ಚುನಾವಣೆಯಲ್ಲಿ ಪಾಠ ಕಲಿಸುವ ಎಚ್ಚರಿಕೆ ನೀಡಿದ ಸ್ವಾಮೀಜಿ

ದಾವಣಗೆರೆ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಪ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದಂತೆ ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇಲ್ಲದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆ ವೇಳೆ ನಮ್ಮ ಸಮಾಜದವರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಆರ್ಯ ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
‘ಮಸ್ಕಿ ಉಪಚುನಾವಣೆ ವೇಳೆ ಮುಖ್ಯಮಂತ್ರಿ ಭರವಸೆ ನೀಡಿರುವಂತೆ ಸಮಾಜದ ಕುಲಗುರು ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಮಗ ಸ್ಥಾಪಿಸಬೇಕು. ಕುಲಕಸುಬಾದ ಸೇಂದಿ ಇಳಿಸುವುದನ್ನು ನಿಲ್ಲಿಸಿದ ಬಳಿಕ ಈಡಿಗ ಸಮಾಜದವರು ಸಂಕಷ್ಟದಲ್ಲಿದ್ದು, ಹಲವರು ಬೀದಿ ಪಾಲಾಗಿದ್ದಾರೆ. ಹೀಗಾಗಿ ಸರ್ಕಾರದ ವಶದಲ್ಲಿರುವ ಈಚಲು ವನದ ಪ್ರದೇಶವನ್ನು ಉಳುಮೆ ಮಾಡಲು ಈಡಿಗ ಸಮಾಜದವರಿಗೆ ನೀಡಬೇಕು’ ಎಂದು ಸ್ವಾಮೀಜಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘26 ಒಳಪಂಗಡಗಳನ್ನು ಒಳಗೊಂಡಿರುವ ನಮ್ಮ ಸಮಾಜದ ಜನಸಂಖ್ಯೆ 80 ಲಕ್ಷ ಇದೆ. ಬಿಜೆಪಿಯಲ್ಲಿ ನಮ್ಮ ಸಮಾಜದ ಏಳು ಶಾಸಕರಿದ್ದರು, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ಬಿಟ್ಟು ಬಂದು, ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಚುನಾವಣೆಯಲ್ಲಿ ಸೋಲಿಸಿದ ಮಾಲಿಕಯ್ಯ ಗುತ್ತೇದಾರ್ ಅವರಿಗೆ ಇನ್ನೂ ಸಚಿವ ಸ್ಥಾನ ನೀಡಿಲ್ಲ. ರಾಜಕೀಯವಾಗಿ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.
‘ನಮ್ಮ ಕುಲಕಸುಬನ್ನು ನಿಷೇಧಿಸಿರುವುದರಿಂದ ಸಮಾಜವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಬೇಡಿಕೆ ನನೆಗುದಿಗೆ ಬಿದ್ದಿದೆ. ಎಂ.ಎಸ್.ಐ.ಎಲ್‌ನ ಎಂ.ಆರ್.ಪಿ. ಶೋರೂಂಗಳಲ್ಲಿ ಶೇ 50ರಷ್ಟು ಸಿಬ್ಬಂದಿಗಳನ್ನು ನಮ್ಮ ಸಮಾಜದವರನ್ನೇ ನೇಮಕ ಮಾಡಿಕೊಳ್ಳಬೇಕು. ಮಲೆನಾಡು ನಟ್ಸ್ ನಿರ್ವಹಣೆಯ ಜವಾಬ್ದಾರಿಯನ್ನು ಸಮಾಜದವರಿಗೇ ನೀಡಬೇಕು’ ಎಂದು ಒತ್ತಾಯಿಸಿದರು.
ಈಡಿಗ ಸಮಾಜದ ಮುಖಂಡ ಎ. ಉಮೇಶ್ ಹಾಜರಿದ್ದರು.
25ಕ್ಕೆ ಚಿಂತನ–ಮಂಥನ ಸಭೆ
ಸಮಾಜದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಹಾಗೂ ಸಮಾಜದ ಸಂಘಟನೆ ಬಗ್ಗೆ ಚರ್ಚಿಸಲು ಜುಲೈ 25ರಂದು ಬೆಳಿಗ್ಗೆ 10ಕ್ಕೆ ಗಂಗಾವತಿಯ ಹೇಮಕೂಟದಲ್ಲಿ ಆರ್ಯ ಈಡಿಗ ಸಮಾಜದ ಚಿಂತನ–ಮಂಥನ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
‘ಮಾಲೀಕಯ್ಯ ಗುತ್ತೇದಾರ್ ಸೇರಿ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಗೆ ಪೂರ್ವಭಾವಿಯಾಗಿ ಎಲ್ಲಾ ಜಿಲ್ಲೆಗಳಿಗೂ ತೆರಳಿ ಸಮಾಜದ ಮುಖಂಡರ ಜೊತೆಗೆ ಸಭೆ ನಡೆಸುತ್ತಿದ್ದೇನೆ’ ಎಂದು ಸ್ವಾಮೀಜಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.