ಬುಧವಾರ, ಏಪ್ರಿಲ್ 1, 2020
19 °C
ರೈಲು ನಿಲ್ದಾಣದ 2ನೇ ಪ್ರವೇಶ ದ್ವಾರ ಉದ್ಘಾಟನೆ

500 ಪ್ರಯಾಣಿಕ ರೈಲುಗಳ ಖಾಸಗೀಕರಣ: ಸಂಸದ ಜಿ.ಎಂ. ಸಿದ್ದೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಸಾರ್ವಜನಿಕರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ನೀಡುವ ಸಲುವಾಗಿ 2025ರ ವೇಳೆಗೆ ದೇಶದಲ್ಲಿ 500 ಪ್ರಯಾಣಿಕ ರೈಲುಗಳು ಹಾಗೂ 750 ರೈಲು ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸುವ ಬಗ್ಗೆ ರೈಲ್ವೆ ಸಚಿವಾಲಯ ಗಂಭೀರವಾಗಿ ಚಿಂತನೆ ನಡೆಸಿದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ನೈರುತ್ಯ ರೈಲ್ವೆ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ದಾವಣಗೆರೆ ರೈಲು ನಿಲ್ದಾಣದ ಎರಡನೇ ಪ್ರವೇಶ ದ್ವಾರವನ್ನು (ಈಶಾನ್ಯ ದಿಕ್ಕು) ಉದ್ಘಾಟಿಸಿದ ಅವರು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದ ಬಳಿಕ ರೈಲ್ವೆ ಇಲಾಖೆ ಹೊಸ ಮನ್ವಂತರ ಕಂಡಿದೆ ಎಂದು ಹೇಳಿದರು.

‘ದಾವಣಗೆರೆಯಲ್ಲಿ ಒಟ್ಟು ₹15 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣದ ಹೊಸ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ. ಉತ್ತಮ ಸೌಲಭ್ಯಗಳೊಂದಿಗೆ ಜುಲೈ ಅಂತ್ಯದೊಳಗೆ ಹೊಸ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ಎಕ್ಸ್‌ಲೇಟರ್‌ ಅಳವಡಿಸಲು ಸೂಚಿಸಿದ್ದೇನೆ’ ಎಂದು ತಿಳಿಸಿದರು.

ಮಾಯಕೊಂಡದಿಂದ ಹರಿಹರವರೆಗೆ ಈಗಾಗಲೇ ₹ 250 ಕೋಟಿ ವೆಚ್ಚದಲ್ಲಿ ಜೋಡಿ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. 2021ರವೇಳೆಗೆ ಹುಬ್ಬಳ್ಳಿವರೆಗೂ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಡಿಸಿಎಂ ಟೌನ್‌ಷಿಪ್‌ ಬಳಿಯ ಕೆಳಸೇತುವೆಯ ರಸ್ತೆ ಅಂಕು–ಡೊಂಕಾಗಿರುವುದನ್ನು ನೇರ ಮಾಡಲು ₹ 18 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಹರಿಹರದ ಅಮರಾವತಿ ಬಳಿ ರೈಲ್ವೆ ಮೇಲ್ಸೇತುವೆ ಕೆಲಸ ಮುಗಿದಿದ್ದು, ಶೀಘ್ರವೇ ಉದ್ಘಾಟಿಸಲಾಗುವುದು. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 8 ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ಗಳನ್ನು ಬದಲಾಯಿಸಿ ಸಬ್‌ ವೇಗಳನ್ನು ನಿರ್ಮಿಸಲಾಗಿದೆ ಎಂದು ವಿವರ ನೀಡಿದರು.

‘ಚಿಕ್ಕಜಾಜೂರಿನಿಂದ ಹರಿಹರದವರೆಗೆ ರೈಲು ಮಾರ್ಗ ವಿದ್ಯುದ್ದೀಕರಣ ಕಾಮಗಾರಿಗೆ ₹ 80 ಕೋಟಿ ಬಿಡುಗಡೆಯಾಗಿದೆ. 2024ರ ವೇಳೆಗೆ ಶೇ 100ರಷ್ಟು ರೈಲು ಮಾರ್ಗ ವಿದ್ಯುದ್ದೀಕರಣಗೊಳ್ಳಲಿದೆ. ಅಶೋಕ ಟಾಕೀಸ್‌ ರೈಲ್ವೆ ಗೇಟ್‌ ಬಳಿ ಸೇತುವೆ ನಿರ್ಮಿಸುವ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಶೀಘ್ರದಲ್ಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಶಾಸಕ ಎಸ್‌.ಎ. ರವೀಂದ್ರನಾಥ್‌, ‘ಬೆಂಗಳೂರು ಕಡೆಗೆ ಹೋಗುವ ರೈಲು ರಾತ್ರಿ 1 ಗಂಟೆಗೆ ಬರುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಬೆಳಿಗ್ಗೆ ಹೊರಡುವ ರೈಲು ಬೆಂಗಳೂರನ್ನು ಬೇಗನೆ ತಲುಪದೇ ಇರುವುದರಿಂದ ಕಚೇರಿ ಕೆಲಸಗಳಿಗೆ ಹೋಗಲು ವಿಳಂಬವಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಬೇಕು’ ಎಂದು ಮನವಿ ಮಾಡಿದರು.

ಮೇಯರ್‌ ಬಿ.ಜಿ. ಅಜಯ್‌ಕುಮಾರ್‌, ‘ಒಂದೇ ಪ್ರವೇಶ ದ್ವಾರ ಇದ್ದುದರಿಂದ ಜನದಟ್ಟಣೆಯಲ್ಲಿ ಟಿಕೆಟ್‌ ತೆಗೆದುಕೊಳ್ಳಲಾಗದೇ ಹಲವರು ರೈಲು ತಪ್ಪಿಸಿಕೊಳ್ಳುತ್ತಿದ್ದರು. ಈಗ ಪ್ರಯಾಣಿಕರಿಗೆ ಅನುಕೂಲವಾಗಲಿ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ‘ಬಸ್‌ಗಳ ಪ್ರಯಾಣಕ್ಕಿಂತ ರೈಲು ಪ್ರಯಾಣ ಕಡಿಮೆ ವೆಚ್ಚದಾಯಕ ಹಾಗೂ ಹೆಚ್ಚು ಸುರಕ್ಷಿತವಾಗಿದೆ. ಈ ಪ್ರವೇಶ ದ್ವಾರದಿಂದ ಜನರಿಗೆ ಪ್ರಯಾಣಿಸಲು ಅನುಕೂಲವಾಗಿದೆ’ ಎಂದರು.

ಉಪ ಮೇಯರ್‌ ಸೌಮ್ಯಾ ನರೇಂದ್ರಕುಮಾರ್‌, ಧೂಡಾ ಅಧ್ಯಕ್ಷ ಎನ್‌.ಎಚ್‌. ಶಿವಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನಗವಾಡಿ ವೀರೇಶ್‌, ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಇದ್ದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿ.ಆರ್‌.ಎಂ. ಅಪರ್ಣ ಗಾರ್ಗ್‌ ಸ್ವಾಗತಿಸಿದರು.

ಪ್ರವೇಶ ದ್ವಾರದ ವಿಶೇಷತೆ

₹ 4.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 2ನೇ ಪ್ರವೇಶ ದ್ವಾರದಲ್ಲಿ ಸರದಿಯಲ್ಲಿ ನಿಲ್ಲುವ ಟಿಕೆಟ್‌ ಬುಕಿಂಗ್‌ ಕೌಂಟರ್‌, 300 ಚದರ್‌ ಮೀಟರ್‌ ಪರಿಚಲನಾ ಪ್ರದೇಶ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಅಂಗವಿಕಲರಿಗೆ ರ‍್ಯಾಂಪ್‌, 1,200 ಚದರ್‌ ಮೀಟರ್‌ ಪ್ರದೇಶದಲ್ಲಿ ದ್ವಿಚಕ್ರ ವಾಹನ, ಆಟೊ, ಟ್ಯಾಕ್ಸಿ ನಿಲುಗಡೆ ಸ್ಥಳವನ್ನು ನಿರ್ಮಿಸಲಾಗಿದೆ. ನಿಲ್ದಾಣದ ಸೌಂದರ್ಯವನ್ನು ಹೆಚ್ಚಿಸಲು ಉದ್ಯಾನವನ್ನೂ ನಿರ್ಮಿಸಲಾಗುತ್ತಿದೆ ಎಂದು ಅಪರ್ಣ ಗಾರ್ಗ್‌ ಮಾಹಿತಿ ನೀಡಿದರು.

ಅಂಕಿ–ಅಂಶಗಳು

* 6,500 – ದಾವಣಗೆರೆ ರೈಲು ನಿಲ್ದಾಣವನ್ನು ನಿತ್ಯ ಬಳಸುತ್ತಿರುವ ಪ್ರಯಾಣಿಕರು

* 50 – ದಾವಣಗೆರೆ ನಿಲ್ದಾಣದ ಮೂಲಕ ನಿತ್ಯ ಸಂಚರಿಸುವ ರೈಲುಗಳು

* ₹ 1.50 ಕೋಟಿ – ದಾವಣಗೆರೆ ರೈಲು ನಿಲ್ದಾಣದಿಂದ ತಿಂಗಳಿಗೆ ಬರುವ ಆದಾಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು