ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ಸೇವಾ ದಳ ಸಕ್ರಿಯಗೊಳಿಸಿ: ಶಿಕ್ಷಣಾಧಿಕಾರಿ ನಿರಂಜನಮೂರ್ತಿ

ಸೇವಾ ದಳ ಸಪ್ತಾಹ
Last Updated 31 ಡಿಸೆಂಬರ್ 2018, 13:18 IST
ಅಕ್ಷರ ಗಾತ್ರ

ದಾವಣಗೆರೆ: ಮಕ್ಕಳಲ್ಲಿ ಸೇವಾ ಭಾವನೆ ಹಾಗೂ ರಾಷ್ಟ್ರೀಯತೆ ಬೆಳೆಸಲು ಎಲ್ಲಾ ಶಾಲೆಗಳಲ್ಲಿ ಭಾರತ ಸೇವಾ ದಳದ ಶಾಖೆಗಳನ್ನು ಸಕ್ರಿಯವಾಗಿ ನಡೆಸಬೇಕು ಎಂದು ಶಿಕ್ಷಣಾಧಿಕಾರಿ ನಿರಂಜನಮೂರ್ತಿ ಹೇಳಿದರು.

ಭಾರತ ಸೇವಾ ದಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೇವಾ ದಳ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಷ್ಟ್ರೀಯ ಭಾವೈಕ್ಯ, ಸಮಗ್ರತೆ, ಸಾರ್ವಭೌಮತ್ವ, ಸೇವೆ ಮಾಡುವ ಗುಣಗಳನ್ನು ಸೇವಾ ದಳವು ಮಕ್ಕಳಿಗೆ ಹೇಳಿಕೊಡುತ್ತದೆ. ಪರೋಪಕಾರ, ಮತ್ತೊಬ್ಬರನ್ನು ಗೌರವಿಸುವುದನ್ನು ಕಲಿಸಿಕೊಡುತ್ತದೆ. ರಾಷ್ಟ್ರೀಯ ಭಾವೈಕ್ಯವನ್ನು ಅನುಷ್ಠಾನಕ್ಕೆ ತರಲು ದೇಶದ ಎಲ್ಲಾ ಶಾಲೆಗಳಲ್ಲೂ ಸೇವಾ ದಳದ ಶಾಖೆಗಳನ್ನು ತೆರೆಯಲು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ’ ಎಂದು ತಿಳಿಸಿದರು.

‘ಇದು ಶಿಸ್ತು ಹಾಗೂ ರಾಷ್ಟ್ರ ಪ್ರೇಮವನ್ನು ಬೆಳೆಸುತ್ತದೆ. ಶಿಕ್ಷಕರು ರಾಷ್ಟ್ರ ಧ್ವಜ, ರಾಷ್ಟ್ರೀಯ ಚಿಹ್ನೆಗಳನ್ನು ಸಂರಕ್ಷಿಸುವ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಮೂಲಕ ಸೇವಾ ಮನೋಭಾವ ಬೆಳೆಸಬೇಕು. ನೈತಿಕ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾ ದಳದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್‌. ಜಯದೇವಪ್ಪ, ‘ನಿಸ್ವಾರ್ಥ ಸೇವೆಗೆ ಭಾರತ ಸೇವಾ ದಳ ಹೆಸರಾಗಿದೆ. ಗಾಂಧೀಜಿ ಆಶಯದಂತೆ ನಾ.ಸು. ಹರ್ಡೀಕರ್‌ ಅವರು ಹಿಂದೂಸ್ಥಾನ್‌ ಸೇವಾ ದಳವನ್ನು ಆರಂಭಿಸಿ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಗಾಯಾಳುಗಳ ಸೇವೆ ಮಾಡಲಾಗುತ್ತಿತ್ತು. ಸ್ವಾತಂತ್ರ್ಯ ನಂತರ ಇದು ಭಾರತ ಸೇವಾ ದಳ ಎಂದು ಹೆಸರು ಪಡೆದುಕೊಂಡಿದೆ. ಇಂದು ಶಿಕ್ಷಣ ಇಲಾಖೆ ಇದಕ್ಕೆ ಸಹಕಾರ ನೀಡುತ್ತಿದೆ’ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾ ದಳದ ಜಿಲ್ಲಾ ಸಂಘಟಕ ಎಂ. ಅಣ್ಣಯ್ಯ, ‘1923 ಡಿಸೆಂಬರ್‌ 28ರಂದು ಹಿಂದೂಸ್ಥಾನ್‌ ಸೇವಾ ದಳವನ್ನು ಆರಂಭಿಸಲಾಗಿತ್ತು. ಹೀಗಾಗಿ ಡಿಸೆಂಬರ್‌ ತಿಂಗಳ ಕೊನೆಯ ವಾರವನ್ನು ಸೇವಾ ದಳ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

‘ಬಳ್ಳಾರಿಯಲ್ಲಿ ಜನವರಿ 18 ಹಾಗೂ 19ರಂದು ರಾಜ್ಯ ಮಟ್ಟದ ಮಕ್ಕಳ ರಾಷ್ಟ್ರೀಯ ಭಾವ್ಯಕ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಜನವರಿ 30ರಂದು ಹುತಾತ್ಮ ದಿನಾಚರಣೆ ಅಂಗವಾಗಿ ಮಲೇಬೆನ್ನೂರಿನಲ್ಲಿ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ಭಾವೈಕ್ಯ ಮೇಳ ನಡೆಯಲಿದೆ. ಇದರಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

ಭಾರತ ಸೇವಾ ದಳದ ಕ್ಯಾಲೆಂಡರ್‌ ಕೈಪಿಡಿಯನ್ನು ಮುದ್ರಿಸಿಕೊಟ್ಟ ಎಸ್‌.ಟಿ. ಕುಸಮಾಶ್ರೇಷ್ಠಿ, ‘ಸೇವಾ ದಳವು ಸಂಯಮ, ಶಿಸ್ತನ್ನು ಹೇಳಿಕೊಡುತ್ತದೆ. ಇದಲ್ಲಿರುವ ಕಾರ್ಯಕರ್ತರು ಸೇವೆಗಾಗಿ ಬದುಕುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೇವಾ ದಳದ ಜಿಲ್ಲಾ ಉಪಾಧ್ಯಕ್ಷ ಯು. ಹನುಮಂತಪ್ಪ, ಕೋಶಾಧ್ಯಕ್ಷೆ ಉಮಾ ವೀರಭದ್ರಪ್ಪ, ಭೂಸೇನಾ ನಿಗಮದ ಕಾರ್ಯನಿರ್ವಹಣಾಧಿಕಾರಿ ಬಿ. ಚಂದ್ರಶೇಖರ್‌, ಕ್ಯಾಪ್‌ ಇಂಡಿಯಾ ಕನ್‌ಸ್ಟ್ರಕ್ಷನ್‌ ಜನರಲ್ ಮ್ಯಾನೇಜರ್‌ ಪವಿತ್ರನ್‌ ಹಾಜರಿದ್ದರು.

ಕೆ.ಟಿ. ಜಯಪ್ಪ ಸ್ವಾಗತಿಸಿದರು. ಟಿ.ಎಸ್‌. ಕುಮಾರಸ್ವಾಮಿ ವಂದಿಸಿದರು. ಸಂಪನ್ಮೂಲ ಶಿಕ್ಷಕರಾದ ಮಂಜುನಾಥ ಚನ್ನಗಿರಿ, ಮೋಹನ್‌ ದಾವಣಗೆರೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT