ಸಂತೇಬೆನ್ನೂರು: ಹೆದ್ದಾರಿಯ ಅಂಚಿನಲ್ಲಿರುವ ಭತ್ತದ ಗದ್ದೆಯ ಸಾಲಿನಲ್ಲಿ ಸಾಗುತ್ತಿರುವಾಗ ಮರಗಳಿಗೆ ಇಳಿಬಿಟ್ಟಿರುವ ಹಾಗೆ ಸಾಲುಸಾಲು ಹಕ್ಕಿ ಗೂಡುಗಳು ಕಾಣುತ್ತವೆ. ಹಾಗೇ ನಿಂತು ನೋಡುತ್ತಿದ್ದಂತೆಯೇ ಹಳದಿ ಬಣ್ಣದ ಹಕ್ಕಿಯೊಂದು ಹಸಿರು ಎಳೆಯೊಂದನ್ನು ತಂದು ಗೂಡಿಗೆ ಹೆಣೆದ ಗರಿಕೆಗಳ ನಡುವೆ ಪೋಣಿಸಲು ಶುರು ಮಾಡುವುದು ಗೋಚರಿಸುತ್ತದೆ. ಚೆಂದದೊಂದು ಮನೆ ಕಟ್ಟುವ ಕಾಯಕದಲ್ಲಿ ಆ ಹಕ್ಕಿ ನಿರತವಾಗಿರುತ್ತದೆ. ಅಂಥ ಗೂಡುಗಳಲ್ಲಿ ಆ ಹಕ್ಕಿಯ ಕಲಾತ್ಮಕತೆ ಎದ್ದುಕಾಣುತ್ತದೆ. ನೋಡುಗರನ್ನೂ ಸೆಳೆಯುತ್ತದೆ.

ಹಕ್ಕಿ ತನ್ನ ಗೂಡು ನಿರ್ಮಿಸಿಕೊಳ್ಳುವುದೇ ಒಂದು ಕೌತುಕ. ಹಕ್ಕಿಗಳು ಬಹು ನಾಜೂಕಾದ ಹಾಗೂ ಅಷ್ಟೇ ಮನಮೋಹಕ ವಿನ್ಯಾಸದ ಗೂಡು ಕಟ್ಟುವ ವಿದ್ಯೆಯನ್ನು ಎಲ್ಲಿಂದ ಕಲಿತವು? ಎಂಬ ಪ್ರಶ್ನೆ ಬಹುತೇಕರನ್ನು ಕಾಡಿರುತ್ತದೆ. ಹಕ್ಕಿಯ ಗೂಡುಗಳಲ್ಲಿ ಗೀಜಗ ಹಕ್ಕಿಯ ಗೂಡು ಅತ್ಯಂತ ನಾಜೂಕು ಮತ್ತು ಕಲೆಯ ಅನಾವರಣ.

ಗೂಡಿಗೆ ಒಪ್ಪಿಗೆ ಸೂಚಿಸುವ ಹೆಣ್ಣು ಗೀಜಗ!:

ಗಂಡು ಗೀಜಗಕ್ಕೆ ತಲೆ, ಕುತ್ತಿಗೆ ಭಾಗಗಳಲ್ಲಿ ಹಳದಿ ಬಣ್ಣ ಇರುತ್ತೆ. ಹೆಣ್ಣು ಗೀಜಗವು ಗುಬ್ಬಚ್ಚಿಯನ್ನು ಹೋಲುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ಇವು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಈ ಬಾರಿ ಮಳೆ ಮೂರು ತಿಂಗಳವರೆಗೆ ಬಿಡದೇ ಸುರಿಯುತ್ತಿರುವ ಕಾರಣ ಅವು ಗೂಡು ಕಟ್ಟುವ ಪ್ರಕ್ರಿಯೆಯಲ್ಲಿ ತಲ್ಲೀನವಾಗಿವೆ. ಗಂಡು ಗೀಜಗ ಗೂಡು ಕಟ್ಟುತ್ತದೆ. ಕಟ್ಟಿದ ನಂತರ ಹೆಣ್ಣು ಗೀಜಗವನ್ನು ರೆಕ್ಕೆ ಬಡಿದು, ಚೀವ್.. ಚೀವ್.. ಎಂಬ ಧ್ವನಿ ಅರಳಿಸಿ ಕರೆಯುತ್ತದೆ.

ಗಂಡು ಗೀಜಗ ನಿರ್ಮಿಸುವ ಗೂಡನ್ನು ಹೆಣ್ಣು ಗೀಜಗ ಪರೀಕ್ಷಿಸುತ್ತದೆ. ಗೂಡಿನ ವಿನ್ಯಾಸ ಒಪ್ಪಿಗೆಯಾದಲ್ಲಿ ಮಾತ್ರ ಅದು ಸಂತಾನೋತ್ಪತ್ತಿಗೆ ಆಹ್ವಾನ ನೀಡುತ್ತದೆ. ಒಂದು ವೇಳೆ ಹೆಣ್ಣು ಗೀಜಗವು ಗೂಡು ಸರಿಯಿಲ್ಲ ಎಂದು ತಿರಸ್ಕರಿಸಿದರೆ, ಗಂಡು ಗೀಜಗ ಮರಳಿ ಯತ್ನವ ಮಾಡಿ ಮತ್ತೆ ಗೂಡು ಕಟ್ಟುತ್ತದೆ. ಇದರಿಂದ ಅದರ ಗೂಡು ಕಟ್ಟುವ ಕೌಶಲ ವೃದ್ಧಿಸುತ್ತದೆ. ಮರು ಯತ್ನದಲ್ಲಿ ಸೊಗಸಾದ ಗೂಡು ಸಿದ್ಧವಾಗುತ್ತದೆ.

ಗೀಜಗಗಳದ್ದು ಸಾಮೂಹಿಕ ಸಂತಾನೋತ್ಪತ್ತಿ. ಹೆಣ್ಣು ಗೀಜಗ ಗೂಡನ್ನು ಒಪ್ಪಿಕೊಂಡ ನಂತರವಷ್ಟೇ ಸಂತಾನಭಿವೃದ್ಧಿ ಶುರು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಂದಿನ ಬಾರಿಗೆ ಗಂಡು ಗೀಜಗ ತನ್ನ ಹೊಸ ಸಂಗಾತಿಗಾಗಿ ಹುಡುಕಾಡುತ್ತದೆ. ಅದಕ್ಕಾಗಿ ಮತ್ತೆ ಹೊಸದೊಂದು ಗೂಡು ಕಟ್ಟಲು ಮುಂದಾಗುತ್ತದೆ.

ಗೂಡಿನ ವಿಚಾರದಲ್ಲಿ ಹೆಣ್ಣು ಗೀಜಗದ ಒಪ್ಪಿಗೆಯೇ ನಿರ್ಣಾಯಕ ಎಂಬುದಕ್ಕೆ ಸಾಕ್ಷಿ ಎಂಬಂತೆ ಜಾಲಿ ಮರದಲ್ಲಿ ಅರ್ಧಂಬರ್ಧ ಕಟ್ಟಿರುವ ಸಾಲುಸಾಲು ಗೂಡುಗಳು ನೇತಾಡುತ್ತಿದ್ದವು. ಈ ಪೈಕಿ ಒಂದೆರಡು ಗೂಡುಗಳು ಮಾತ್ರ ಪೂರ್ಣಗೊಂಡಿದ್ದವು.

ಗೂಡು ವಿನ್ಯಾಸ: ಎಂಜಿನಿಯರಿಂಗ್ ಕೌಶಲ

ಮಧ್ಯದಲ್ಲಿ ದುಂಡಾದ ಆಕಾರವೂ ಕೆಳ ಭಾಗದಲ್ಲಿ ಕೊಳವೆ ಆಕಾರವೂ ಇರುವಂತೆ ಗೀಜಗನ ಹಕ್ಕಿ ಗೂಡು ಕಟ್ಟುತ್ತದೆ. ಅಡಿಕೆ ತೆಂಗು ತಾಳೆ ಜೋಳ ಹುಲ್ಲಿನ ಆಯ್ದ ಎಳೆಗಳಿಂದ ಸೊಗಸಾದ ಗೂಡು ಕಟ್ಟುತ್ತದೆ. ಶತ್ರುಗಳಿಂದ ಗೂಡಿನ ರಕ್ಷಣೆಗಾಗಿ ಭೌಗೋಳಿಕ ಪರಿಸರದ ಆಯ್ಕೆ ಅಷ್ಟೇ ಕುತೂಹಲಕಾರಿ ವಿಚಾರ. ಮುಳ್ಳು ಜಾಲಿಯಂತಹ ಗಿಡಗಳ ಕವಲುಗಳ ತುತ್ತತುದಿಯಲ್ಲಿ ಗೂಡಿನ ಅಡಿಪಾಯದ ಗಂಟು ಸಿದ್ಧವಾಗುತ್ತದೆ. ಹಾವುಗಳು ತೆಳುವಾದ ಕವಲಿನ ತುತ್ತತುದಿಯಲ್ಲಿರುವ ಗೂಡಿನತ್ತ ಸಾಗುವುದು ಅಸಾಧ್ಯ ಎಂಬ ಕಾರಣಕ್ಕೆ ಸ್ಥಳದ ಆಯ್ಕೆಯಲ್ಲಿ ಅವು ಎಚ್ಚರ ವಹಿಸುತ್ತವೆ. ಪ್ರಾಣಿಗಳಿಂದ ರಕ್ಷಣೆ ಪಡೆಯುವುದೂ ಮುಖ್ಯ. ಇದಕ್ಕಾಗಿ ಗೂಡಿನ ಕೆಳಭಾಗದಲ್ಲಿ ಹಳ್ಳ ಕೊಳ್ಳ ನಾಲೆಗಳಿರುವಂತೆ ನೋಡಿಕೊಂಡು ಯೋಜನೆ ರೂಪಿಸುತ್ತವೆ. ಇಂತಹ ಸುರಕ್ಷಿತ ಜಾಗದಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ ಎಂದು ಗೀಜನನ ಬಗೆಗಿನ ಹತ್ತಾರು ಕೌತುಕಗಳನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಹವ್ಯಾಸಿ ಪಕ್ಷಿ ವೀಕ್ಷಕ ಎಸ್.ಶಿಶುಪಾಲ ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.