ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್, ಜಗಜೀವನರಾಂ ಆದರ್ಶ ಸ್ಮರಣೀಯ

ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದ ಸಂಸದ ಜಿ.ಎಂ. ಸಿದ್ದೇಶ್ವರ
Last Updated 15 ಏಪ್ರಿಲ್ 2021, 6:43 IST
ಅಕ್ಷರ ಗಾತ್ರ

ದಾವಣಗೆರೆ: ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆಗಳನ್ನು ಪ್ರತಿಪಾದಿಸುವುದರೊಂದಿಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದ ಅಂಬೇಡ್ಕರ್ ಅವರು ಮೊದಲ ಬಾರಿಗೆ ದೇಶಕ್ಕೆ ಡಾಕ್ಟರೇಟ್ ಪದವಿ ತಂದುಕೊಟ್ಟು, ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಸ್ಥಾಪಿಸುವಲ್ಲಿ ಮಾರ್ಗದರ್ಶನ ಮಾಡಿದ ಚಿಂತನಕಾರ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಬಾಬೂ ಜಗಜೀವನರಾಂ ಅವರ 114ನೇ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್, ಜಗಜೀವನ ರಾಂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಕಾರ್ಮಿಕರ 12 ಗಂಟೆಯ ಕೆಲಸದ ಅವಧಿಯನ್ನು 8 ಗಂಟೆಗೆ ಕಡಿತಗೊಳಿಸಿದರು. ದುಡಿಯುವ ಗರ್ಭಿಣಿಯರಿಗೆ 3 ತಿಂಗಳ ಹೆರಿಗೆ ರಜೆ ನೀಡಿದ್ದ ಅಂಬೇಡ್ಕರ್ 64 ವಿಷಯಗಳಲ್ಲಿ ಪರಿಣಿತರಾಗಿದ್ದರು. 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು ಎಂದು ಶ್ಲಾಘಿಸಿದರು.

ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಆರ್.ಟಿ.ಒ ಆಫೀಸ್ ಬಳಿ ಜಾಗ ಗುರುತಿಸಲಾಗಿದೆ. ಸಂಘಟನೆಗಳು ಒಪ್ಪಿಕೊಂಡಿವೆ. ಮೇ ತಿಂಗಳ ಅಂತ್ಯದಲ್ಲಿ ಮುಖ್ಯಮಂತ್ರಿಗಳಿಂದ ಶಂಕು ಸ್ಥಾಪನೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಬಾಬೂ ಜಗಜೀವನರಾಂ ಅಪ್ರತಿಮ ಸಂಘಟನಕಾರರು. ಇವರ ಪರಿಶ್ರಮದ ಫಲವಾಗಿ ದೇಶ ಇಂದು ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಗಿದೆ. ಐದು ದಶಕಗಳ ಕಾಲ ಸಂಸದರಾಗಿದ್ದ ಜಗಜೀವನರಾಂ ಅವರು ರೈತರ ಬೆಳೆ ಉತ್ಪಾದನೆಯ ಹೆಚ್ಚಳಕ್ಕೆ ಕಾರಣರಾಗಿದ್ದರು ಎಂದರು.

ಮೇಯರ್‌ ಎಸ್.ಟಿ. ವೀರೇಶ್, ‘ಅಂಬೇಡ್ಕರ್ ಅವರು ಇಡೀ ದೇಶದ ವಿಶ್ವಕೋಶ. ಅವರಲ್ಲಿದ್ದ ಜ್ಞಾನದಿಂದ ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಟ ಮಾಡಿದವರು. ಸಮಸ್ಯೆಗಳನ್ನು ಮಾತ್ರ ಬಿಂಬಿಸದೆ ಪರಿಹಾರವನ್ನು ಸಂವಿಧಾನದ ಮೂಲಕ ನೀಡಿದವರು’ ಎಂದು ಕೊಂಡಾಡಿದರು.

ಹೆಗ್ಗೆರೆ ರಂಗಪ್ಪ ಹಾಗೂ ಐರಣಿ ಚಂದ್ರು ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಅಂಬೇಡ್ಕರ್ ಹಾಗೂ ಬಾಬೂ ಜಗಜೀವನರಾಂ ಬಗೆಗೆ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಶಾಲಾ ಮಕ್ಕಳನ್ನು ಸನ್ಮಾನಿಸಲಾಯಿತು.

ಉಪನ್ಯಾಸಕ ಡಾ.ಎಚ್.ವಿಶ್ವನಾಥ್ ಹಸಿರು ಕ್ರಾಂತಿ ಹರಿಕಾರ ಬಾಬೂ ಜಗಜೀವನರಾಂ ಬಗೆಗೆ ಉಪನ್ಯಾಸ ನೀಡಿದರು. ನಿವೃತ್ತ ಪ್ರಾಧ್ಯಾಪಕರು ಹಾಗೂ ಅಂಬೇಡ್ಕರ್ ವಿಚಾರಧಾರೆಗಳ ಚಿಂತಕರಾದ ಟಿ.ರಾಜಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಆಲೂರು ಲಿಂಗರಾಜು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿದರು.

ಶಾಸಕ ಎಸ್‌.ಎ ರವೀಂದ್ರನಾಥ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರೊ. ಲಿಂಗಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಉಪಾಧ್ಯಕ್ಷರಾದ ಸಾಕಮ್ಮ ಗಂಗಾಧರ್ ನಾಯ್ಕ್‌, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರಪ್ಪ, ಸದಸ್ಯರಾದ ತೇಜಸ್ವಿ ಪಟೇಲ್, ಕೆ.ಎಸ್‌. ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಡಿಸಿ ಪೂಜಾರ‌ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಕೌಸರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್, ತಹಶೀಲ್ದಾರ್‌ ಗಿರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT