ಗುರುವಾರ , ಡಿಸೆಂಬರ್ 1, 2022
20 °C
ಜೆ.ಎಚ್.ಪಟೇಲ್ ಅಭಿಮಾನಿ ಬಳಗದಿಂದ ನಡೆದ ಕಾರ್ಯಕ್ರಮಕ್ಕೆ ದಾಸ‌ಕರಿಯಪ್ಪ ಚಾಲನೆ

‘ಸೌಹಾರ್ದ ಸಂಭ್ರಮ’ಕ್ಕೆ ಆಹ್ವಾನ ನೀಡಿದ ಟ್ರ್ಯಾಕ್ಟರ್‌ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಜನ್ಮ ದಿನವಾದ ಅ.1ರಂದು ನಡೆಯಲಿರುವ ‘ಸೌಹಾರ್ದ ಸಂಭ್ರಮ’ದ ಪ್ರಚಾರಕ್ಕಾಗಿ, ಸಾರ್ವಜನಿಕ ಆಹ್ವಾನಕ್ಕಾಗಿ ಗುರುವಾರ ಅದ್ದೂರಿಯಾಗಿ ಟ್ರ್ಯಾಕ್ಟರ್‌ ಮೆರವಣಿಗೆ ನಡೆಯಿತು.

ಜೆ.ಎಚ್.ಪಟೇಲ್ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್‌ ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಹಿರಿಯರಾದ
ಟಿ. ದಾಸ‌ಕರಿಯಪ್ಪ ಅವರು ಚಾಲನೆ ನೀಡಿದರು.

ಕಾರ್ಯಕ್ರಮದ ರೂವಾರಿಗಳಲ್ಲಿ ಒಬ್ಬರಾದ ತೇಜಸ್ವಿ ವಿ. ಪಟೇಲ್‌ ಮಾತನಾಡಿ, ‘ದಾವಣಗೆರೆ ಜಿಲ್ಲೆಗೆ 25 ವರ್ಷಗಳು ತುಂಬಿವೆ. ದಾವಣಗೆರೆ ಜೊತೆಯಲ್ಲೇ ರಚಿತವಾದ 6 ಜಿಲ್ಲೆಗಳಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿ ಜಿಲ್ಲೆಯ ಜನಕನಿಗೆ ಗೌರವ ನೀಡಿವೆ. ಆದರೆ ಜಿಲ್ಲೆಯವರೇ ಆದ ಜೆ.ಎಚ್. ಪಟೇಲರನ್ನು ಜಿಲ್ಲಾಡಳಿತ ಸ್ಮರಿಸಿಲ್ಲ’ ಎಂದು ಬೇಸರ
ವ್ಯಕ್ತಪಡಿಸಿದರು.

ಪಟೇಲರ ಜನ್ಮದಿನ ಪ್ರಯುಕ್ತ ಪ್ರತಿ ವರ್ಷ ಅವರ ಜನ್ಮಸ್ಥಳವಾದ ಕಾರಿಗನೂರಿನಲ್ಲಿ ಸೌಹಾರ್ದ ಸಂಭ್ರಮ ಕಾರ್ಯಕ್ರಮ ನಡೆಯುತ್ತಿತ್ತು. ಈ ಬಾರಿ ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು.

ಅಕ್ಟೋಬರ್ 1ರಂದು ಬೆಳಿಗ್ಗೆ 10ಕ್ಕೆ ಮೆಹಬೂಬ್ ನಗರದ ಮುಬಾರಕ್ ಮಸೀದಿಯಿಂದ ವಿವಿಧ ಜನಪದ ಕಲಾತಂಡಗಳೊಂದಿಗೆ ಜಾಥಾ ಆರಂಭಗೊಳ್ಳಲಿದೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಪ್ರಮುಖರು ಚಾಲನೆ ನೀಡುವರು. ಮಧ್ಯಾಹ್ನ 2ಕ್ಕೆ ಜಯದೇವ ವೃತ್ತಕ್ಕೆ ತಲುಪಲಿದೆ. ಮಧ್ಯಾಹ್ನ 3ಕ್ಕೆ ಶಿವಯೋಗಾಶ್ರಮದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಪಟೇಲರ ರಾಜಕಿಯೇತರ ರಂಗಗಳ ಬಗ್ಗೆ ಮೆಲುಕು ಹಾಕಲಾಗುತ್ತದೆ’ ಎಂದು
ಹೇಳಿದರು.

ಕೃಷಿ ಕುಟುಂಬದಿಂದ ಪಟೇಲರು ಬಂದಿರುವುದರಿಂದ ಅದರ ಸಂಕೇತವಾಗಿ ಟ್ರ್ಯಾಕ್ಟರ್‌ ಮೆರವಣಿಗೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆ ಆಗಲು ಕಾರಣರಾದವರನ್ನು ಮಾತ್ರವಲ್ಲ, ದಾವಣಗೆರೆಯ ಅಭಿವೃದ್ಧಿಗೆ ಶ್ರಮಿಸಿದ ಹಿಂದಿನವರನ್ನು ಮರೆಯಲಾಗಿದೆ. ಅವರೆಲ್ಲರನ್ನು ನೆನಪಿಸುವ ಕಾರ್ಯ ನಡೆಯಲಿದೆ. ಸಾಲುಮರದ ತಿಮ್ಮಕ್ಕ ಸಹಿತ ಅನೇಕ ಹಿರಿಯರನ್ನು ಗೌರವಿಸಲಾಗುವುದು.  ಈಚೆಗೆ ನಿಧನರಾದ ಸಾಲುಮರದ ವೀರಾಚಾರಿ ಕುಟುಂಬವನ್ನೂ ಗುರುತಿಸಲಾಗುವುದು ಎಂದು ವಿವರಿಸಿದರು.

ಮೆರವಣಿಗೆಯು ಜಿಲ್ಲಾ ಪಂಚಾಯಿತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಯದೇವ ಸರ್ಕಲ್‌ನಲ್ಲಿ ಸಮಾಪನಗೊಂಡಿತು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎ. ಚನ್ನಪ್ಪ, ಮುಖಂಡರಾದ ಬಲ್ಲೂರು ರವಿಕುಮಾರ್, ಪೂಜಾರ್ ಅಂಜಿನಪ್ಪ, ಜಬೀನಾಖಾನಂ, ಜಿ.ಸಿ.ಮಂಜುನಾಥ್, ಶಿವಲಿಂಗಸ್ವಾಮಿ, ಜಿ.ಕೆ. ಕಿರಣ್, ಟಿ.ಬಿ.ಗಂಗಾಧರ್, ತಣಿಗೆರೆ ಶಿವಕುಮಾರ್, ಕಡತಿ ತಿಪ್ಪಣ್ಣ, ಎ.ಕೆ. ರಂಗಪ್ಪ, ಜಯಕುಮಾರ್, ಸವಿತಾ ಬಾಯಿ ಮಾಲತೇಶ್‌, ಬಿ.ಜಿ. ಅಜಯ್‌ ಕುಮಾರ್‌, ರಾಕೇಶ್‌ ಜಾಧವ್‌, ಬಸವೇಶ್‌ ಪಟೇಲ್‌, ಸ್ವಾಮಿ ಪಟೇಲ್‌, ಬಸವರಾಜ್‌  ಮುಂತಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು