ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮದ ಹೊರೆ ಕಾಣಿಕೆ ಮೆರವಣಿಗೆ 14ಕ್ಕೆ

Last Updated 10 ಅಕ್ಟೋಬರ್ 2012, 8:10 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶತಮಾನೋತ್ಸವ (1912- 2012) ಹಾಗೂ ಬ್ರಹ್ಮಕಲಶೋತ್ಸವವು ದಸರಾ ಸಂಭ್ರಮದೊಂದಿಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇದೇ 14ರಂದು ಭಕ್ತರು ಬೃಹತ್ ಮಟ್ಟದ `ಹಸಿರು ಹೊರೆ ಕಾಣಿಕೆ~ ಕ್ಷೇತ್ರಕ್ಕೆ ಅರ್ಪಿಸಲಿದ್ದಾರೆ ಎಂದು ದೇಗುಲ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕರ್ಣನಾಥ ಕ್ಷೇತ್ರವನ್ನು ಮಾನವತಾವಾದಿ ಸಂತ ನಾರಾಯಣಗುರುಗಳು 100 ವರ್ಷಗಳ ಹಿಂದೆ ಹುಟ್ಟು ಹಾಕಿದರು. ಈ ಸಂದರ್ಭವನ್ನು ಸ್ಮರಣೀಯವಾಗಿಸಲು ಈಗಾಗಲೇ ಸಿದ್ಧತೆಗಳು ನಡೆದಿವೆ ಎಂದರು.

14ರಂದು ಮಧ್ಯಾಹ್ನ 3ಕ್ಕೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ನೆಹರು ಮೈದಾನದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಮೆರವಣಿಗೆಯಲ್ಲಿ ಸುಮಾರು ಒಂದು ಸಾವಿರದಷ್ಟು ವಾಹನಗಳು ಭಾಗವಹಿಸಲಿದೆ.
 
ಒಂದು ಸಾವಿರ ಯುವಕರಿಂದ ಹಳದಿ ಬಣ್ಣದ ಧ್ವಜ ಪಥ ಸಂಚಲನ ನಡೆಯಲಿದೆ. ವಿವಿಧ ಬಗೆಯ ವಾದ್ಯ ಘೋಷಗಳು, ನೃತ್ಯ ತಂಡಗಳು ಭಾಗವಹಿಸಲಿವೆ. ರಾಜ್ಯದ ಹಲವು ಜಿಲ್ಲೆಗಳೂ ಸೇರಿದಂತೆ ದೂರದ ಮುಂಬೈ, ಅಹಮದಾಬಾದ್, ಬರೋಡ ನಗರಗಳಿಂದಲೂ ಭಕ್ತರು ಹಸಿರು ಹೊರೆಕಾಣಿಕೆ ಅರ್ಪಿಸಲಿದ್ದಾರೆ. ದಕ್ಷಿಣ- ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಮುಸ್ಲಿಂ ಹಾಗೂ ಕ್ರೈಸ್ತ ಸಮಾಜದವರೂ ಹಸಿರು ಹೊರೆ ಕಾಣಿಕೆ ನೀಡಲಿದ್ದಾರೆ ಎಂದು ಹರಿಕೃಷ್ಣ ತಿಳಿಸಿದರು.

ಮೆರವಣಿಗೆ ನೆಹರು ಮೈದಾನದಿಂದ ಹೊರಟು ಎ.ಬಿ. ಶೆಟ್ಟಿ ವೃತ್ತ, ಕೆ.ಎಸ್.ರಾವ್ ರಸ್ತೆ, ಪಿ.ವಿ.ಎಸ್ ವೃತ್ತ, ಎಂ.ಜಿ.ರಸ್ತೆ, ಲೇಡಿಹಿಲ್, ಮಣ್ಣಗುಡ್ಡೆಯಾಗಿ ಕುದ್ರೋಳಿಗೆ ಆಗಮಿಸಲಿದೆ.14ರಿಂದ 25ರವರೆಗೆ ಕ್ಷೇತ್ರದಲ್ಲಿ ಶಿವಗಿರಿ ಮಠದ ಪ್ರಕಾಶನಂದ ಸ್ವಾಮೀಜಿ ಹಾಗೂ ಲಕ್ಷ್ಮಣ ಶಾಂತಿ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿಗಳು ನಡೆಯಲಿದ್ದು, ನವರಾತ್ರಿ ಮಹೋತ್ಸವ 16ರಂದು ನವದುರ್ಗೆಯರ ಹಾಗೂ ಶಾರದಾ ಮಾತೆಯ ಪ್ರತಿಷ್ಠೆಯೊಂದಿಗೆ ಆರಂಭವಾಗಿ 25ರವರೆಗೆ ಜರುಗಲಿದೆ.

ಗೋಷ್ಠಿಯಲ್ಲಿ ದೇಗುಲ ಆಡಳಿತ ಸಮಿತಿಯ ಎಚ್.ಎಸ್.ಸಾಯಿರಾಂ, ರಾಘವೇಂದ್ರ ಕುಳೂರು, ಬಿ.ಮಾಧವ ಸುವರ್ಣ, ಪದ್ಮರಾಜ್ ಆರ್. ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT