ಶುಕ್ರವಾರ, ಮೇ 7, 2021
24 °C
ಜಿಲ್ಲಾ ಮಟ್ಟದ ಅಡ್ವೋಕಸಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ

ಮಕ್ಕಳ ಹಕ್ಕು ಉಲ್ಲಂಘಿಸಿದರೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಕ್ಕಳ ಹಕ್ಕುಗಳ ಉಲ್ಲಂಘನೆ ಸಲ್ಲ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೆಂಗಳೂರಿನ ಬ್ರೆಡ್ಸ್ ಸಂಸ್ಥೆ,  ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್ ಕ್ರೀಮ್ ಯೋಜನೆ ಆಶ್ರಯದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಮಕ್ಕಳ ಸ್ನೇಹಿ ಅಧಿಕಾರಿಗಳಿಗೆ ಸನ್ಮಾನ ಹಾಗೂ ಸಿಆರ್‌ಎಎಂ ಯೋಜನೆಯ ಅನುಷ್ಠಾನದಲ್ಲಿ ಇಲಾಖೆಗಳ ಸಮನ್ವಯತೆ ಕುರಿತು ನಡೆದ ಜಿಲ್ಲಾ ಮಟ್ಟದ ಅಡ್ವೋಕಸಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಡಾನ್ ಬಾಸ್ಕೋ ಸಂಸ್ಥೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಈ ಸಂಸ್ಥೆ ನಮ್ಮ ಜಿಲ್ಲೆಯಲ್ಲಿ ಕಾರ್ಯನಿ
ರ್ವಹಿಸುತ್ತಿರುವುದು ಹೆಮ್ಮೆ. ಎಲ್ಲಾ ಅಧಿಕಾರಿಗಳು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡಲು ಸಿದ್ಧರಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ‘ಮಕ್ಕಳ ರಕ್ಷಣೆ ಹಾಗೂ ಸುರಕ್ಷತೆಗೆ ಪಾಲಿಕೆ ಬದ್ಧವಾಗಿದ್ದು, ಪಾಲಿಕೆ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳ ಬಳಿ ರಸ್ತೆಗೆ ಉಬ್ಬುಹಾಕಿ ನಾಮಫಲಕ ಹಾಕಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಕಳೆದೆರಡು ವರ್ಷಗಳಲ್ಲಿ ಮನೆ ಬಿಟ್ಟು ಓಡಿಹೋಗುತ್ತಿದ್ದ 800 ಮಕ್ಕಳನ್ನು ರೈಲು ನಿಲ್ದಾಣದಲ್ಲಿ ಪತ್ತೆಹಚ್ಚಿ, ಅವರಿಗೆ ಕೌನ್ಸೆಲಿಂಗ್ ನಡೆಸಿ ಅವರನ್ನು ಪೋಷಕರಿಗೆ ಒಪ್ಪಿಸಲಾಗಿದೆ’ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಎಂ., ‘ಇತ್ತೀಚೆಗೆ ಮಕ್ಕಳು ಮನೆ ಬಿಟ್ಟು ಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಿ, ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಬೆಳೆಯಲು ಬಿಡಬೇಕು. ಶಿಕ್ಷಕರು ಮಕ್ಕಳಲ್ಲಿರುವ ವಿಶೇಷ ಆಸಕ್ತಿಯನ್ನು ಗುರುತಿಸಬೇಕು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ‘ಈ ಮೊದಲು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನನಗೆ ಈ ಹುದ್ದೆ ದೊರಕಿದ ಮೇಲೆ ಮಕ್ಕಳ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಲು ಒಳ್ಳೆಯ ಅವಕಾಶ ದೊರೆತಿದೆ’ ಎಂದು ಹೇಳಿದರು.

ಮಕ್ಕಳ ಸ್ನೇಹಿ ಅಧಿಕಾರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.

‘ಮಕ್ಕಳಿಗಾಗಿ ಮಕ್ಕಳ ಹಕ್ಕು’ ಎಂಬ ಪುಸ್ತಕವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೇಷ್ಮಾ ಕೌಸರ್, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಬಿದರಿ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ನಾಯ್ಕ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಶೋಕ್‍ಕುಮಾರ್, ರಾಜ್ಯ ವಕೀಲರ ಸಂಘದ ಸದಸ್ಯ ಎಲ್.ಎಚ್. ಅರುಣಕುಮಾರ್, ಬ್ರೆಡ್ಸ್ ಸಂಸ್ಥೆ  ಕಾರ್ಯಕಾರಿ ನಿರ್ದೇಶಕ ಫಾ. ಜಾಯ್ ನೆಡುಂಪರಂಬಿಲ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.