ಕೋವಿಡ್ 3ನೇ ಅಲೆ ತಡೆಗಟ್ಟಲು ಕ್ರಮ: ಸಿಇಒ

ದಾವಣಗೆರೆ: ‘ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧನೆ ಹಾಗೂ ಸದೃಢ ಆರೋಗ್ಯಕ್ಕಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವಿಗೆ ಆಯುಷ್ ಇಲಾಖೆಯಿಂದ ₹ 175 ಮೌಲ್ಯದ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ತಾಯಂದಿರು ಇದನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಳ್ಳಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಮಾತೃವಂದನಾ ಸಪ್ತಾಹದ ಅಂಗವಾಗಿ ಆಯುಷ್ ಬಾಲ ಸಂಜೀವಿನಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ ಎದುರಾದಲ್ಲಿ ಮಕ್ಕಳಿಗೆ ರಕ್ಷಣೆ ಹಾಗೂ ಚಿಕಿತ್ಸೆ ಒದಗಿಸಲು ಬೇಕಾದ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಸದೃಢತೆಗಾಗಿ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಆರೋಗ್ಯ ಸಮೀಕ್ಷೆ ನಡೆಸಿ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.
‘ಜಿಲ್ಲೆಯ ಸುಮಾರು 8 ಸಾವಿರ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ, ಸ್ಪಿರುಲಿನ ಚಿಕ್ಕಿ ಸೇರಿದಂತೆ ಆಯುಷ್ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಒಂದು ತಿಂಗಳಲ್ಲಿ ಚೂರ್ಣ ತೆಗೆದುಕೊಳ್ಳುತ್ತಿದ್ದ ಮಕ್ಕಳ ಪೈಕಿ 10 ಮಕ್ಕಳ ಆರೋಗ್ಯ ಸುಧಾರಣೆಗೊಂಡಿದ್ದು, 600 ಮಕ್ಕಳು ಸಾಮಾನ್ಯ ಹಂತಕ್ಕೆ ತಲುಪಿವೆ. ಸಿಎಸ್‍ಆರ್ ಫಂಡ್ ಅಡಿ ₹ 30 ಲಕ್ಷದ ಅನುದಾನಲ್ಲಿ ಆಯುಷ್ ಔಷಧಿಗಳ ಕಿಟ್‍ಗಳನ್ನು ತುಮಕೂರಿನಿಂದ ತರಿಸಿದ್ದು, ಪೋಷಕರು ನಿರ್ಲಕ್ಷ್ಯ ವಹಿಸದೇ ನಿರಂತರವಾಗಿ ತಮ್ಮ ಮಕ್ಕಳಿಗೆ ನೀಡಬೇಕು’ ಎಂದರು.
‘ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಬಾಧಿತ ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್, ಮಕ್ಕಳ ಸ್ನೇಹಿ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿಕೊಂಡಿದೆ. ಹೆಚ್ಚುವರಿ ಮಕ್ಕಳ ತಜ್ಞರು ಹಾಗೂ ಶುಶ್ರೂಷಕರಿಗೆ ತರಬೇತಿ ನೀಡಲಾಗಿದ್ದು, ತಜ್ಞರ ಸಲಹೆ ಮೇರೆಗೆ ಬೇಕಾದ ಔಷಧಿಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದೇವೆ’ ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಮಾತನಾಡಿ, ‘ಜಿಲ್ಲೆಯಲ್ಲಿ 180 ಸ್ಯಾಮ್ ಮಕ್ಕಳು ಹಾಗೂ 5,400 ಮ್ಯಾಮ್ ಮಕ್ಕಳು ಸೇರಿದಂತೆ ಒಟ್ಟು 5,580 ಮಕ್ಕಳಿಗೆ ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಅರವಿಂದಾಸವ ಮತ್ತು ಕೂಷ್ಮಾಂಡ ರಸಾಯನ ಔಷಧಿಗಳನ್ನು ನೀಡುತ್ತಿದ್ದು, ಇದರಿಂದ ಉತ್ತಮ ಹಸಿವು, ನಿದ್ರೆ, ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವುದರೊಂದಿಗೆ, ಕೋವಿಡ್ ಸೋಂಕನ್ನು ತಡೆಗಟ್ಟಬಹುದು’ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ‘ಈ ಹಿಂದೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದರೆ ಅಂಗನವಾಡಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಈಗ ಜಿಲ್ಲಾ ಪಂಚಾಯಿತಿ ಸಿಇಒ ಅವರ ಆಸಕ್ತಿಯಿಂದಾಗಿ ₹30 ಲಕ್ಷ ಅನುದಾನದಲ್ಲಿ ಗ್ರಾಸಿಂ ಇಂಡಸ್ಟ್ರಿಯಿಂದ ಮಕ್ಕಳಿಗೆ ಚೂರ್ಣ ಹಾಗೂ ಆಯುಷ್ ಇಲಾಖೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ತರಿಸುತ್ತಿರುವುದರಿಂದ ಅಪೌಷ್ಟಿಕ ಮಕ್ಕಳ ಬೆಳವಣಿಗೆಗೆ ಹೆಚ್ಚು ಉಪಯುಕ್ತವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ಪೋಷಕರಿಗೆ ಅರವಿಂದಾಸವ, ಕೂಷ್ಮಾಂಡ ರಸಾಯನ, ಚ್ಯಾವನಪಾಶದ ಲೆಹ್ಯದ ಕಿಟ್ ವಿತರಣೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್ ಹಾಗೂ ಅಧಿಕಾರಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.