ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘108’ರ ಸರ್ವರ್‌ ಸಮಸ್ಯೆ: ಪರ್ಯಾಯ ವ್ಯವಸ್ಥೆ

ಅರೆ ದುರಸ್ತಿಯಲ್ಲಿ ಆರೋಗ್ಯ ಕವಚ l ಸೋಮವಾರ ಸರಿದಾರಿಗೆ ಬರುವ ನಿರೀಕ್ಷೆ
Last Updated 26 ಸೆಪ್ಟೆಂಬರ್ 2022, 4:18 IST
ಅಕ್ಷರ ಗಾತ್ರ

ದಾವಣಗೆರೆ: ಆಪತ್ಕಾಲಕ್ಕೆ ನೆರವಾಗಲು ಇರುವ 108 ಆರೋಗ್ಯ ಕವಚಕ್ಕೆ ಅನಾರೋಗ್ಯ ಕಾಡಿದೆ. ಶುಕ್ರವಾರ ರಾತ್ರಿಯಿಂದ ಸರ್ವರ್‌ ಕೈಕೊಟ್ಟಿದೆ. ಭಾನುವಾರ ಮಧ್ಯಾಹ್ನಕ್ಕೆ ಸ್ವಲ್ಪ ಸರಿಯಾಗಿದ್ದು, ಸೋಮವಾರ ಸಂಪೂರ್ಣ ಸರಿಯಾಗಲಿದೆ ಎಂಬ ವಿಶ್ವಾಸದಲ್ಲಿ ಆರೋಗ್ಯ ಇಲಾಖೆ ಇದೆ. 108ಕ್ಕೆ ಕರೆ ಹೋಗದೇ ಇದ್ದರೆ ಸಂಪರ್ಕಿಸಲು ಜಿಲ್ಲಾ ಮಟ್ಟದಲ್ಲಿ ಪರ್ಯಾಯವಾಗಿ ಮೊಬೈಲ್‌ ಸಂಖ್ಯೆಗಳನ್ನು ನೀಡಲಾಗಿದೆ.

ತುರ್ತು ಸಂದರ್ಭದಲ್ಲಿ ರೋಗಿಗಳನ್ನು, ಅಪಘಾತಕ್ಕೆ ಈಡಾದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಜನರು ತಕ್ಷಣ 108ಕ್ಕೆ ಕರೆ ಮಾಡುತ್ತಾರೆ. ಆದರೆ, ಎರಡು ದಿನಗಳಿಂದ ಕರೆ ಮಾಡಿದಾಗ ರಿಂಗ್‌ ಆಗುವುದು ಕೇಳಿಸುತ್ತಿತ್ತು. ಕಂಟ್ರೋಲ್ ರೂಂನಲ್ಲಿ ರಿಂಗ್ ಆಗುತ್ತಿರಲಿಲ್ಲ. ಹಾಗಾಗಿ ಆರೋಗ್ಯ ಕವಚದ ವಾಹನಗಳು ಬಾರದೇ ಸಮಸ್ಯೆಯಾಗುತ್ತಿತ್ತು.

‘ಸರ್ವರ್‌ನ ಮದರ್‌ಬೋರ್ಡ್‌ ಕೆಟ್ಟು ಹೋಗಿರುವುದು ಕಂಡುಬಂದಿತ್ತು. ಮದರ್‌ಬೋರ್ಡ್‌ ತೆಗೆದು ಬ್ಯಾಕ್‌ಅಪ್‌ನಲ್ಲಿ ಸರ್ವರ್‌ ನಡೆಯುತ್ತಿದೆ. ಹಾಗಾಗಿ ಭಾನುವಾರ ಮಧ್ಯಾಹ್ನದ ಬಳಿಕ ಸರಿಯಾಗಿದೆ. ಸೋಮವಾರ ಹೊಸ ಪ್ಯಾನಲ್‌ ಬೋರ್ಡ್‌ ಅಳವಡಿಸಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಜನತೆಗೆ ಯಾವುದೇ ಸಮಸ್ಯೆಯಾಗಿಲ್ಲ. ಸಾವು ನೋವು ಉಂಟಾಗಿಲ್ಲ. ಹೊಸ ಮದರ್‌ಬೋರ್ಡ್‌ ಅಳವಡಿಸುವಾಗ ಕರೆ ಸಂಪರ್ಕದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಆರೋಗ್ಯ ಸೇವೆ ಆಯುಕ್ತ ರಂದೀಪ್‌ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ತಂಡ ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಶುಕ್ರವಾರದಿಂದ 36 ಗಂಟೆಗಳ ಕಾಲ ಸಮಸ್ಯೆ ತಲೆದೋರಿತ್ತು. ಈಗ ಸರಿ ಮಾಡಲಾಗಿದೆ. ಸರ್ವರ್‌ ಸಮಸ್ಯೆಯಾದರೆ ಬೇಗ ಸರಿಪಡಿಸಬಹುದು. ಆದರೆ, ರಾಜ್ಯದಲ್ಲಿ ಇರುವ ಎಲ್ಲ 108 ಸುರಕ್ಷಾ ಕವಚ ವಾಹನಗಳು ಓಡಾಡುವಂತೆ ಮಾಡುವುದು ಮುಖ್ಯ. ಒಟ್ಟು 711 ವಾಹನಗಳಿವೆ. ಅದರಲ್ಲಿ 450 ಮಾತ್ರ ಓಡಾಡುತ್ತಿವೆ. ಉಳಿದವುಗಳಿಗೆ ಟೈರ್‌ ಇಲ್ಲ, ದುರಸ್ತಿಗೆ ಕ್ರಮವಿಲ್ಲ, ಚಾಲಕರಿಲ್ಲ, ಸಿಬ್ಬಂದಿ ಇಲ್ಲ ಎಂಬ ಹತ್ತುಹಲವು ಕಾರಣಗಳಿಂದ ಮೂಲೆ ಸೇರಿವೆ.ಸರ್ಕಾರ ಎಲ್ಲ ವಾಹನಗಳೂ ಓಡಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಕವಚ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT