ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಹದಡಿ ಕೆರೆ ಏರಿ: ಶುರುವಾಯಿತು ರಸ್ತೆ ಬಿರುಕು ಮುಚ್ಚುವ ಕಾಮಗಾರಿ

‘ಪ್ರಜಾವಾಣಿ’ ವರದಿಯಿಂದ ಎಚ್ಚೆತ್ತುಕೊಂಡ ಇಲಾಖೆ
Last Updated 28 ಜೂನ್ 2022, 4:33 IST
ಅಕ್ಷರ ಗಾತ್ರ

ದಾವಣಗೆರೆ: ಅಪಾಯದ ಮುನ್ಸೂಚನೆ ಅರಿತ ಲೋಕೋಪಯೋಗಿ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದ್ದು, ಹದಡಿ ಕೆರೆ ಏರಿಯ ಬಿರುಕು ಸರಿಪಡಿಸುವ ಕಾಮಗಾರಿ ಸೋಮವಾರ ಆರಂಭಗೊಂಡಿದೆ.

ದಾವಣಗೆರೆಯಿಂದ ಚನ್ನಗಿರಿ ಕಡೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ– 65ರಲ್ಲಿ ಹದಡಿ ಕೆರೆ ಏರಿಯ ಮೇಲೆ ಎಡಬದಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ದಿನೇ ದಿನೇ ಬಿರುಕು ದೊಡ್ಡದಾಗುತ್ತಾ ಸಾಗಿದ್ದು, ರಸ್ತೆ ಕೆಳಗೆ ಕುಸಿಯತೊಡಗಿತ್ತು. ಕುಕ್ಕವಾಡದ ಸಮಾಜ ಸೇವಕ ಶಂಕರ್‌ ಡಿ.ಬಿ. ಈ ಬಗ್ಗೆ ಲೋಕೋಪಯೋಗಿ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಿದ್ದರು. ಆದರೂ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡಿರಲಿಲ್ಲ.

ಚನ್ನಗಿರಿ, ಭದ್ರಾವತಿ, ಶಿವಮೊಗ್ಗ, ಬಿರೂರು, ಕಡೂರು ಮುಂತಾದ ಕಡೆಗಳಿಗೆ ಇದೇ ರಸ್ತೆ‌ಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಂಥ ದಟ್ಟನೆಯ ರಸ್ತೆ ಕುಸಿಯುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸದ ಬಗ್ಗೆ ‘ಪ್ರಜಾವಾಣಿ’ಯ ಸೋಮವಾರದ ಆವೃತ್ತಿಯಲ್ಲಿ ‘ಹದಡಿ ಕೆರೆ ಏರಿಯಲ್ಲಿ ಹೆದ್ದಾರಿ ಬಿರುಕು’ ಎಂಬ ಶೀರ್ಷಿಕೆ ಅಡಿವರದಿ ಪ್ರಕಟಿಸಿ ಬೆಳಕು ಚೆಲ್ಲಲಾಗಿತ್ತು. ರಸ್ತೆ ಸಂಪೂರ್ಣ ಕುಸಿದರೆ ಸಂಚಾರವೇ ಕಡಿತಗೊಳ್ಳುವ ಅಪಾಯದ ಬಗ್ಗೆ ತಿಳಿಸಿತ್ತು.

ಈ ವರದಿಯಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ವಿಜಯಕುಮಾರ್‌ ಅವರು ಎಇಇ ಮತ್ತು ಸಿಬ್ಬಂದಿಯನ್ನು ಸೋಮವಾರ ಬೆಳಿಗ್ಗೆಯೇ ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಂಡರು.

‘ಕೆರೆಯ ಬಂಡ್‌ ಸರಿಯಾಗಿ ನಿರ್ಮಾಣಗೊಳ್ಳದ್ದರಿಂದ ಸಮಸ್ಯೆಯಾಗಿದೆ. ಕಳೆದ ವರ್ಷವೂ ಮಣ್ಣು ಕುಸಿದಿದ್ದು, ಸರಿಪಡಿಸಿದ್ದೆವು. ಬಂಡ್‌ ಸರಿಪಡಿಸುವಂತೆ ಸಣ್ಣ ನೀರಾವರಿ ಇಲಾಖೆಗೂ ಮಾಹಿತಿ ನೀಡಲಾಗಿದೆ. ಕೆರೆ ಏರಿ ಬಿರುಕು ಬಿಟ್ಟಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿತ್ತು. ಈ ಬಗ್ಗೆ ಕೊಂಚ ನಿಗಾ ಇಟ್ಟಿದ್ದೆವು. ಬಿರುಕು ದೊಡ್ಡದಾಗುತ್ತಾ ಸಾಗಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಗದಂತೆ ಸೋಮವಾರ ಕಾಮಗಾರಿ ಆರಂಭಿಸಲಾಗಿದೆ’ ಎಂದು ವಿಜಯಕುಮಾರ್‌ ‘ಪ್ರಜಾವಾಣಿ’ಗೆತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT