ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ಗುಂಟೆಯಲ್ಲಿ ಹತ್ತಾರು ಬೆಳೆ!

ಬೈರನಹಳ್ಳಿಯ ರೈತ ಪಂಚಾಕ್ಷರಯ್ಯ ಪ್ರಯತ್ನ
Last Updated 6 ಜುಲೈ 2022, 4:33 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ‘ಆಗದು ಎಂದು ಕೈಕಟ್ಟಿ ಕುಳಿತರೆ ಏನೂ ಮಾಡಲು ಆಗುವುದಿಲ್ಲ. ಮಾಡುವ ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು’ ಎಂಬುದಕ್ಕೆ ಹೋಬಳಿಯ ಬೈರನಹಳ್ಳಿಯ ರೈತ ಎಂ. ಪಂಚಾಕ್ಷರಯ್ಯ ನಿದರ್ಶನರಾಗಿದ್ದಾರೆ.

ತಮ್ಮ 10 ಗುಂಟೆ ಜಮೀನಿನಲ್ಲಿ 8 ವರ್ಷಗಳ ಹಿಂದೆ ಅಡಿಕೆ ಗಿಡ ನಾಟಿ ಮಾಡಿದ್ದ ಇವರು, ಅಡಿಕೆ ಫಲ ನೀಡಲು ಆರಂಭಿಸಿದಾಗ ಅಂತರ ಬೆಳೆ ಬೆಳೆದರೆ ಲಾಭ ದೊರೆಯಬಹುದು ಅನ್ನಿಸಿ 2 ವರ್ಷಗಳ ಹಿಂದೆ ಕಾಳುಮೆಣಸು ಬಳ್ಳಿ ಹಬ್ಬಿಸಿದರು. ಅಡಿಕೆ ಫಸಲು ನೀಡಲು ಆರಂಭಿಸಿದೆ. ಅದರೊಟ್ಟಿಗೆ ಕಾಳು ಮೆಣಸು ಈ ವರ್ಷದಿಂದ ಫಸಲು ನೀಡುತ್ತಿದೆ.

‘ಇವುಗಳೊಟ್ಟಿಗೆ ಇನ್ನಿತರ ಬೆಳೆಗಳನ್ನೂ ಬೆಳೆದರೆ ಹೇಗೆ? ಎಂದು ಯೋಚಿಸಿ, ಬೇರೆ ಬೇರೆ ತೋಟಗಳಿಗೆ ಭೇಟಿ ನೀಡಿದೆ. ಸಾಂಬಾರ್‌ ಪದಾರ್ಥಗಳಿಗೆ ಬೆಲೆ ಇದೆ ಎಂದು ತಿಳಿದುಬಂತು. ಅದರ ಕಡೆ ಒಲವು ಮೂಡಿತು. 150 ಅಡಿಕೆ ಮರಗಳ ನಡುವೆ 150 ಕಾಳುಮೆಣಸು ಬಳ್ಳಿ, 150 ಜಾಯಿಕಾಯಿ ಸಸಿಗಳು, 150 ಲವಂಗ ಸಸಿಗಳು, 150 ಏಲಕ್ಕಿ ಸಸಿಗಳು ಹಾಗೂ 150 ಶ್ರೀಗಂಧದ ಸಸಿಗಳನ್ನು ಮಲೆನಾಡ ಸೀಮೆಯಿಂದ ಕೊಂಡು ತಂದು ವರ್ಷದ ಕೆಳಗೆ ನಾಟಿ ಮಾಡಿದ್ದಾರೆ. ಸಾಂಬಾರ್‌ ಪದಾರ್ಥದ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ನೆರಳು ಬೇಕಿರುವುದರಿಂದ 150 ಪಪ್ಪಾಯ ಗಿಡಗಳನ್ನು ನಾಟಿ ಮಾಡಿದ್ದೇನೆ’ ಎಂದು ತಿಳಿಸಿದರು.

‘ವರ್ಷಕ್ಕೆ ಎರಡು ಬಾರಿ ಗೊಬ್ಬರ ನೀಡುತ್ತೇನೆ. ತಿಂಗಳಿಗೊಮ್ಮೆ ಜೀವಾಮೃತ ಹಾಕುತ್ತೇನೆ. ಗಿಡಗಳಿಗೆ ನೀರು ಹಾಕಲು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಹೊಲದ ತುಂಬ ಗಿಡಗಳು ಇರುವುದರಿಂದ ಟ್ರ್ಯಾಕ್ಟರ್ ಉಳುಮೆ ಇಲ್ಲ. ಕೈ ಕೆಲಸ ಜಾಸ್ತಿ, ಹೊಲದೊಳಗೆ ಹೆಚ್ಚು ನೆರಳು ಇರುವುದರಿಂದ ಕಳೆಯ ಸಮಸ್ಯೆ ಇಲ್ಲ. ಕೆಲವು ಪ್ರದೇಶದಲ್ಲಿ ಬಿಸಿಲು ಹೆಚ್ಚಾಗುತ್ತದೆ ಎಂದು ಬಾಳೆ ಹಾಕಿದ್ದೇನೆ. ಮನೆಗಾಗಿ ಮೂರು ತೆಂಗಿನ ಮರಗಳನ್ನು ಬೆಳೆಸಿದ್ದೇನೆ’ ಎಂದು ತಿಳಿಸಿದರು.

‘ಸದ್ಯ ಪ್ರಾಯೋಗಿಕವಾಗಿ ವೈವಿಧ್ಯಮಯ ಕೃಷಿ ಮಾಡುತ್ತಿದ್ದೇನೆ. ಇದರಲ್ಲಿ ಯಶಸ್ಸು ದೊರೆತರೆ ಇನ್ನೂ ಒಂದೂವರೆ ಎಕರೆ ಜಮೀನಿನಲ್ಲಿ ಈ ವಿಧಾನವನ್ನು ವಿಸ್ತರಿಸುವೆ. ಹಲವು ರೈತರು ಬಂದು ನನ್ನ ಕೃಷಿ ವಿಧಾನವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮನೆಯವರು ಸಹಕಾರ ನೀಡುತ್ತಿದ್ದಾರೆ. ಈಗ ಏಲಕ್ಕಿ ಕಾಯಿ ಉತ್ತಮ ಫಲ ಬಿಟ್ಟಿದೆ. ಇದಕ್ಕೆ ನಾನು ಹೆಚ್ಚು ಖರ್ಚು ಮಾಡುತ್ತಿಲ್ಲ. ಅಡಿಕೆ ಬೆಳೆಗೆ ತೋರಿಸುವ ಕಾಳಜಿಯನ್ನೇ ಇವುಗಳಿಗೆ ತೋರಿಸುತ್ತಿದ್ದೇನೆ’ ಎಂದು ವಿವರಿಸಿದರು.

₹ 6 ಲಕ್ಷಕ್ಕೂ ಹೆಚ್ಚು ಆದಾಯ ನಿರೀಕ್ಷೆ

‘ಪಪ್ಪಾಯ ಗಿಡ ನಾಟಿ ಮಾಡಿ 8 ತಿಂಗಳಿಗೆ ಫಸಲು ನೀಡಲು ಆರಂಭಿಸಿದೆ. ಕೆ.ಜಿ.ಗೆ ₹ 10ರಂತೆ ಮಾರಾಟ ಮಾಡುತ್ತಿದ್ದೇನೆ. ಈಗ ಅಡಿಕೆ, ಕಾಳುಮೆಣಸು ಮತ್ತು ಪಪ್ಪಾಯ ಫಲ ನೀಡುತ್ತಿದೆ. ಇವುಗಳಿಂದ ವಾರ್ಷಿಕ ₹ 2 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ. ಉಳಿದ ಬೆಳೆ ಫಲ ನೀಡಲು ಇನ್ನೂ ಎರಡರಿಂದ ಮೂರು ವರ್ಷ ಬೇಕು. ಅವು ಫಸಲು ಕೈಸೇರಿದರೆ ಏನಿಲ್ಲವೆಂದರೂ ಕೇವಲ 10 ಗುಂಟೆ ಜಮೀನಿನಲ್ಲಿ ₹ 6 ಲಕ್ಷಕ್ಕೂ ಹೆಚ್ಚು ಆದಾಯ ಬರಲಿದೆ’ ಎಂದು ಪಂಚಾಕ್ಷರಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT