ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ಕಾಯಕ ತತ್ವ ಜಗತ್ತಿಗೆ ಆದರ್ಶ: ಬಸವಪ್ರಭು ಸ್ವಾಮೀಜಿ

Published 24 ಮೇ 2024, 5:48 IST
Last Updated 24 ಮೇ 2024, 5:48 IST
ಅಕ್ಷರ ಗಾತ್ರ

ದಾವಣಗೆರೆ: ಶರಣರ ದೃಷ್ಟಿಯಲ್ಲಿ ಭಕ್ತಿ, ಜ್ಞಾನ, ವೈರಾಗ್ಯಗಳು ಎಷ್ಟು ಮುಖ್ಯವೋ ದಿನನಿತ್ಯದ ನಿರ್ವಹಣೆಗಾಗಿ ಕಾಯಕವು ಅಷ್ಟೇ ಮುಖ್ಯ ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಸಿದ್ದವೀರಪ್ಪ ಬಡಾವಣೆ ಸ್ವಾಮಿ ವಿವೇಕಾನಂದ ಬಡಾವಣೆ ಆಂಜನೇಯ ಬಡಾವಣೆ ಎಂ.ಸಿ.ಸಿ ‘ಬಿ’ ಬ್ಲಾಕ್ ನಾಗರಿಕರು ಈಚೆಗೆ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಸಿದ್ದಗಂಗಾ ಸ್ವಾಮೀಜಿ ಹಾಗೂ ಸಿದ್ದೇಶ್ವರ ಸ್ವಾಮಿಗಳ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬಸವಣ್ಣನವರು ನೀಡಿರುವ ಕಾಯಕ ತತ್ವ ಇಡೀ ಜಗತ್ತಿಗೆ ಆದರ್ಶ. ಪ್ರತಿಯೊಬ್ಬ ವ್ಯಕ್ತಿಯೂ ಕಾಯಕ ಮಾಡಬೇಕು. ಶರಣರ ಸಮಾಜದಲ್ಲಿ ಸೋಮಾರಿಗಳಿಗೆ ಸ್ಥಾನವೇ ಇರಲಿಲ್ಲ. ಸತ್ಯ, ಶುದ್ಧವಾದ ದುಡಿಮೆಯ ಶ್ರಮ ಸಂಸ್ಕೃತಿಯೇ ಶರಣರ ಆದರ್ಶವಾಗಿತ್ತು. ದುಡಿಯುವವರೇ ಬೇರೆ, ಅವರ ದುಡಿತದ ಫಲವನ್ನು ಅನುಭವಿಸುವವರೇ ಬೇರೆಯಾಗಿದ್ದ ಕಾಲದಲ್ಲಿ ಬೆವರು ಸುರಿಸಿ ದುಡಿಯುವವರೇ ನಿಜವಾದ ಶರಣರು ವ್ಯಾಖ್ಯಾನಿಸುವ ಮೂಲಕ ದುಡಿದು ಉಣ್ಣುವುದನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಕಾಯಕ ಕಡ್ಡಾಯ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ’ ಎಂದರು.

‘ಕಾಯಕದಿಂದ ಬಂದ ಪ್ರತಿಫಲವನ್ನು ದಾಸೋಹ ಮಾಡಬೇಕು. ದಾಸೋಹದ ಸಮಯದಲ್ಲಿ ಎಲ್ಲರೂ ಸಮಾನವಾಗಿ ಕುಳಿತು ಸಹಭೋಜನ ಮಾಡಿದ್ದರಿಂದ ಸಮಾನತೆಯನ್ನು ಸಾಧಿಸಲು ಸಾಧ್ಯವಾಯಿತು. ಬಸವಣ್ಣ ಈ ಆಧುನಿಕ ಯುಗಕ್ಕೆ ಬೇಕಾದ ಶಸ್ತ್ರಚಿಕಿತ್ಸಕ ವೈದ್ಯ. ಇಂದಿನ ಸಮಾಜದಲ್ಲಿರುವ ಭಯೋತ್ಪಾದನೆ, ಜಾತೀಯತೆ, ಅಸ್ಪೃಶ್ಯತೆ, ಭ್ರಷ್ಟಾಚಾರ, ಹಿಂಸಾಚಾರ ಹಾಗೂ ದಬ್ಬಾಳಿಕೆ ಎಂಬ ರೋಗವನ್ನು ಹೊಡೆದೊಡಿಸಲು ‘ಬಸವತತ್ವ’ ಎಂಬ ಔಷಧವನ್ನು ನೀಡಬೇಕು’ ಎಂದು ಹೇಳಿದರು.

ವಿಶ್ರಾಂತ ಜಂಟಿ ನಿರ್ದೇಶಕ ಎಚ್‌.ಕೆ. ಲಿಂಗರಾಜ್ ಉಪನ್ಯಾಸ ನೀಡಿದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಸೌಭಾಗ್ಯ ಬೀಳಗಿಮಠ ಪರವಾಗಿ ಅವರ ತಾಯಿ ಶರಣಮ್ಮ ಅವರನ್ನು ಸನ್ಮಾನಿಸಲಾಯಿತು. ಯೋಗ ಗುರು ಜ್ಞಾನಚಂದ್ರ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಕೆ.ಬಿ. ಪರಮೇಶ್ವರಪ್ಪ, ಭಕ್ತಮಂಡಳಿಯ ವಿಶ್ವನಾಥ, ಕಾರ್ಯದರ್ಶಿ ರವಿಶಂಕರ್, ಕರಿಬಸಪ್ಪ, ಲಿಂಗರಾಜ್ ಕೆ. ಶಶಿಧರ್, ಶಶಿಧರ್ ಬಸಾಪುರ, ಟಿ.ಜಿ. ಲೀಲಾವತಿ ಇದ್ದರು. ಬಸವ ಕಲಾ ಲೋಕದ ಕಲಾವಿದರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT