ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕ ರೈಲ್ವೆಗೇಟ್‌ ಪರಿಶಿಲಿಸಿದ ಜಿಲ್ಲಾಧಿಕಾರಿ

ಮೇಲ್ಸೇತುವೆ ಅಥವಾ ಕೆಳಸೇತುವೆ ಯಾವುದು ಸೂಕ್ತ ಎಂಬುದು ಶೀಘ್ರದಲ್ಲಿ ತೀರ್ಮಾನ
Last Updated 10 ಸೆಪ್ಟೆಂಬರ್ 2019, 14:49 IST
ಅಕ್ಷರ ಗಾತ್ರ

ದಾವಣಗೆರೆ: ದಶಕಗಳಿಂದ ನನೆಗುದಿಗೆ ಬಿದ್ದಿರುವ ನಗರದ ಅಶೋಕ ಟಾಕೀಸ್ ಬಳಿ ಇರುವ ರೈಲ್ವೆ ಗೇಟ್‌ನಲ್ಲಿ ಸಂಚಾರ ದಟ್ಟಣೆ ಹಾಗೂ ರೈಲು ಬರುವಾಗ ಗೇಟ್ ಹಾಕುವುದರಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.

ಕಾಲ್ನಡಿಗೆಯಲ್ಲಿ ಎ.ಸಿ. ಕಚೇರಿಯಿಂದ ತೆರಳಿದ ಜಿಲ್ಲಾಧಿಕಾರಿ ಗಾಂಧಿ ಸರ್ಕಲ್, ಮಂಡಿಪೇಟೆ ಹಾಗೂ ಪುಷ್ಪಾಂಜಲಿ ಥಿಯೇಟರ್‌ವರೆಗೆ ಸಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಯಾವ ರೀತಿಯ ಮಾರ್ಗ ನಿರ್ಮಿಸುವುದರಿಂದ ಅನುಕೂಲವಾಗಲಿದೆ ಎಂದು ನಕಾಶೆ ಮೂಲಕ ಪರಿಶೀಲಿಸಿದರು.

‘ಅಧಿಕಾರಿಗಳು ಈಗಾಗಲೇ 3 ರೀತಿಯಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣದ ಬಗ್ಗೆ ನಕ್ಷೆ ತಯಾರಿಸಿದ್ದಾರೆ. ಅವುಗಳನ್ನು ಸ್ಥಳ ಪರಿಶೀಲನೆಗೆ ಬಂದಿದ್ದೇನೆ. ಇವುಗಳಲ್ಲಿ ಯಾವುದು ಕಾರ್ಯಸಾಧು ಎಂಬುದನ್ನು ತೀರ್ಮಾನಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸಲು ಚಾಲನೆ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಯಾವ ರೀತಿಯ ಮಾರ್ಗ ನಿರ್ಮಿಸುವುದರಿಂದ ಸಾರ್ವಜನಿಕರಿಗೆ ಕಡಿಮೆ ತೊಂದರೆ ಹಾಗೂ ಸರ್ಕಾರಕ್ಕೆ ಹೊರೆಯಾಗದಂತೆ ಎಲ್ಲರಿಗೂ ಅನುಕೂಲವಾಗುವ ಆಯ್ಕೆ ಮಾಡಲಾಗುವುದು. ಇದಕ್ಕಾಗಿ ಎಲ್ಲರ ಸಹಕಾರ ಅವಶ್ಯವಿದ್ದು, ಎಲ್ಲಾ ರಾಜಕೀಯ ಮುಖಂಡರ ಮನವೊಲಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹಿಂದಿನ ಘಟನೆಗಳೆಲ್ಲಾ ಈಗ ಇತಿಹಾಸ. ನಕಾರಾತ್ಮಕ ಭಾವನೆ ಬೇಡ. ನಿಮ್ಮಲ್ಲಿರುವ ಒಳ್ಳೆಯ ಆಲೋಚನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ. ಎಲ್ಲರೂ ಒಗ್ಗಟ್ಟಿನಿಂದ ಒಳಿತಿಗೆ ಶ್ರಮಿಸೋಣ. ಒಂದು ತಂಡವಾಗಿ ಕಾರ್ಯ ನಿರ್ವಹಿಸಲಾಗುವುದು. ಇದು ಯಾರೊಬ್ಬರ ಹಿತಾಸಕ್ತಿ ಅಲ್ಲ. ಊರಿನ ಹಿತಾಸಕ್ತಿ. ಎಲ್ಲರೂ ಮನಸ್ಸು ಮಾಡಿ ಕೈ ಜೋಡಿಸಿದರೆ ಈ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಈ ತಂಡಕ್ಕೆ ನಾನೇ ನಾಯಕ. ಇಪ್ಪತ್ತು ವರ್ಷ ಕಾದಿದ್ದೀರಿ. ಇನ್ನು ಸ್ವಲ್ಪ ದಿನ ಕಾಯಬೇಕು. ಈ ಕಾರ್ಯದಲ್ಲಿ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸವಿದೆ’ ಎಂದರು.

ಬಳಿಕ ಶೇಖರಪ್ಪನಗರಕ್ಕೆ ಭೇಟಿ ನೀಡಿದರು. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು ಕಂಡು, ಇದು ಲಿಂಕ್ ತಪ್ಪಿದ್ದರಿಂದ ಹೀಗಾಗಿದೆ. ಕೂಡಲೇ ಸರಿಪಡಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ತಹಶೀಲ್ದಾರ್‌ ಸಂತೋಷ್‌ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಪಿಡಬ್ಲ್ಯುಡಿ ಎಂಜಿನಿಯರ್‌ಗಳಾದ ರಮೇಶ್, ಮಲ್ಲಿಕಾರ್ಜುನ್, ಆರ್‌ಟಿಒ ಎನ್.ಜೆ. ಬಣಕಾರ್, ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT