ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರಾಠ ಜನಾಂಗದ ಅಭಿವೃದ್ಧಿಗೆ ಪ್ರಾಧಿಕಾರ; ಭಾಷೆಗೆ ಅಲ್ಲ’

Last Updated 20 ನವೆಂಬರ್ 2020, 14:42 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯ ಸರ್ಕಾರ ಮರಾಠ ಭಾಷೆಗೆ ಪ್ರಾಧಿಕಾರ ರಚಿಸಿಲ್ಲ. ಮರಾಠ ಜನಾಂಗಕ್ಕೆ ರಚಿಸಿರುವುದು. ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದಕ್ಕೆ ಅಪಸ್ವರ ಬೇಡ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್‌ ಜಾಧವ್ ಮನವಿ ಮಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಥಿಕವಾಗಿ, ಸಾಮಾಜಿಕವಾಗಿ ಮರಾಠ ಸಮುದಾಯ ಹಿಂದುಳಿದೆ. ರಾಜ್ಯದಲ್ಲಿ 40 ಲಕ್ಷ ಸಮುದಾಯವರು ಇದ್ದಾರೆ.ಅವರ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಾಧಿಕಾರ ರಚಿಸಿದ್ದಾರೆ. ಓಲೈಕೆಗಾಗಿ ರಚಿಸಿಲ್ಲ. ಅವರನ್ನು ಸಮಾಜ ಅಭಿನಂದಿಸುತ್ತದೆ’ ಎಂದರು.

‘ಮರಾಠ ಪ್ರಾಧಿಕಾರ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿನ ಮರಾಠರು ಕನ್ನಡಿಗರೇ ಆಗಿದ್ದಾರೆ. ಅವರ ಮನೆ ಮಾತು ಕನ್ನಡ. 500 ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಇಲ್ಲಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಆಡಳಿತ ನಡೆಸಿದ್ದಾರೆ. ಗವೀಪುರಂನಲ್ಲಿರುವ ಗೋಸಾಯಿ ಮಠ ಮರಾಠರಿಗೆ ಪೂಜ್ಯನೀಯ ಸ್ಥಳ’ ಎಂದು ಹೇಳಿದರು.

ಬೆಳಗಾವಿಯಲ್ಲಿ ಎಂಇಎಸ್‌ ಮಾಡುವ ಪುಂಡಾಟಿಕೆಯನ್ನು ರಾಜ್ಯದ ಮರಾಠ ಜನಾಂಗದವರು ಖಂಡಿಸಿದ್ದಾರೆ. ಆ ಕಾರಣದಿಂದ ಪ್ರಾಧಿಕಾರ ರಚನೆ ವಿರೋಧಿಸುವುದು ಸರಿಯಲ್ಲ. ಕನ್ನಡಿಗರ ಮೇಲೆ ದಾಳಿ ಮಾಡಿದ, ಮತಾಂತರ ಮಾಡಿದ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಆಚರಿಸುವ, ಅಲ್ಪಸಂಖ್ಯಾತರಿಗೆ ಪ್ರವಾಸ ಭಾಗ್ಯ, ಶಾದಿ ಭಾಗ್ಯ ನೀಡಿ ಸಮುದಾಯದಲ್ಲಿ ತಾರತಮ್ಯ ಮಾಡುವ ಸಿದ್ದರಾಮಯ್ಯ ಅವರಿಗೆ ಮರಾಠರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ದೂರಿದರು.

‘ಮರಾಠರೂ ಕನ್ನಡಿಗರೇ. ಪ್ರಾಧಿಕಾರದ ಮೂಲಕ ಹಿಂದುಳಿದವರನ್ನು ಮೇಲೆತ್ತಲು ಎಲ್ಲರೂ ಸಹಕಾರ ನೀಡಿ. ಬಂದ್‌ ಕೈಬಿಡಬೇಕು’ ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೋಪಾಲರಾವ್‌ ಮಾನೆ, ಸೋಮಶೇಖರ್‌ ಪವಾರ್‌, ಪರಶುರಾಮ್‌ ಸಾಳುಂಕೆ, ಮಂಜುನಾಥರಾವ್‌ ಕಾಠೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT