ಶುಕ್ರವಾರ, ಮಾರ್ಚ್ 5, 2021
23 °C

ಮಲೆನಾಡಿನ ಹಸಿರು ಬಯಲು ಸೀಮೆಯ ಉಸಿರು: ಅಪ್ಪಿಕೊ ಚಳವಳಿಯ ಪಾಂಡುರಂಗ ಹೆಗಡೆ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಹ್ಯಾದ್ರಿ ಕಾಡುಗಳ ರಕ್ಷಣೆ ಅಲ್ಲಿನ ಜನರಿಗೆ ಸೀಮಿತ ಎಂದು ಭಾವಿಸುವುದು ತಪ್ಪು. ಬಯಲು ಸೀಮೆಗೆ ನೀರು ಒದಗಿಸುವ ನದಿಗಳು ಅಲ್ಲೇ ಹುಟ್ಟುತ್ತವೆ. ಅಣೆಕಟ್ಟು ಕಟ್ಟಿ ಬಯಲು ಸೀಮೆಗೆ ನೀರು ಪೂರೈಸಲಾಗುತ್ತಿದೆ. ಮಲೆನಾಡಿನಲ್ಲಿ ಹಸಿರು ಇದ್ದರಷ್ಟೆ ಬಯಲು ಸೀಮೆಯಲ್ಲಿ ಉಸಿರು ಇರುತ್ತದೆ ಎಂದು ಅಪ್ಪಿಕೊ ಚಳವಳಿಯ ಪಾಂಡುರಂಗ ಹೆಗಡೆ ತಿಳಿಸಿದರು.

ಪಶ್ಚಿಮ ಘಟ್ಟ ಉಳಿಸಿ ಅಭಿಯಾನ, ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ, ಶಿರಸಿಯ ಪ್ರಕೃತಿ ಸಂಸ್ಥೆ, ದಾವಣಗೆರೆ ಸಾಮಾಜಿಕ ಅರಣ್ಯ ಇಲಾಖೆ, ಫೇವಾರ್ಡ್‌ ಸಂಸ್ಥೆ, ಸ್ಫೂರ್ತಿ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ಹಾಗೂ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಶನಿವಾರ ಮಹಿಳಾ ಕಾಲೇಜಿನಲ್ಲಿ ನಡೆದ ಸಹ್ಯಾದ್ರಿ ದಿನದ 35ನೇ ವರ್ಷದ ಆಚರಣೆಯಲ್ಲಿ ಅವರು ಮಾತನಾಡಿದರು.

ಜೇನು ಹುಳು ಬೇಕಾಗಿರುವುದು ಬರೀ ಜೇನುತುಪ್ಪಕ್ಕಾಗಿ ಅಲ್ಲ. ಪರಾಗಸ್ಪರ್ಶ ಮಾಡಲು ಅವು ಬೇಕು. ಆದರೆ ಈ ನೊಣಗಳೂ ಕಡಿಮೆಯಾಗುತ್ತಿವೆ. ನಮ್ಮಲ್ಲಿ ಸಿಗುವ ಜೇನುತುಪ್ಪ ಕೂಡ ಕಳಬೆರಕೆಯದ್ದಾಗಿವೆ. ಅಭಿವೃದ್ಧಿ ಹೆಸರಲ್ಲಿ ಎಲ್ಲವನ್ನೂ ಹಾಳು ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಗಾಳಿ, ಮಣ್ಣು, ನೀರನ್ನು ಹಾಳು ಮಾಡಲು ಸಾಧ್ಯವೇ ಹೊರತು, ಸೃಷ್ಟಿಸಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಅವುಗಳು ಸರಿ ಇರಬೇಕಿದ್ದಾರೆ. ಗಿಡಮರಗಳನ್ನು ಉಳಿಸಿ, ಬೆಳೆಸುವುದರ ಜತೆಗೆ ಮಿತವಾಗಿ ಬಳಸಬೇಕು ಎಂದು ಹೇಳಿದರು.

ನಾಲ್ಕು ವರ್ಷದ ಹಿಂದೆ ಬರಗಾಲ ಬಂದಾಗ ಸಹ್ಯಾದ್ರಿಯಲ್ಲೂ ಕುಡಿಯುವ ನೀರಿನ ಕೊರತೆ ಕಾಡಿತ್ತು. ಕಾಡುನಾಶ ಮಾಡುತ್ತಾ ಬಂದಿದ್ದರಿಂದ ಹೀಗಾಗಿದೆ. ಅದಕ್ಕಾಗಿಯೇ 35 ವರ್ಷಗಳ ಹಿಂದೆ ಸುಂದರಲಾಲ್‌ ಬಹುಗುಣ ಅವರು ಚಿಪ್ಕೋ ಚಳವಳಿ ಆರಂಭಿಸಿದರು. ನಾವು ಇಲ್ಲಿ ಅಪ್ಪಿಕೋ ಚಳವಳಿ ನಡೆಸಿದೆವು ಎಂದು ವಿವರಿಸಿದರು.

ಸಾಮಾಜಿಕ ಅರಣ್ಉ ಇಲಾಖೆಯ ಡಿಎಫ್‌ಒ ಎನ್‌.ಬಿ. ಮಂಜುನಾಥ್‌ ಮಾತನಾಡಿ, ‘1,600 ಕಿಲೋಮೀಟರ್‌ ಉದ್ದಕ್ಕೆ ಪಶ್ಚಿಮ ಘಟ್ಟ ಹರಡಿಕೊಂಡಿದೆ. ಅವುಗಳನ್ನು ಉಳಿಸಿದರೆ ನಾವು ಉಳಿಯುತ್ತೇವೆ. ಪರಿಸರ ಉಳಿಸುವ ಕಾರ್ಯ ವಿದ್ಯಾರ್ಥಿಗಳಿಂದಲೇ ಆರಂಭವಾಗಲಿ. ಕಡಿಮೆ ಪ್ಲಾಸ್ಟಿಕ್‌ ಬಳಕೆ, ಟಿಶ್ಯುಪೇಪರ್‌ ಬಳಸದಿರುವುದು, ಇಂಧನದ ವಾಹನಗಳ ಬದಲು ಸೈಕಲ್‌ ಬಳಸುವುದು ಮುಂತಾದ ನಿರ್ಧಾರಕ್ಕೆ ನಾವುಬರಬೇಕು’ ಎಂದು ತಿಳಿಸಿದರು.

ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ ಕೆ.ಬಿ. ರೂಪಾನಾಯ್ಕ ಮಾತನಾಡಿ, ‘ಹುಟ್ಟಿದ ದಿನವನ್ನು ಗಿಡನೆಟ್ಟು ಆಚರಿಸುವಂತಾಗಬೇಕು. ಇಂಧನವನ್ನು ಜತ್ರೋಪ, ಹೊಂಗೆ, ಸಿಮರೋಬ ಮತ್ತಿತರ ಮರಗಳಿಂದ ಇಂಧನ ತಯಾರಿಸಲು ಸಾಧ್ಯ. ಅವುಗಳ ಕಡೆಗೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

 ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಎಲ್‌. ಜನಾರ್ದನ ಮಾತನಾಡಿ, ‘ಬ್ರಿಟಿಷರು ಬರುವ ಮೊದಲು ಕಾಡು ಕಾಡಲ್ಲಿರುವವರ ಸೊತ್ತಾಗಿತ್ತು. ಬ್ರಿಟಿಷ್‌ ಆಡಳಿತದಲ್ಲಿ ಅದು ಖಜಾನೆ ತುಂಬಿಸಲು ಬಳಕೆಯಾಯಿತು. ಸ್ವಾತಂತ್ರ್ಯ ಬಂದ ಬಳಿಕ ಅರಣ್ಯಕ್ಕೆ ಪ್ರತ್ಯೇಕ ಇಲಾಖೆ ಮಾಡಿದರೂ ಅದು ಖಜಾನೆ ತುಂಬುವುದಕ್ಕಾಗಿಯೇ ಆಗಿತ್ತು. 1970ರ ನಂತರ ಅರಣ್ಯ ಸಂರಕ್ಷಣೆಯ ಪದ ಅದಕ್ಕೆ ಸೇರಿಕೊಂಡಿತು’ ಎಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲ ಡಾ. ದಾದಾಪೀರ್‌ ಅಧ್ಯಕ್ಷತೆ ವಹಿಸಿದ್ದರು. ಫೇವಾರ್ಡ್‌ ಅಧ್ಯಕ್ಷ ಮಂಜುನಾಥ, ನವೀನ್‌ ಕುಮಾರ್‌, ಉಜ್ಜಿನಪ್ಪ ಅವರೂ ಇದ್ದರು. ಎಸ್‌.ಸಿ. ಪ್ರೀತಿ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು