ಚಿಕ್ಕಬಿದರೆಯಲ್ಲಿ ಕಾಣಿಸಿಕೊಳ್ಳುತ್ತಿದೆ ಚಿರತೆ: ಆತಂಕ

ಹರಿಹರ: ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ 6 ದಿನಗಳಲ್ಲಿ ಚಿರತೆ ದಾಳಿಗೆ 4 ಕುರಿಗಳು ಬಲಿಯಾಗಿದ್ದು, 1 ಕುರಿ ಗಾಯಗೊಂಡಿದೆ. ಹೊಲ ಹಾಗೂ ಗುಡ್ಡದ ಆಸುಪಾಸಿನಲ್ಲಿ ನಿತ್ಯ ಚಿರತೆ ಕಾಣಿಸಿಕೊಳ್ಳುತ್ತಿರುವುದು ಕುರಿಗಾಹಿಗಳು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
‘ಗ್ರಾಮದಲ್ಲಿ 18 ಕುರಿ ದೊಡ್ಡಿಗಳಿದ್ದು, 3 ಸಾವಿರಕ್ಕೂ ಹೆಚ್ಚು ಕುರಿಗಳಿವೆ. ಚಿರತೆ ಭಯದಿಂದ ಕುರಿಗಳನ್ನು ಮೇಯಲು ಕರೆದೊಯ್ಯದಂತಾಗಿದೆ’ ಎಂದು ಕುರಿಗಾಹಿ ನಾಗರಾಜಪ್ಪ ಅಳಲು
ತೋಡಿಕೊಂಡರು.
‘ನಮ್ಮ ಬದುಕಿನ ಆಸರೆಯಾಗಿರುವ ಕುರಿಗಳನ್ನು ರಕ್ಷಿಸಿಕೊಳ್ಳಲು ಸರ್ಕಾರ, ಏರ್ ಗನ್‍ಗಳನ್ನು ಒದಗಿಸಬೇಕು ಹಾಗೂ ಚಿರತೆ ದಾಳಿಗೆ ಬಲಿಯಾದ ಕುರಿಗಳ ಮಾಲೀಕರಿಗೆ ಪರಿಹಾರ ಒದಗಿಸಬೇಕು’ ಎಂದು ಅವರು ಆಗ್ರಹಿಸಿದರು.
‘3 ದಿನಗಳ ಹಿಂದೆ ಗ್ರಾಮದ ಗುಡ್ಡದಲ್ಲಿ ಕುರಿಗಳನ್ನು ಮೇಯಿಸಲು ಕರೆದೊಯ್ದಾಗ ಏಕಾಏಕಿ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿತ್ತು. ಕುರಿ ಹಿಡಿದೊಯ್ಯಲು ಯತ್ನಿಸಿತು. ಚೆಲ್ಲಾಪಿಲ್ಲಿಯಾದ ಕುರಿಗಳ ಗಲಾಟೆಗೆ ಬೆದರಿ ಹಿಡಿದ ಕುರಿಯನ್ನು ಬಿಟ್ಟು ಓಡಿಹೋಯಿತು. ಗಾಯಗೊಂಡ ಕುರಿಗೆ ಔಷಧೋಪಚಾರ ಮಾಡುತ್ತಿದ್ದೇವೆ’ ಎಂದು ಕಣ್ಣೀರಿಟ್ಟರು ಮೈಲಮ್ಮ.
‘ಚಿರತೆ ದಾಳಿ ಕಾರಣ ಬುಧವಾರ ರಾತ್ರಿ ಕಾವಲು ಕಾಯತ್ತಿದ್ದೆವು. ಮಧ‍್ಯರಾತ್ರಿ 2.30ರ ಸುಮಾರಿಗೆ ಕುರಿ ದೊಡ್ಡಿ ಬಳಿ ಶಬ್ದವಾದ ಅನುಭವವಾಗಿ ಟಾರ್ಚ್ ಬಿಟ್ಟು ನೋಡಿದರೆ ಎದುರಿಗೆ ಚಿರತೆ ಪ್ರತ್ಯಕ್ಷವಾಗಿತ್ತು. ಕೂಡಲೇ ಕೂಗಿ ಜನರನ್ನು ಎಚ್ಚರಿಸಿದೆ. ಕಬ್ಬಿನ ಗದ್ದೆಯಲ್ಲಿ ಚಿರತೆ ಕಣ್ಮರೆಯಾಯಿತು’ ಎಂದು ಭಯದಿಂದ ಹೇಳಿದರು ಹಾಲೇಶಪ್ಪ.
ಚಿರತೆ ದಾರಿತಪ್ಪಿ ಗ್ರಾಮದತ್ತ ಬಂದಿರಬಹುದು. ಅದನ್ನು ಸುರಕ್ಷಿತವಾಗಿ ಹಿಡಿದು ದೊಡ್ಡ ಅರಣ್ಯದಲ್ಲಿ ಬಿಟ್ಟು ಬರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಕುರಿಗಾಹಿ ಗುಡ್ಡಪ್ಪ ಒತ್ತಾಯಿಸಿದರು.
ಚಿರತೆ ಭೀತಿಯಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಬಿತ್ತನೆ ಮಾಡಿದ ಬೆಳೆಗೆ ನೀರು ಹಾಯಿಸಲು ರಾತ್ರಿ ವೇಳೆ ಯಾರೂ ಹೊಲಗಳತ್ತ ಸುಳಿಯುತ್ತಿಲ್ಲ. ಕೂಡಲೇ, ಚಿರತೆಯನ್ನು ಬಂಧಿಸಿ, ಗ್ರಾಮಸ್ಥರ ಆತಂಕ ನಿವಾರಿಸಬೇಕು ಎಂದು ಗ್ರಾಮಸ್ಥ ಫಕ್ಕಿರೇಶ್ ಆಗ್ರಹಿಸಿದರು.
ಹರಿಹರ ಹಾಗೂ ಹರಪನಹಳ್ಳಿ ಅರಣ್ಯ ಪ್ರದೇಶಗಳ ಗಡಿ ಹೊಂದಿಕೊಂಡಿದೆ. ಹರಪನಹಳ್ಳಿ ವಲಯದಲ್ಲಿ ಚಿರತೆಗಳಿದ್ದು, ಅಲ್ಲಿಂದ 4 ಚಿರತೆಗಳು ಈ ಭಾಗಕ್ಕೆ ಬಂದಿರಬಹುದು. ಆಹಾರದ ಹುಡುಕಾಟದಲ್ಲಿ ಅರಣ್ಯ ಪ್ರದೇಶದಿಂದ ಗ್ರಾಮದೆಡೆಗೆ ಚಲಿಸಿರುವ ಸಾಧ್ಯತೆಗಳಿವೆ. ಅವುಗಳನ್ನು ಬಂಧಿಸಿಲು ಬಲೆ ಬೀಸಿದ್ದು, ಬಲೆ ಬಿದ್ದ ತಕ್ಷಣ ಸುರಕ್ಷಿತವಾಗಿ ಅರಣ್ಯದಲ್ಲಿ ಬಿಡುವ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಲಯ ಅರಣ‍್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್ ಹೇಳಿದರು.
ಆಹಾರಕ್ಕಾಗಿ ಗ್ರಾಮದತ್ತ ಚಿರತೆ ಬಂದಿರಬಹುದು. ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸಾಗಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಜರುಗಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.