ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ, ದೂಳುಮುಕ್ತ ಹಸಿರು ದಾವಣಗೆರೆಗೆ ಪಣ

2021–22ನೇ ಸಾಲಿನಲ್ಲಿ ₹ 12.49 ಕೋಟಿ ಉಳಿತಾಯ ಬಜೆಟ್‌ ಮಂಡಿಸಿದ ಮೇಯರ್ ಎಸ್‌.ಟಿ. ವೀರೇಶ್
Last Updated 17 ಏಪ್ರಿಲ್ 2021, 8:47 IST
ಅಕ್ಷರ ಗಾತ್ರ

ದಾವಣಗೆರೆ: ಕಸ, ದೂಳುಮುಕ್ತ ಹಾಗೂ ಹಸಿರು ದಾವಣಗೆರೆ ನಿರ್ಮಿಸಲು ಪಣ ತೊಟ್ಟಿರುವ ಮಹಾನಗರ ಪಾಲಿಕೆ ಮೇಯರ್ ಎಸ್‌.ಟಿ. ವೀರೇಶ್ ಅವರು₹ 12.49 ಕೋಟಿಗಳ ಉಳಿತಾಯದ ಬಜೆಟ್ ಅನ್ನು ಶುಕ್ರವಾರ ಮಂಡಿಸಿದರು.

ಇಲ್ಲಿನ ಪಾಲಿಕೆ ಸಭಾಂಗಣಲ್ಲಿ ‘ನುಡಿದರೆ ಮುತ್ತಿನ ಹಾರದಂತಿರಬೇಕು...’ ಎಂಬ ಬಸವಣ್ಣನ ವಚನದ ಮೂಲಕ ಭಾಷಣ ಆರಂಭಿಸಿದ ವೀರೇಶ್, ‘ದೀನ–ದಲಿತರ ಶ್ರೇಯೋಭಿವೃದ್ಧಿ, ಯುವ ಸಮುದಾಯದ ಕೌಶಲ ವರ್ಧನೆ, ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ಹೇಳಿದರು.

‘ಪಾಲಿಕೆಯಲ್ಲಿ ಇರುವ ಸೀಮಿತ ಸಂಪನ್ಮೂಲಗಳನ್ನೇ ಬಲಪಡಿಸಿ ಆದಾಯ ವೃದ್ಧಿಸುವುದರ ಜೊತೆಗೆ ಆಸ್ತಿ ಹಾಗೂ ನೀರಿನ ತೆರಿಗೆಗೆ ಆದ್ಯತೆ ನೀಡಲಾಗುವುದು. ಸ್ಮಾರ್ಟ್‌ಸಿಟಿ ಯೋಜನೆಯಡಿ ಕೆ.ಆರ್. ಮಾರುಕಟ್ಟೆ ಸಂಕೀರ್ಣದ ಮರು ನಿರ್ಮಾಣದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದರಿಂದ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ’ ಎಂದು ವೀರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಮುಖ್ಯ ಸಮಸ್ಯೆಯಾಗಿರುವ ಹಂದಿಗಳ ಸ್ಥಳಾಂತರ ಮಾಡಲು ಬಜೆಟ್‌ನಲ್ಲಿ ಒತ್ತು ನೀಡಲಾಯಿತು. ಸದಸ್ಯ ಪ್ರಸನ್ನಕುಮಾರ್ ಸೇರಿ ಹಲವು ಸದಸ್ಯರುಬಹುಮತದಿಂದ ಬಜೆಟ್ ಅನ್ನು ಅನುಮೋದಿಸಿದರು.

ಸ್ಮಶಾನಗಳ ಅಭಿವೃದ್ಧಿ: ‘ನಗರದ ಬಸಾಪುರ, ಕರೂರು, ಎಸ್‌ಒಜಿ ಕಾಲೊನಿ ಹಾಗೂ ಬಸವನಗೌಡ ಬಡಾವಣೆಗಳಲ್ಲಿನ ಸ್ಮಶಾನಗಳನ್ನು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಪಡಿಸುವುದರ ಜೊತೆಗೆ ಹಿಂದೂ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ಸ್ಥಾಪಿಸಲಾಗುವುದು. ಇದಕ್ಕಾಗಿ ₹ 2 ಕೋಟಿ ಮೀಸಲಿರಿಸಲಾಗಿದೆ’ ಎಂದು ವೀರೇಶ್ ಹೇಳಿದರು.

ಮಾದರಿ ಉದ್ಯಾನ, ರಸ್ತೆಗಳ ನಿರ್ಮಾಣ: ‘ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಮಾದರಿ ₹ 1ಕೋಟಿ ವೆಚ್ಚದಲ್ಲಿ ಮಾದರಿ ಉದ್ಯಾನ ನಿರ್ಮಿಸುವುದರ ಜೊತೆಗೆ ಬಡಾವಣೆಗೆ ತಲಾ ಒಂದರಂತೆ ಮಾದರಿ ರಸ್ತೆ ನಿರ್ಮಾಣ ಮಾಡಲಾಗುವುದು. ರಸ್ತೆಯ ಪಕ್ಕದಲ್ಲಿ ಗಿಡಗಳು, ಪೇವರ್, ವಾಕಿಂಗ್ ಪಾಥ್, ಬೀದಿ ದೀಪ ಇನ್ನಿತರೆ ಸೌಲಭ್ಯಗಳ ಸುಸಜ್ಜಿತ ರಸ್ತೆಯನ್ನು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ಮೇಯರ್ ಮಾಹಿತಿ
ನೀಡಿದರು.

ಶುದ್ಧ ಕುಡಿಯುವ ನೀರು:‘ಜನನಿಬಿಡ ಪ್ರದೇಶಗಳಾದ ಆಸ್ಪತ್ರೆ, ಶಾಲಾ–ಕಾಲೇಜು, ಬಸ್ ನಿಲ್ದಾಣ, ದೇವಸ್ಥಾನ, ಸಂತೆ ಮಾರುಕಟ್ಟೆ ಸೇರಿ ಇನ್ನಿತರೆ ಜನಸಂದಣಿ ಸ್ಥಳಗಳಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಏಜೆನ್ಸಿಯವರಿಗೆ ನಿರ್ವಹಣೆಯ ಹೊಣೆ ವಹಿಸಲಾಗುವುದು’ ಎಂದು ಹೇಳಿದರು.

ಪಾಲಿಕೆ ಕಚೇರಿ ಹಸಿರೀಕರಣ: ‘ಪಾಲಿಕೆ ಕಟ್ಟಡವನ್ನು ಪರಿಸರಸ್ನೇಹಿಯಾಗಿ ಮಾಡಲು ₹1 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುವುದು.ಮಳೆ ನೀರು ಸಂಗ್ರಹ, ವರ್ಟಿಕಲ್ ಉದ್ಯಾನ ನಿರ್ಮಿಸಲಾಗುವುದು. ಕುಡಿಯುವ ನೀರು, ಪೀಠೋಪಕರಣ, ವಾಹನ ನಿಲುಗಡೆಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಮೇಯರ್ತಿಳಿಸಿದರು.

ಮಾದರಿ ಬಡಾವಣೆ:‘ನಗರದ ಸ್ವಚ್ಛತೆಯನ್ನು ಗಮನದಲ್ಲಿರಿಸಿಕೊಂಡು ₹ 2 ಕೋಟಿ ವೆಚ್ಚದಲ್ಲಿ ಮಾದರಿ ಬಡಾವಣೆ ನಿರ್ಮಿಸಿ, ಈ ಬಡಾವಣೆಯಲ್ಲಿ ರಸ್ತೆಗಳಲ್ಲಿನ ಗುಂಡಿ ಮುಚ್ಚಿಸುವುದು, ಸಿಮೆಂಟ್, ಉದ್ಯಾನಗಳ ಅಭಿವೃದ್ಧಿ, ಬೀದಿ ದೀಪಗಳನ್ನು ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

‘ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ: ನಗರದಲ್ಲಿ 549 ಪೌರಕಾರ್ಮಿಕರು ಇದ್ದು, ಆಯ್ದ ನಾಲ್ಕು ಭಾಗಗಳಲ್ಲಿ₹ 30 ಲಕ್ಷ ವೆಚ್ಚದಲ್ಲಿ ವಿಶ್ರಾಂತಿ ಗೃಹ ನಿರ್ಮಿಸಲಾಗುವುದು. ಇದರಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಇನ್ನಿತರೆ ಸೌಲಭ್ಯ ಕಲ್ಪಿಸಲಾಗುವುದು’ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್, ಉಪಮೇಯರ್ ಶಿಲ್ಪಾ ಜಯಪ್ರಕಾಶ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾ ಶ್ರೀನಿವಾಸ್, ಎಲ್.ಡಿ. ಗೋಣೆಪ್ಪ, ಉಮಾ ಪ್ರಕಾಶ್, ಗೀತಾ ದಿಳ್ಯೆಪ್ಪ ಸಭೆಯಲ್ಲಿದ್ದರು.

ಮಹಿಳೆಯರಿಗೆ ಪ್ರತ್ಯೇಕ ಒಳಾಂಗಣ ಕ್ರೀಡಾಂಗಣ
‘ನಗರದ ಮಹಿಳೆಯರಿಗೆ ಹಾಗೂ ಕ್ರೀಡಾಪಟುಗಳಿಗೆ ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಸ್ಕ್ವಾಷ್‌ನಂತಹ ಕ್ರೀಡೆಗಳಿಗೆ ನೆರವಾಗಲು ಮಹಿಳಾ ಒಳಾಂಗಣ ಕ್ರೀಡಾಂಗಣ ಮತ್ತು ಪ್ರತ್ಯೇಕ ವ್ಯಾಯಾಮ ಶಾಲೆಯನ್ನು ನಿರ್ಮಿಸಲು ಉದ್ದೇಶಿಸಿದ್ದು, ಅತ್ಯಾಧುನಿಕ ಪರಿಕರಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ₹ 25 ಲಕ್ಷ ಅನುದಾನ ಮೀಸಲಿರಿಸಲಾಗುವುದು‘ ಎಂದು ಎಸ್.ಟಿ. ವೀರೇಶ್ ಹೇಳಿದರು.

ಅನಿಲ್ ಕುಂಬ್ಳೆ ಇನ್‌ಡೋರ್‌ ಸ್ಟೇಡಿಯಂ: ‘ಡಿಸಿಎಂ ಟೌನ್ ಶಿಪ್‌ನಲ್ಲಿರುವ ಅನಿಲ್ ಕುಂಬ್ಳೆ ಸ್ಟೇಡಿಯಂನಲ್ಲಿ ಸುಸಜ್ಜಿತ ಇನ್‌ಡೋರ್ ಸ್ಟೇಡಿಯಂ ಅನ್ನು ನಿರ್ಮಿಸಲು ₹1 ಕೋಟಿ ಮೀಸಲಿರಿಸಲಾಗಿದೆ. ಅಲ್ಲದೇ ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುವವರಿಗೆ ಪ್ರವಾಸ ಭತ್ಯೆ, ತಂಗುವಿಕೆ ಭತ್ಯೆ ಹಾಗೂ ಪ್ರೋತ್ಸಾಹಧನ ನೀಡಲು ₹10 ಲಕ್ಷ ವೆಚ್ಚ ಮಾಡಲು ಉದ್ದೇಶಿಸಲಾಗಿದೆ’ ಎಂದರು.

ಹಂದಿಗಳಿಗೆ ವರಾಹಶಾಲೆ ನಿರ್ಮಾಣ
ನಗರದ ಮುಖ್ಯ ಸಮಸ್ಯೆಯಾಗಿರುವ ಹಂದಿಗಳ ಸ್ಥಳಾಂತರಕ್ಕೆ ಹೆಬ್ಬಾಳಿನಲ್ಲಿ 6ರಿಂದ 7 ಎಕರೆ ಜಾಗ ಗುರುತಿಸಿದ್ದು,‌ ಅಲ್ಲಿಗೆ ಸ್ಥಳಾಂತರ ಮಾಡಲಾಗುವುದು. ಆರಂಭದಲ್ಲಿ ಬಾತಿಯನ್ನು ಗುರುತಿಸಲಾಗಿತ್ತು, ಅಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರಿಂದ ಹೆಬ್ಬಾಳ್‌ನಲ್ಲಿ ₹35 ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಿಸಿ ಅಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು. ಬೀಡಾಡಿ ಗೋವುಗಳಿಗೆ ₹50 ಲಕ್ಷ ವೆಚ್ಚದಲ್ಲಿ ಗೋಶಾಲೆ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಶ್ವಾನಗಳಿಗೆ ಸಂತಾನಶಕ್ತಿಹರಣ
‘ನಗರದಲ್ಲಿ 5 ಸಾವಿರ ಶ್ವಾನಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಉದ್ದೇಶಿಸಿದ್ದು, ಇದಕ್ಕಾಗಿ ₹ 20 ಲಕ್ಷ ಮೀಸಲಿರಿಸಲಾಗಿದೆ’ ಎಂದು ವೀರೇಶ್ ಹೇಳಿದರು.

ಪತ್ರಕರ್ತರಿಗೆ ಕ್ಷೇಮಾಭಿವೃದ್ಧಿ ನಿಧಿ
ನಗರದಲ್ಲಿರುವ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿ ₹10 ಲಕ್ಷ ಅನುದಾನ ಘೋಷಿಸಲಾಗುವುದು ಎಂದು ಮೇಯರ್ ತಿಳಿಸಿದರು.

‘ಪತ್ರಕರ್ತರ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ₹25 ಲಕ್ಷ ನೀಡಿದ್ದು, ಪಾಲಿಕೆಯಿಂದ ನಿವೇಶನ ಒದಗಿಸಬೇಕು’ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರಪ್ಪ ಎಂ.ಭಾವಿ ಇದೇ ಸಂದರ್ಭ ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ₹ 25 ಲಕ್ಷ ನೀಡುವ ಭರವಸೆ ನೀಡಿದರು.

‘ಬಜೆಟ್ ಅಂಕಿ ಅಂಶಗಳಿಗೆ ಸೀಮಿತವಾಗದಿರಲಿ’
‘ಈ ಬಜೆಟ್ ಅಂಕಿ ಸಂಖ್ಯೆಗಳಿಗೆ ಸೀಮಿತವಾಗಿರದೇ ಕಾರ್ಯರೂಪಕ್ಕೆ ಬರಬೇಕು. ಕಳೆದ ಬಜೆಟ್‌ನಲ್ಲಿ 28 ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಅವುಗಳಲ್ಲಿ 6 ಮಾತ್ರ ಕಾರ್ಯಗತಗೊಂಡಿವೆ’ ಎಂದು ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಟೀಕಿಸಿದರು.

‘15ನೇ ಹಣಕಾಸು ಯೋಜನೆಯಡಿ ₹34.63 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕರೆದಿಲ್ಲ. ವರ್ಕ್ ಆರ್ಡರ್ ನೀಡಿಲ್ಲ. ಇದಕ್ಕೆ ಮೊದಲು ಉತ್ತರಿಸಬೇಕು. ಅನುದಾನವನ್ನು ಬಳಸದೇ ಇದ್ದರೆ ಆಡಳಿತ ವೈಫಲ್ಯ ತೋರಿಸಿದಂತಾಗುತ್ತದೆ’ ಎಂದರು.

* ನಗರದ ಆಯ್ದ ಜಾಗಗಳಲ್ಲಿ ಎರಡು ಡಿಜಿಟಲ್ಗ್ರಂಥಾಲಯಗಳ ನಿರ್ಮಾಣ

* ಪಾಲಿಕೆಗೆ ಒಳಪಡುವ ನಿವೇಶನಗಳಲ್ಲಿ ವಾಣಿಜ್ಯಸಂಕೀರ್ಣ ನಿರ್ಮಾಣ

* ವೃದ್ಧಾಶ್ರಮಗಳಿಗೆ ₹10 ಲಕ್ಷ ವೆಚ್ಚದ ಪರಿಕರ ನೀಡುವುದು

* ಪಾಲಿಕೆ ಒಡೆತನದಲ್ಲಿ ಬರುವ ನಿವೇಶನದಲ್ಲಿ ₹1.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿ ಪಾಲಿಕೆ ಅಧಿಕಾರಿ, ಸಿಬ್ಬಂದಿ ಮದುವೆ ಹಾಗೂ ಇನ್ನಿತರೆ ಕಾರ್ಯಗಳಿಗೆ ಉಚಿತವಾಗಿ ನೀಡುವುದು.

* ₹ 10 ಲಕ್ಷ ವೆಚ್ಚದಲ್ಲಿ ನಗರದ ಕೆಎಚ್‌ಬಿ ತುಂಗ ಭದ್ರಾ ಬಡಾವಣೆ ಅಭಿವೃದ್ಧಿ

* ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪೌರಸನ್ಮಾನ ಮಾಡಲು ₹ 5 ಲಕ್ಷ ಮೀಸಲು

* ಮಹಾನಗರ ಪಾಲಿಕೆ ಸದಸ್ಯರ ಜ್ಞಾನಾರ್ಜನೆಗಾಗಿ ಅಧ್ಯಯನ ಪ್ರವಾಸ ಕೈಗೊಳ್ಳಲು ₹ 30 ಲಕ್ಷ ಮೀಸಲು

* ಬೀದಿ ಬದಿ ವ್ಯಾಪಾರಿಗಳಿಗೆ ₹10 ಲಕ್ಷ ವೆಚ್ಚದಲ್ಲಿ ಕಲ್ಯಾಣ ನಿಧಿ ಸ್ಥಾಪನೆ

* ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಮೇಯರ್ ಕಪ್

* ಕಸ ಗುಡಿಸಲು ಯಾಂತ್ರೀಕೃತ ಉಪಕರಣಗಳ ಖರೀದಿ

* ಬಸವಣ್ಣ, ಅಂಬೇಡ್ಕರ್ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗಳ ನಿರ್ಮಾಣ

* ಹಿಂದುಳಿದ ಪ್ರತಿಭಾನ್ವಿತ ವ್ಯಕ್ತಿಗಳನ್ನು ಗುರುತಿಸಿ ಪಾಲಿಕೆಯಿಂದ ತರಬೇತಿ ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ ₹20 ಲಕ್ಷ ಮೀಸಲಿರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT