ಮಂಗಳವಾರ, ಮೇ 24, 2022
26 °C
ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಕುಟುಂಬದವರ ಪ್ರತಿಭಟನೆ

ಆಂಬುಲೆನ್ಸ್‌ನಲ್ಲಿ ಆಕ್ಸಿಜನ್ ಇಲ್ಲದೆ ಶಿಶು ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಾಪಟ್ಟಣ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಮುಂಜಾನೆ ಜನಿಸಿದ್ದ ನವಜಾತ ಶಿಶು ಆಕ್ಸಿಜನ್‌ ಕೊರತೆಯಿಂದ ಮೃತಪಟ್ಟಿದ್ದು, ಪೋಷಕರು ಸೇರಿ ನೂರಾರು ಸಾರ್ವಜನಿಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.

ಇಲ್ಲಿನ ಶೃಂಗಾರ್‌ಬಾಗ್‌ ತಾಂಡಾ ನಿವಾಸಿ ಹಾಲೇಶನಾಯ್ಕ್‌ ಅವರ ಪತ್ನಿ ಸ್ವಾತಿ ಅವರನ್ನು ಶುಕ್ರವಾರ ಸಂಜೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ದಾಖಲಿಸಲಾಗಿತ್ತು. ಶನಿವಾರ ಮುಂಜಾನೆ ಸಹಜ ಹೆರಿಗೆಯಾಗಿ ಗಂಡು ಮಗು ಜನಿಸಿತ್ತು. ಆದರೆ, ಮಗುವಿಗೆ ಉಸಿರಾಟದ ತೊಂದರೆ ಇದ್ದ ಕಾರಣ ಹೆರಿಗೆ ಮಾಡಿಸಿದ್ದ ದಾದಿಯವರು ಕೂಡಲೇ ಹೊನ್ನಾಳಿ ಆಸ್ಪತ್ರೆಗೆ ಮಗುವನ್ನು ತೆಗೆದುಕೊಂಡು ಹೋಗಲು ಸೂಚಿಸಿದರು. ತಕ್ಷಣ ಆಂಬುಲೆನ್ಸ್‌ ವ್ಯವಸ್ಥೆಯಾದರೂ ಅದರಲ್ಲಿ ಆಕ್ಸಿಜನ್‌ ಸಿಲಿಂಡರ್‌ ಇರದೇ ಇದ್ದುದರಿಂದ ಮಗು ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದೆ. ಪೋಷಕರು ಮೃತ ಶಿಶುವಿನ ಶವದೊಂದಿಗೆ ಆಸ್ಪತ್ರೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದ ಸಾರ್ವಜನಿಕರು ಆಸ್ಪತ್ರೆಯ ಮುಂದೆ ಜಮಾಯಿಸಿ ಅವ್ಯವಸ್ಥೆಯ ಬಗ್ಗೆ ಪ್ರತಿಭಟನೆ ನಡೆಸಿದರು. ತಾಲ್ಲೂಕು ಆರೋಗ್ಯಾಧಿ
ಕಾರಿ ಡಾ.ಪ್ರಭು ಸ್ಥಳಕ್ಕೆ ಬಂದು ಜನರನ್ನು ಸಮಾಧಾನಗೊಳಿಸಲು ಯತ್ನಿಸಿದರು. ಆದರೆ, ಪ್ರತಿಭಟನಕಾರರು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಆಂಬುಲೆನ್ಸ್‌ ವ್ಯವಸ್ಥಾಪಕರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.

ಸೋಮವಾರ ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಕರೆಸುವುದಾಗಿ ಡಾ.ಪ್ರಭು ಅವರು ಭರವಸೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ. ನಾಗರಾಜ್‌, ಬಿಜೆಪಿ ಮುಖಂಡ ಬಿ.ಜಿ. ಬಸವರಾಜ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೈಯದ್‌ ರಫೀಕ್‌, ಮಾಜಿ ಅಧ್ಯಕ್ಷ ಬಿ.ಜಿ. ಯೋಗೇಶ್‌, ಸದಸ್ಯರಾದ ನೂರ್ಯಾನಾಯ್ಕ, ಮಂಜುನಾಥನಾಯ್ಕ, ಎಂ.ಎಸ್‌. ರಮೇಶ್‌, ವಾಹಿದಾ ಹಿದಾಯತ್‌ ಅವರು ಜನರನ್ನು ಸಮಾಧಾನಪಡಿಸಿದರು.

ನಂತರ ಶೃಂಗಾರ್‌ಬಾಗ್‌ ತಾಂಡಾದಲ್ಲಿ ಮಗುವಿನ ಅಂತ್ಯಕ್ರಿಯೆ ನಡೆಯಿತು ಎಂದು ಮಂಜಾನಾಯ್ಕ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.