ಶನಿವಾರ, ಸೆಪ್ಟೆಂಬರ್ 21, 2019
21 °C
ಪಂಚಮಸಾಲಿ ಸಂಘದ ಬೆಳ್ಳಿ ಬೆಡಗು ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮೀಜಿ

ಅವಕಾಶ, ಸಹನೆ ಇದ್ದರೆ ಸಾಧನೆ ಸಾಧ್ಯ

Published:
Updated:
Prajavani

ದಾವಣಗೆರೆ: ಯಶಸ್ಸು ಎಂಬುದು ಒಂದೇ ಬಾರಿಗೆ ಸಿಗುವುದಿಲ್ಲ. ಅವಕಾಶ ಮತ್ತು ಸಹನೆ ಇಟ್ಟುಕೊಂಡು ಪರಿಶ್ರಮಪಟ್ಟರೆ ಮಾತ್ರ ಸಾಧನೆ ಸಾಧ್ಯ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನದ ಸ್ವಾಮೀಜಿ ಹೇಳಿದರು.

ಹರಸೇವಾ ಸಂಸ್ಥೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಸಹಯೋಗದಲ್ಲಿ ರೇಣುಕ ಮಂದಿರದಲ್ಲಿ ಭಾನುವಾರ ನಡೆದ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ 25ನೇ ವರ್ಷದ ‘ಬೆಳ್ಳಿ ಬೆಡಗು’ ಸಮಾರಂಭ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಬಡವ, ನನ್ನಿಂದ ಆಗುವುದಿಲ್ಲ ಎಂಬುದನ್ನೆಲ್ಲ ಮನಸ್ಸಿನಿಂದ ತೆಗೆಯಿರಿ. ನಿಮ್ಮನ್ನು ಬೆಳೆಸಿದ ತಂದೆ, ತಾಯಿ ಸಮಾಜವನ್ನು ಮರೆಯಬೇಡಿ. ಉತ್ತಮ ಸಾಧನೆ ಮಾಡಿ’ ಎಂದು ಹಾರೈಸಿದರು.

ದಾವಣಗೆರೆಯಲ್ಲಿ ಈಗ ಲಿಂಗಾಯತ ಹವಾ ಹೆಚ್ಚಾಗಿದೆ. 99 ವರ್ಷಗಳ ಬಳಿಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಲಿಂಗಾಯತರಾಗಿದ್ದಾರೆ ಎಂದು ತಿಳಿಸಿದರು.

 ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಸರಿಯಾದ ಅವಕಾಶ ಕಲ್ಪಿಸಿಕೊಡುವುದು ಸಮಾಜದ ಜವಾಬ್ದಾರಿ. ಗ್ರಾಮೀಣ ಪ್ರದೇಶಗಳಲ್ಲಿ ತುಂಬಾ ಮಂದಿ ಪ್ರತಿಭಾವಂತರಿರುತ್ತಾರೆ. ಆದರೆ ಅವರಿಗೆ ಅವಕಾಶ ಮತ್ತು ಪ್ರೋತ್ಸಾಹ ಸಿಕ್ಕಿರುವುದಿಲ್ಲ. ಸಮಯ ಮೀರಿದ ಬಳಿಕ ನೀಡುವ ಪ್ರೋತ್ಸಾಹದಿಂದ ಪ್ರಯೋಜನವಿಲ್ಲ’ ಎಂದು ಹೇಳಿದರು.

ಹಿಂದೆ ಯುಪಿಎಸ್‌ಸಿ ‍ಪರೀಕ್ಷೆಗಳಲ್ಲಿ ಕರ್ನಾಟಕದವರ ಸಂಖ್ಯೆ ಬಹಳ ಕಡಿಮೆ ಇತ್ತು. ಈಗ ಐಎಎಸ್‌, ಐಪಿಎಸ್‌ ಬರೆಯುವವರಲ್ಲಿ ಕರ್ನಾಟಕದವರ ಸಂಖ್ಯೆ ಬಹಳ ಹೆಚ್ಚಿದೆ. ಅರಿವು ಮೂಡಿರುವುದೇ ಈ ಬದಲಾವಣೆಗೆ ಕಾರಣ ಎಂದರು.

ಸ್ಪರ್ಧಾತ್ಮಕ ಪರೀಕ್ಷೆ ಅಂದರೆ ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಮಾತ್ರ ಅಲ್ಲ. ಡಿಫೆನ್ಸ್‌, ಇಸ್ರೊ, ಅಗ್ರಿಕಲ್ಚರ್‌ ಸೈನ್ಸ್‌ ಹೀಗೆ ಬೇರೆ ಬೇರೆ ವಿಭಾಗಗಳಿವೆ. ಅವುಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ. ಉಮಾಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಳೆದ 16 ವರ್ಷಗಳಲ್ಲಿ 4,800ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಗೌರವಿಸಲಾಗಿದೆ. ನಮ್ಮ ಸಂಘಕ್ಕೆ 25 ವರ್ಷಗಳು ತುಂಬಿದ ಕಾರಣ ಈ ಬಾರಿ ಶೇ 90ಕ್ಕಿಂತ ಅಧಿಕ ಅಂಕ ಗಳಿಸಿದ ಎಸ್ಸೆಸ್ಸೆಲ್ಸಿಯ 25 ಮಂದಿಗೆ ಹಾಗೂ ಪಿಯುಸಿಯ 25 ಮಂದಿಗೆ ಬೆಳ್ಳಿ ಚೌಕ ನೀಡಲಾಗುತ್ತಿದೆ. 210 ವಿದ್ಯಾರ್ಥಿಗಳಿಗೆ ಬೆಳ್ಳಿ ನಾಣ್ಯ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ವಿಶೇಷ ಸಾಧನೆ ಮಾಡಿದ ಎಚ್‌.ಎಸ್‌. ಗೌರಿ, ಎಸ್‌. ವಿದ್ಯಾಶ್ರೀ, ನಿಶ್ಚಿತ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಗಣ್ಯರಾದ ಬಾದಾಮಿ ರುದ್ರೇಶ್‌, ಹುಲಿಕಟ್ಟೆ ಹಾಲೇಶಪ್ಪ, ಅಮರೇಶ್ವರಪ್ಪ ಬಸಪ್ಪ ಮೈಲೇಶ್ವರ, ಬಿ. ರಮೇಶ್‌, ವೀರಣ್ಣ ರಕ್ಕಸಗಿ ಅವರನ್ನು ಗೌರವಿಸಲಾಯಿತು.

ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ ದಿಂಡೂರು, ಉಪನ್ಯಾಸಕರಾದ ಡಾ. ಬಿ.ವಿ. ಧನಂಜಯಮೂರ್ತಿ, ಜಗನ್ನಾಥ ನಾಡಿಗೇರ, ಸಂಘದ ಪ್ರಮುಖರಾದ ಹದಡಿ ನಟರಾಜ್‌, ಎಂ.ದೊಡ್ಡಪ್ಪ, ಮಂಜುನಾಥ, ಲಕ್ಷ್ಮೀ ನಾಗರಾಜ್‌, ಜಯಮ್ಮ ನೀಲಗುಂದ, ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವರಾಜ ಬಣಕಾರ ಅವರೂ ಇದ್ದರು.

ಕಾರ್ಯದರ್ಶಿ ಎಸ್‌.ಸಿ. ಕಾಶಿನಾಥ ಸ್ವಾಗತಿಸಿದರು. ನಾಗರಾಜ ವಂದಿಸಿದರು. ಅಂಗಡಿ ಸಂಗಮೇಶ್, ಎ.ವೀರಭದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.

Post Comments (+)