ಮಂಗಳವಾರ, ಜನವರಿ 31, 2023
18 °C
ಟಿಕೆಟ್ ನೀಡಿದ ಅಭ್ಯರ್ಥಿ ಗೆಲ್ಲಿಸುವ ವಾಗ್ದಾನ ಮಾಡಿ: ಸಲೀಂ ಅಹಮದ್

7 ಕ್ಷೇತ್ರಗಳಿಗೆ ಕಾಂಗ್ರೆಸ್‌ನಲ್ಲಿ 50 ಆಕಾಂಕ್ಷಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಜಿಲ್ಲೆಯ 7 ಕ್ಷೇತ್ರಗಳಿಗೆ ಕಾಂಗ್ರೆಸ್‌ನಲ್ಲಿ 50 ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್ ನೀಡುವ ಅಭ್ಯರ್ಥಿಗಳು ಗೆಲ್ಲಬೇಕು. ಇಲ್ಲದಿದ್ದರೆ ಪಕ್ಷ ಟಿಕೆಟ್ ನೀಡುವ ಅಭ್ಯರ್ಥಿಯನ್ನು ಗೆಲ್ಲಿಸುವ ವಾಗ್ದಾನ ಮಾಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದರು.

ಜಿಲ್ಲೆಯ ಟಿಕೆಟ್ ಆಕಾಂಕ್ಷಿಗಳ ಸಭೆಗೂ ಮುನ್ನ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಹಾಗೂ ಪಕ್ಷ ಹಿರಿಯ ಮುಖಂಡರು ಅಧ್ಯಕ್ಷರು ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರನ್ನು ಭೇಟಿ ಮಾಡಿ, ಅಭ್ಯರ್ಥಿಗಳ ಪಟ್ಟಿ ಮಾಡಲಾಗುವುದು. ಅರ್ಜಿಗಳು ಎಷ್ಟಾದರೂ ಇರಬಹುದು. ಆದರೆ ಗೆಲ್ಲುವ ತಂತ್ರಗಾರಿಕೆ ಹಾಗೂ ಮಾನದಂಡಗಳ ಬಗ್ಗೆ ಆಕಾಂಕ್ಷಿಗಳ ಬಳಿ ಮಾತನಾಡಿದ್ದೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಒಟ್ಟು 1350 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಎಲ್ಲಾ ಅರ್ಜಿಗಳನ್ನು ಆಯಾ ಜಿಲ್ಲೆಗಳಿಗೆ ಕಳುಹಿಸಲಾಗಿದೆ.  ಬ್ಲಾಕ್, ಜಿಲ್ಲಾ, ಪಕ್ಷದ ಹಿರಿಯ ಮುಖಂಡರ ಶಿಫಾರಸುಗಳನ್ನು ಪರಿಗಣಿಸಲಾಗುವುದು. ಎಐಸಿಸಿ ಸಮೀಕ್ಷೆಯ ಪ್ರಕಾರ
ರಾಜ್ಯದಲ್ಲಿ 130 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದೆ ಇದೆ. ಆದರೆ 150 ಸೀಟು ಗೆಲ್ಲುವುದು ನಮ್ಮ ಗುರಿ. ರಾಹುಲ್‌
ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಆದೇಶದಂತೆ 150 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದರು.

ಸಾಮೂಹಿಕ ನಾಯಕತ್ವ: ‘ಹುಬ್ಬಳ್ಳಿಯಲ್ಲಿ ಈಗಾಗಲೇ ಮಹದಾಯಿ, ಜಲ– ಜನ ಆಂದೋಲನ ಸಮಾವೇಶ ನಡೆದಿದೆ. ಜ. 8ರಂದು ಚಿತ್ರದುರ್ಗದಲ್ಲಿ ಎಸ್ಸಿ, ಎಸ್ಟಿ ಸಮಾವೇಶ ನಡೆಯಲಿದೆ. ಜ.11ರಿಂದ 30ರವರೆಗೆ ಬೆಳಗಾವಿಯಿಂದ ಪಾಂಚಜನ್ಯದ ಮಾದರಿಯಲ್ಲಿ ಬಸ್‌ ಯಾತ್ರೆ ಹಮ್ಮಿಕೊಳ್ಳಲಾಗುವುದು. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜಿವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಹಿರಿಯ ಮುಖಂಡರು 20 ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ’ ಎಂದರು.

‘ಫೆಬ್ರುವರಿ 1ರಿಂದ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಒಂದು ತಂಡ ಮೈಸೂರು ಭಾಗದಿಂದ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೊಂದು ತಂಡ ಬೀದರ್‌ನಿಂದ ಪ್ರವಾಸ ಹಮ್ಮಿಕೊಳ್ಳಲಿದೆ. ಪ್ರವಾಸ ವೇಳೆ ಸರ್ಕಾರದ ವೈಫಲ್ಯಗಳು, ಬೆಲೆ ಏರಿಕೆ, ಶೇ 40ರಷ್ಟು ಕಮಿಷನ್ ಮುಂತಾದ ವಿಷಯಗಳನ್ನು ಜನರ ಮುಂದೆ ಪ್ರಸ್ತಾಪ ಮಾಡಲಾಗುವುದು’ ಎಂದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ. ಯಾವ ಘನಕಾರ್ಯಕ್ಕೆ ಬಿಜೆಪಿ ಸಂಕಲ್ಪ ಯಾತ್ರೆ ಮಾಡಿದೆ’ ಎಂದು ಪ್ರಶ್ನಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ಎಐಸಿಸಿ ಕಾರ್ಯದರ್ಶಿ ಮಯೂರ್‌ ಜಯಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ವಿ.ಜಯಸಿಂಹ, ಎಚ್.ಬಿ. ಮಂಜಪ್ಪ, ಅಲ್ಲಂ ವೀರಭದ್ರಪ್ಪ, ಬಾಲರಾಜ್ ಇದ್ದರು.

ಅಭಿಪ್ರಾಯ ಸಂಗ್ರಹ: ಆಕಾಂಕ್ಷಿಗಳನ್ನು ಒಬ್ಬೊಬ್ಬರನ್ನಾಗಿ ಕರೆದು ಅವರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಗೆಲ್ಲಲು ಮಾನದಂಡಗಳು, ಹಣಕಾಸು ಬೆಂಬಲ, ಕ್ಷೇತ್ರದಲ್ಲಿ ಭಾಗವಹಿಸುವಿಕೆ, ಜಾತಿಯ ಮತಗಳು ಎಷ್ಟು, ಸಂಘಟನೆಗೆ ಏನು ಮಾಡಿದ್ದೀರಿ ಸೇರಿ ಪಕ್ಷ ಗೆಲ್ಲಲು ಬೇಕಾದ ಮಾನದಂಡಗಳ ಬಗ್ಗೆ ಚರ್ಚಿಸಲಾಯಿತು. ರಾತ್ರಿಯವರೆಗೂ ಅಭಿಪ್ರಾಯ ಸಂಗ್ರಹಿಸಲಾಯಿತು.ಆಕಾಂಕ್ಷಿ
ಗಳು ಬೆಂಬಲಿಗರನ್ನು ಕರೆತಂದಿದ್ದರು. 

‘ಅನುಭವ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಟಿಕೆಟ್ ನೀಡಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ’ ಎಂದು ಆಕಾಂಕ್ಷಿ ಡಿ. ಬಸವರಾಜ್ ತಿಳಿಸಿದರು.

15ರೊಳಗೆ 150 ಸೀಟುಗಳ ಅಂತಿಮ ಪಟ್ಟಿ

‘ಜ.15ರೊಳಗೆ 150 ಸೀಟುಗಳ ಅಂತಿಮ ಪಟ್ಟಿಯನ್ನು ಅಂತಿಮಗೊಳಿಸಲಿದ್ದು, ಅಭ್ಯರ್ಥಿಗಳ ಹೆಸರನ್ನು ಘೋಷಿಸದೇ ಇದ್ದರೂ, ಅಂತಿಮ ಅಭ್ಯರ್ಥಿಗಳಿಗೆ ಚುನಾವಣೆಗೆ ತಯಾರಾಗಿ ಎನ್ನುವ ಸ್ಪಷ್ಟ ಸೂಚನೆಯನ್ನು ಹೈಕಮಾಂಡ್ ನೀಡಲಿದೆ. ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಸಂಬಂಧ ಕೆಪಿಸಿಸಿಯಲ್ಲಿ ಚರ್ಚೆ ನಡೆಯುತ್ತಿದೆ. ಹೊಸ ಮುಖಗಳು, ಯುವಕರು, ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಎಲ್ಲಾ ವರ್ಗದವರಿಗೆ ನೀಡುವ ಸಾಮಾಜಿಕ ನ್ಯಾಯ, ಗೆಲ್ಲುವ ಅಭ್ಯರ್ಥಿಗಳನ್ನು ಮಾನದಂಡವಾಗಿ ಪರಿಗಣಿಸಲಾಗುವುದು. ವಯಸ್ಸಿನ ಯಾವುದೇ ನಿರ್ಬಂಧವಿಲ್ಲ’ ಎಂದು ಸಲೀಂ ಅಹಮದ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು