ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1346 ಮನೆ ರದ್ದು: ಕ್ರಮದ ಭರವಸೆ

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ
Last Updated 17 ಏಪ್ರಿಲ್ 2021, 9:00 IST
ಅಕ್ಷರ ಗಾತ್ರ

ದಾವಣಗೆರೆ:ಪ್ರಧಾನ ಮಂತ್ರಿ ಆವಾಸ್ ನಗರ ಯೋಜನೆಯಡಿ 1346 ಮನೆಗಳನ್ನು ರದ್ದು ಪಡಿಸಲಾಗಿದೆ. ಈ ಸಂಬಂಧ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆಯಲಾಗಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಹೇಳಿದರು.

ಫಲಾನುಭವಿಗಳಿಗೆ ಅನ್ಯಾಯ ಆಗಬಾರದು. ಶೀಘ್ರ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ ಸಂಸದ ಜಿ.ಎಂ. ಸಿದ್ದೇಶ್ವರ, ವಸತಿ ನಿಗಮದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಯೋಜನೆಯಡಿ ಕೇಂದ್ರ ಸರ್ಕಾರದಿಂದ ₹ 1.50 ಲಕ್ಷ ಅನುದಾನ ನೀಡಲಾಗುತ್ತದೆ. ರಾಜ್ಯ ಸರ್ಕಾರದಿಂದ ಅನುದಾನ ಬರುತ್ತಿಲ್ಲ. 215 ಜನ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿಗಮಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ನಜ್ಮಾ ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಫಲಾನುಭವಿಗಳಿಗೆ ಅನುದಾನ ಬಂದಿಲ್ಲ. ಮಧ್ಯವರ್ತಿಗಳು ಹಣಕ್ಕೆ ಬೇಡಿಕೆ ಇಡುತ್ತಾರೆ ಎಂದು ಚರ್ಚೆಯಾದಾಗ, ಅಧಿಕಾರಿಗಳು ವಸ್ತುಸ್ಥಿತಿ ವಿಚಾರಿಸಬೇಕುಎಂದು ಸಂಸದರು ತಾಕೀತು ಮಾಡಿದರು.

ಆಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಎಲ್ಲ ತಾಲ್ಲೂಕು ಪಂಚಾಯಿತಿ ಇಒಗಳು ಖುದ್ದಾಗಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು. ಏಪ್ರಿಲ್‌ 30ರೊಳಗೆ ವರದಿ ನೀಡಬೇಕು’ ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಮನೆಗಳ ಗುರಿ ನಿಗದಿಪಡಿಸುವಾಗ ಅಲ್ಪಸಂಖ್ಯಾತರು ಕಡಿಮೆ ಇದ್ದರೆ ಅಂತಹ ಮನೆಗಳನ್ನು ಬೇರೆ ವರ್ಗದ ಫಲಾನುಭವಿಗಳಿಗೆ ನೀಡಬಹುದಾ ಎಂಬ ವಿಷಯದ ಬಗ್ಗೆ ಪರಿಶೀಲಿಸುವಂತೆ ಸಂಸದರು ಹೇಳಿದರು.

ಈ ಬಗ್ಗೆ ವಾರದೊಳಗೆ ಎಲ್ಲ ಇಒಗಳು ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಎಸಿಬಿ ತನಿಖೆ: ಜಗಳೂರು ತಾಲ್ಲೂಕಿನ ಮುಷ್ಟಿಗರ ಹಳ್ಳಿಯಲ್ಲಿ ಒಂದೇ ಮುಸ್ಲಿಂ ಕುಟುಂಬ ವಾಸವಿದ್ದು, ವಸತಿ ಯೋಜನೆಯಡಿ 4 ಫಲಾನುಭವಿಗಳಿಗೆ ಮನೆ ನಿರ್ಮಿಸಲು ಹಣ ಪಾವತಿ ಮಾಡಲಾಗಿದೆ. ಗ್ರಾಮದಲ್ಲಿ ವಸತಿ ಯೋಜನೆಯಡಿ ಮಂಜೂರಾದ 7 ಫಲಾನುಭವಿಗಳಲ್ಲಿ ಇಬ್ಬರು ಮಾತ್ರ ವಾಸವಾಗಿದ್ದಾರೆ. ಹಣ ದುರುಪಯೋಗ ಸಂಬಂಧ ಎಸಿಬಿ ತನಿಖೆ ನಡೆಯುತ್ತದೆ ಎಂದು ಜಗಳೂರು ತಾಲ್ಲೂಕು ಪಂಚಾಯಿತಿ ಇಒ ಹೇಳಿದರು.

ಶಾಸಕ ಪ್ರೊ.ಎನ್‌.ಲಿಂಗಣ್ಣ, ‘ಶಾಲೆಗಳಲ್ಲಿ ಅಗತ್ಯ ಸೌಲಭ್ಯ ಇಲ್ಲದ ಬಗ್ಗೆ ಹಲವು ಬಾರಿ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದೇನೆ. ಏನು ಕ್ರಮ ಕೈಗೊಂಡಿದ್ದೀರಿ’ ಎಂಬುದನ್ನು ವರದಿ ನೀಡಿ ಎಂದು ಸೂಚಿಸಿದರು.

ಜಿಲ್ಲೆಯಎಲ್ಲ ಶಾಲೆಗಳ ಸೌಲಭ್ಯ ಸಂಬಂಧ ಗಮನಹರಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಜಲಜೀವನ್‌ ಮಿಷನ್‌ ಅಡಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಪೂರೈಕೆ ಸಂಬಂಧ ಜಿಲ್ಲೆಯ 370 ಗ್ರಾಮಗಳ ಪೈಕಿ ಚನ್ನಗಿರಿ ತಾಲ್ಲೂಕಿನ 5 ಗ್ರಾಮಗಳಲ್ಲಿ ಏಕೆ ಕಾಮಗಾರಿ ಕೈಗೊಂಡಿಲ್ಲ ಎಂದು ಸಂಸದರು ಪ್ರಶ್ನಿಸಿದರು.

ಐದು ಗ್ರಾಮಗಳಲ್ಲಿ ನಲ್ಲಿ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಇಒ ತಿಳಿಸಿದರು.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಪ್ರಚಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ದಾವಣಗೆರೆಯಲ್ಲೇ ವಿಮಾ ಕಂಪನಿ ಕಚೇರಿ ಆರಂಭಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ಸಭೆಗೆ ತಿಳಿಸಿದರು.

ಮಳೆಗಾಲದೊಳಗೆ ಕಾಮಗಾರಿ ಮುಗಿಸಿ: ಜಲಶಕ್ತಿ ಅಭಿಯಾನದಡಿ ಕೈಗೊಳ್ಳಬೇಕಾದ ಎಲ್ಲ ಕಾಮಗಾರಿಗಳನ್ನು ಮಳೆಗಾಲದ ಒಳಗೆ ಪೂರ್ಣಗೊಳಿಸಬೇಕು ಎಂದು ಸಂಸದರು ಸೂಚಿಸಿದರು.

ಅಭಿಯಾನದಡಿ ಒಂದು ಸಾವಿರಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. 547 ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿದ್ದು, 135 ಕಾಮಗಾರಿ ಪ್ರಾರಂಭಿಸಲಾಗಿದೆ. ಬಾಕಿ ಕಾಮಗಾರಿಗಳಿಗೆ ಏಪ್ರಿಲ್ 22ರ ಒಳಗಾಗಿ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೈಕೊಡುವ ಬಿಎಸ್ಎನ್‌ಎಲ್‌ ನೆಟ್‌ವರ್ಕ್‌: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಬಿಎಸ್ಎನ್‌ಎಲ್‌ ನೆಟ್‌ವರ್ಕ್‌ ಸಮರ್ಪಕವಾಗಿಲ್ಲ ಎಂಬ ವಿಷಯದ ಬಗೆಗಿನ ಚರ್ಚೆ ವೇಳೆ ಗರಂ ಆದ ಸಂಸದರು, ‘ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಸಂಸ್ಥೆ ಮುಚ್ಚುವ ಸ್ಥಿತಿಗೆ ಬಂದಿದೆ. ನಾನೇ ಬೇರೆ ಕಂಪನಿಗೆ ಪೋರ್ಟ್‌ ಮಾಡುತ್ತಿದ್ದೇನೆ. ನಿಮ್ಮ ಬದುಕಿನ ಮೇಲೆ ಕಲ್ಲು ಹಾಕಿಕೊಳ್ಳುತ್ತಿದ್ದೀರಿ’ ಎಂದು ಎಚ್ಚರಿಸಿದರು.

ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ ಬಿಎಸ್ಎನ್‌ಎಲ್‌ ಅಧಿಕಾರಿ, ‘ಪೋರ್ಟ್‌ ಮಾಡಬೇಡಿ ಸರ್‌, 4 ಜಿ ಬರಲಿದೆ’ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ್‌ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ದಿಶಾ ಸಮಿತಿ ಸದಸ್ಯರು ಇದ್ದರು.

ಹೊನ್ನಾಳಿ ಏನು ಸ್ಪೆಷಲ್ಲಾ?:
ತಾಲ್ಲೂಕುಗಳಲ್ಲಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಗುಣಮಟ್ಟ, ವಸ್ತುಸ್ಥಿತಿ ಬಗ್ಗೆ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಇಒಗಳಿಂದ ಸ್ಪಂದನ ಇದೆ. ಆದರೆ ಹೊನ್ನಾಳಿ ಇಒ ಮಾತ್ರ ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಸಮರ್ಪಕ ಉತ್ತರ ನೀಡುವುದಿಲ್ಲ. ಕಾಮಗಾರಿ ಪರಿಶೀಲನೆಗೆ ಅವಕಾಶ ನೀಡುವುದಿಲ್ಲ.ಶಾಸಕ ಎಂ.ಪಿ.ರೇಣುಕಾಚಾರ್ಯರಿಂದ ಕರೆ ಮಾಡಿಸುತ್ತಾರೆ ಎಂದುದಿಶಾ ಸಮಿತಿ ಸದಸ್ಯ ಮುಪ್ಪಣ್ಣ ದೂರಿದರು.

ಇದಕ್ಕೆ ಗರಂ ಆದ ಸಂಸದರು, ‘ಇದು ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನೆಗೆ ಇರುವ ಸಮಿತಿ. ಹೊನ್ನಾಳಿ ಏನು ನಮಗೆ ಸ್ಪೆಷಲ್ಲಾ. ಈ ಬಗ್ಗೆ ಶಾಸಕರ ಜೊತೆ ಮಾತನಾಡುತ್ತೇನೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ‘ದಿಶಾ ಸಮಿತಿ ಸದಸ್ಯರಿಗೆ ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು’ ಎಂದು ತಾಕೀತು ಮಾಡಿದರು.

‘ಸ್ಮಾರ್ಟ್‌ ಸಿಟಿಯಲ್ಲ; ಹಂದಿ ಸಿಟಿ’

ದಾವಣಗೆರೆ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಳೆದ ಬಾರಿಯ ಸಭೆಯಲ್ಲಿ ತಿಳಿಸಲಾಗಿತ್ತು. ಆದರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಶೀಘ್ರ ಕೆಲಸ ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಾಕೀತು ಮಾಡಿದರು.

ದಾವಣಗೆರೆ ಸ್ಮಾರ್ಟ್‌ ಸಿಟಿ ಆಗುತ್ತಿದ್ದರೂ ಹಂದಿಗಳ ಹಾವಳಿಯಿಂದ ಜನರು ‘ಹಂದಿ ಸಿಟಿ’ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಉತ್ತರಿಸಿದ ಜಿಲ್ಲಾಧಿಕಾರಿ, ‘ಹಂದಿಗಳ ಸ್ಥಳಾಂತರಕ್ಕಾಗಿ ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಬಳಿ 7 ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿ ಕಾಂಪೌಂಡ್‌ ನಿರ್ಮಿಸಿ ಹಂದಿಗಳನ್ನು ಬಿಡಲು ಯೋಜಿಸಲಾಗಿದೆ’ ಎಂದರು.

ಒಣ ಕಸ ವಾರಕ್ಕೆ ಮೂರು ಬಾರಿ ಸಂಗ್ರಹಿಸಿ:

‘ಪಾಲಿಕೆ ವ್ಯಾಪ್ತಿಯಲ್ಲಿ ಒಣ ಕಸ ವಾರಕ್ಕೆರಡು ಬಾರಿ ಸಂಗ್ರಹಿಸಿ. ಹಸಿ ಕಸವನ್ನು ಪ್ರತಿದಿನ ಸಂಗ್ರಹಿಸಿ’ ಎಂದು ಸಮಿತಿ ಸದಸ್ಯ ಎಚ್‌.ಕೆ. ಬಸವರಾಜ್‌ ಸಲಹೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ 33 ಕಸ ಸಂಗ್ರಹಿಸುವ ವಾಹನಗಳನ್ನು ಖರೀದಿಸಲು ಟೆಂಡರ್‌ ಕರೆಯಲಾಗಿದೆ. ಕಾರ್ಯಾದೇಶದ ಹಂತದಲ್ಲಿದೆ. ವಾಹನಗಳು ಬಂದ ನಂತರ ವಾರಕ್ಕೆರಡು ಬಾರಿ ಒಣ ಕಸ ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉದ್ಯೋಗ ಖಾತ್ರಿಯಡಿ ಅಡಿಕೆ ಸೇರ್ಪಡೆ

ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಅಡಿಕೆ ಬೆಳೆಯನ್ನೂ ಸೇರಿಸುವಂತೆ ಸಲ್ಲಿಸಿದ್ದ ಪ್ರಸ್ತಾವವನ್ನು ಸರ್ಕಾರ ತಿರಸ್ಕರಿಸಿದೆ. ಮಲೆನಾಡು ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಡುವ ತಾಲ್ಲೂಕುಗಳಿಗೆ ಮಾತ್ರ ಬೆಳೆ ಸೇರ್ಪಡೆಗೆ ಅವಕಾಶವಿದೆ ಎಂಬ ಕಾರಣ ನೀಡಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ್ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ‘ಜಿಲ್ಲೆಯ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಬೆಳೆಗಾರರು ಹೆಚ್ಚಿದ್ದಾರೆ. ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಅವಕಾಶ ಮಾಡಿಕೊಡಲು ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಿ. ಅನುಮತಿ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT