ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ ಬಕ್ರೀದ್ ಆಚರಣೆ

ಅರುಣಾ ಟಾಕೀಸ್‌ ಬಳಿಯ ಪಿಬಿ ರಸ್ತೆಯಲ್ಲಿ ಮುಸ್ಲಿಂ ಸಮಾಜದವರಿಂದ ಸಾಮೂಹಿಕ ಪ್ರಾರ್ಥನೆ
Last Updated 12 ಆಗಸ್ಟ್ 2019, 12:52 IST
ಅಕ್ಷರ ಗಾತ್ರ

ದಾವಣಗೆರೆ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಸೋಮವಾರ ಭಕ್ತಿ, ಸಂಭ್ರಮದಿಂದ ಆಚರಿಸಿದರು.

ಹೊಸ ಬಟ್ಟೆ ತೊಟ್ಟು ಮಸೀದಿಗಳಲ್ಲಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರು. ಬಕ್ರಿದ್‌ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಆ ನಂತರ ಎಲ್ಲರೂ ಈದ್ಗಾ ಮೈದಾನ ಮತ್ತು ಇಲ್ಲಿನ ಅರುಣಾ ಟಾಕೀಸ್‌ ಬಳಿಯ ಪಿಬಿ ರಸ್ತೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿ ಹಬ್ಬದ ಹಿನ್ನೆಲೆ, ಸಾಮಾಜಿಕ ಜವಾಬ್ದಾರಿಗಳನ್ನು ಕುರಿತು ಮಾತನಾಡಿದರು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರ ಸಿಗಲಿ ಎಂದು ಪ್ರಾರ್ಥಿಸಿದ ಬಳಿಕ, ಅವರಿಗೆ ನೆರವು ನೀಡಲು ಸಮುದಾಯದವರು ಸ್ಪಂದಿಸಬೇಕು ಎಂದು ಕರೆ ನೀಡಿದರು.

ವಿನೋಬನಗರ ಮುಖ್ಯ ರಸ್ತೆಯಲ್ಲಿರುವ ಹಳೇ ಈದ್ಗಾ ಮೈದಾನ ಹಾಗೂ ಮಾಗನಹಳ್ಳಿ ರಸ್ತೆ (ವರ್ತುಲ ರಸ್ತೆ) ರಜಾ ಉಲ್‌ ಮುಸ್ತಫಾ ನಗರದಲ್ಲಿರುವ ಹೊಸ ಈದ್ಗಾ ಮೈದಾನ, ಶ್ರೀರಾಮ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಸಂಪ್ರದಾಯದಂತೆ, ಉಳ್ಳವರು ಬಡವರಿಗೆ ವಿವಿಧ ರೀತಿಯಲ್ಲಿ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.

ಹಬ್ಬದ ಪ್ರಯುಕ್ತ ಮಸೀದಿಗಳಲ್ಲಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಹಬ್ಬ ತ್ಯಾಗದ ಪ್ರತೀಕವಾದ ಕಾರಣ ಕುರಿ ಬಲಿದಾನ ಮಾಡುವುದು ಕಂಡುಬಂದಿತು. ನೆರೆ ಹೊರೆಯವರು, ಬಡವರಿಗೆ ತಮ್ಮ ಶಕ್ತಿಗೆ ಅನುಸಾರವಾಗಿ ಕುರಿ ಮಾಂಸ ದಾನ ಮಾಡಿ, ಹಬ್ಬದ ಸಂಭ್ರಮವನ್ನು ಇತರರೊಂದಿಗೆ ಹಂಚಿಕೊಂಡರು. ಬಕ್ರೀದ್‌ ಹಿನ್ನೆಲೆಯಲ್ಲಿ ಜಯದೇವ ಸರ್ಕಲ್‌ ಸೇರಿ ಇತರೆ ಮುಖ್ಯ ವೃತ್ತಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಜನಪ್ರತಿನಿಧಿಗಳು ಭಾಗವಹಿಸಿ ಹಬ್ಬದ ಶುಭಾಶಯ ಹೇಳಿದರು.

‘ಪ್ರತಿಯೊಬ್ಬ ಮುಸ್ಲಿಮರು ಶಕ್ತ್ಯಾನುಸಾರ ಖುರ್ಬಾನಿ ಕೊಡುತ್ತಾರೆ. ಒಂದು ಕುರಿಯನ್ನು ಮೂರು ಭಾಗ ಮಾಡಿ ಅವುಗಳಲ್ಲಿ ಒಂದು ಭಾಗ ಸ್ವಂತಕ್ಕೆ, ಇನ್ನೊಂದು ನೆಂಟರಿಗೆ, ಮತ್ತೊಂದು ಭಾಗವನ್ನು ಬಡವರಿಗೆ ನೀಡುತ್ತಾರೆ. ಈ ಆಚರಣೆ ಮೂರು ದಿವಸದವರೆಗೆ ಇರುತ್ತದೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ ನಜೀರ್.

‘ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಯಾವುದಾದರೂ ರೂಪದಲ್ಲಿ ಸಹಾಯವಾಗಲಿ ಎಂದು ಮಸೀದಿಗಳಲ್ಲಿ ಪ್ರಾರ್ಥಿಸಲಾಯಿತು’ ಎನ್ನುತ್ತಾರೆ ಮುಸ್ಲಿಂ ಸಮಾಜದ ಮುಖಂಡ ಸಾದಿಕ್ ಪೈಲ್ವಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT