈಗಳ್ಳತನ ತೋರಬಾರದು. ಹಾಗೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಮೈಸೂರು ವಿಭಾಗದ ಕಾಂಗ್ರೆಸ್‌ ಪಕ್ಷದ ಉಸ್ತುವಾರಿಯಾಗಿರುವ ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥ್‌ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ನಡೆದ ಚುನಾಯಿತ ಪ್ರತಿನಿಧಿಗಳು ಮತ್ತು ಪಕ್ಷದ ಪ್ರತಿನಿಧಿಗಳ ಜೊತೆಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಪಕ್ಷದ ರಾಷ್ಟ್ರಮಟ್ಟದ ನಾಯಕರು ಕರ್ನಾಟಕದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸ್ಥಳೀಯ ಮುಖಂಡರು ಹೆಚ್ಚು ಕೆಲಸ ಮಾಡಬೇಕಿದೆ. ಈಗ ಜಿಲ್ಲೆಯ ಎಲ್ಲ 1,766 ಮತಗಟ್ಟೆಗಳಲ್ಲಿ ಪಕ್ಷದ ಸಮಿತಿಗಳನ್ನು ನೇಮಕ ಮಾಡಿರುವುದು ಶ್ಲಾಘನೀಯ. ಇದೇ ವೇಗವನ್ನು ಚುನಾವಣೆಯವರೆಗೂ ಕಾಯ್ದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ‘ಪಕ್ಷ ಸಂಘಟನೆಯ ಕಾರ್ಯಕ್ರಮಗಳಲ್ಲಿ ಎಲ್ಲ ಮುಖಂಡರು, ಕಾರ್ಯಕರ್ತರು ಕಡ್ಡಾಯವಾಗಿ ಕೆಲಸ ಮಾಡಬೇಕು. ಉದಾಸೀನ ಮಾಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಮುಂದಿನ 15 ದಿನಗಳ ಕಾಲ ಮನೆ ಮನೆಗೆ ಕಾಂಗ್ರೆಸ್ ಅಭಿಯಾನದಡಿ ಎಲ್ಲ ಮನೆಗಳಿಗೆ ಭೇಟಿ ನೀಡಿ, ಪ್ರತಿ ಮನೆಯ ಸದಸ್ಯರ ಅಭಿಪ್ರಾಯ ಸಂಗ್ರಹಿಸಬೇಕು. ಅದನ್ನು ಕೆಪಿಸಿಸಿಗೆ ವರದಿ ರೂಪದಲ್ಲಿ ಕಳುಹಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್ ಮಾತನಾಡಿ, ‘ಮನೆ ಮನೆಗೆ ಕಾಂಗ್ರೆಸ್ ಅಭಿಯಾನದಲ್ಲಿ ಎಲ್ಲರೂ ಕೆಲಸ ಮಾಡಬೇಕು. ಎಷ್ಟೇ ದೊಡ್ಡ ಪದಾಧಿಕಾರಿ, ಮುಖಂಡ ಅಥವಾ ಕಾರ್ಯಕರ್ತರಿದ್ದರೂ ವಿನಾಯಿತಿ ಇಲ್ಲ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಇಬ್ರಾಹಿಂ ಮಾತನಾಡಿದರು. ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕರಾದ ಜೆ.ಆರ್. ಲೋಬೊ, ಮೊಯಿದ್ದೀನ್ ಬಾವ, ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್, ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಎಂ.ಎಸ್. ಮುಹಮ್ಮದ್, ಮಮತಾ ಗಟ್ಟಿ, ನವೀನ್ ಡಿಸೋಜ, ಶಶಿಧರ್ ಹೆಗ್ಡೆ, ಕಣಚೂರು ಮೋನು, ಎ.ಸಿ. ಭಂಡಾರಿ, ಬಿ.ಎಚ್. ಖಾದರ್, ಸುರೇಶ್ ಬಳ್ಳಾಲ್, ಕೋಡಿಜಾಲ್ ಇಬ್ರಾಹಿಂ, ಶಾಲೆಟ್ ಪಿಂಟೋ, ಕೆ.ಕೆ. ಶಾಹುಲ್ ಹಮೀದ್, ಅಪ್ಪಿ, ಮನೋಹರ್ ಶೆಟ್ಟಿ, ಉಮಾನಾಥ್ ಶೆಟ್ಟಿ, ಲೋಕೇಶ್ ಹೆಗ್ಡೆ, ಎಚ್.ಎಂ. ಅಶ್ರಫ್, ಧರಣೇಂದ್ರ ಕುಮಾರ್, ಎನ್.ಎಸ್. ಕರೀಂ, ಶೇಖರ್ ಕುಕ್ಕೇಡಿ, ಮಲಾರ್ ಮೋನು, ಚಂದ್ರಹಾಸ ಕರ್ಕೇರ, ಆರ್.ಕೆ.ಪೃಥ್ವಿರಾಜ್, ಎ.ಸಿ. ವಿನಯರಾಜ್, ಡಾ.ಎಂ.ಬಿ. ಅಮಾನುಲ್ಲಾ, ಪ್ರತಿಭಾ ಕುಳಾಯಿ, ಮಿಥುನ್ ರೈ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT