ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರದೇಶಗಳಿಗೆ ಬಾರದ ಸರ್ಕಾರಿ ಬಸ್‌ಗಳು:

Last Updated 24 ಜೂನ್ 2018, 17:48 IST
ಅಕ್ಷರ ಗಾತ್ರ

ನ್ಯಾಮತಿ: ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯವಿಲ್ಲ. ನಾಲ್ಕು ಜನರು ಪ್ರಯಾಣಿಸಹುದಾದ ಆಟೋದಲ್ಲಿ ಸುಮಾರು ಹತ್ತು ಜನರ ಪ್ರಯಾಣ. ದಿನನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ದೃಶ್ಯ ನ್ಯಾಮತಿ ತಾಲ್ಲೂಕಿನಲ್ಲಿ ಸಾಮಾನ್ಯವಾಗಿದೆ.

ಗ್ರಾಮೀಣ ಪ್ರದೇಶಕ್ಕೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ, ಹೊನ್ನಾಳಿಯಲ್ಲಿ ಆರಂಭಗೊಂಡ ಸರ್ಕಾರಿ ಬಸ್ ಡಿಪೋ, ಗ್ರಾಮೀಣ ಪ್ರದೇಶದ ಭಾಗಗಳಿಗೆ ಸಂಚಾರ ಆರಂಭಗೊಳಿಸದೇ ಇರುವುದರಿಂದ ಪ್ರಯಾಣಿಕರು ನಿತ್ಯವೂ ನರಕಯಾತನೆ ಅನುಭವಿಸುತ್ತಾ, ಖಾಸಗಿ ಬಸ್ ಟೆಂಪೋ, ಆಟೊಗಳಲ್ಲಿ ಪ್ರಯಾಣಿಸುತ್ತಿರುವುದು ಸಾಮಾನ್ಯ ಆಗಿದೆ.

ತಾಲ್ಲೂಕಿನಲ್ಲಿಯೇ ನ್ಯಾಮತಿ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಪ್ರತಿದಿನ ಸುತ್ತಮುತ್ತಲ ಗ್ರಾಮಗಳಿಂದ ಪಟ್ಟಣಕ್ಕೆ ಜನರ ಒಡಾಟ ಹೆಚ್ಚಾಗಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಸೌಲಭ್ಯದ ಕೊರತೆ ಇದೆ.
ಹೊನ್ನಾಳಿ ಡಿಪೋದಿಂದ ಬಹುತೇಕ ವಾಹನಗಳು ಬೆಂಗಳೂರು, ಮಂತ್ರಾಲಯ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಹೊಸಪೇಟೆ ದಾವಣಗೆರೆ ಮಾರ್ಗವಾಗಿ ಸಂಚರಿಸುತ್ತಿವೆ. ಡಿಪೋ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಭಾಗಗಳಿಗೆ ಒಂದು ಬಸ್‌ ಕೂಡ ಬಿಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ನ್ಯಾಮತಿ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಪ್ರತಿದಿನ ವಿದ್ಯಾರ್ಥಿಗಳು, ನೌಕರರು, ವ್ಯಾಪಾರಸ್ಥರು ಸಂಚರಿಸುತ್ತಾರೆ. ಶಾಲಾ-ಕಾಲೇಜು, ಕಚೇರಿ ಆಸ್ಪತ್ರೆಗಳಿಗೆ ಗಹೋಲು ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಿದೆ.

ಸರ್ಕಾರಿ ಬಸ್ ಸೌಲಭ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಉಚಿತ ಪಾಸ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಹಿಂದೆ ಹೊನ್ನಾಳಿ-ಬೆಂಗಳೂರು ರಾತ್ರಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಕಲೆಕ್ಷನ್ ಇಲ್ಲ ಎಂಬ ನೆಪವೊಡ್ಡಿ ಸಂಚಾರ ಸ್ಥಗಿತಗೊಳಿಸಿದ್ದಾರೆ ಎಂದು ವ್ಯಾಪಾರಸ್ಥರು ದೂರುತ್ತಾರೆ.

ಹೊನ್ನಾಳಿ, ನ್ಯಾಮತಿ-ಸವಳಂಗ ಶಿವಮೊಗ್ಗ, ಸವಳಂಗ ನ್ಯಾಮತಿ, ಹೊನ್ನಾಳಿ ದಾವಣಗೆರೆ ಹಾಗೂ ಹಾಗೂ ಹೊನ್ನಾಳಿಯಿಂದ ನ್ಯಾಮತಿ ಸವಳಂಗದವರೆಗೆ ವಿವಿಧ ಗ್ರಾಮಗಳ ಮೂಲಕ ಸರ್ಕಾರಿ ಬಸ್‌ಗಳು (ಗ್ರಾಮೀಣ) ಸಂಚರಿಸುವಂತೆ ಶಾಸಕರು, ಸಂಸದರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ತೋರಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ದಾವಣಗೆರೆ-ಹೊನ್ನಾಳಿ-ಚೀಲೂರು -ಶಿವಮೊಗ್ಗ ಸಂಚರಿಸುವ ಗ್ರಾಮಾಂತರ ಸಾರಿಗೆ ಬಸ್‌ಗಳಲ್ಲಿ ಕೆಲವನ್ನು ಬೆಳಿಗ್ಗೆ ಮತ್ತು ರಾತ್ರಿ ವೇಳೆ ಪ್ರಯಾಣಿಕರ ಹಿತದೃಷ್ಟಿಯಿಂದ ಹೊನ್ನಾಳಿ-ನ್ಯಾಮತಿ ಮಾರ್ಗವಾಗಿ ಸಂಚರಿಸಿದರೆ ಅನುಕೂಲವಾಗುತ್ತದೆ ಎಂದು ಮಾಹಿತಿ ಮತ್ತು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ವಿಜೇಂದ್ರ, ಆರುಂಡಿ ನಾಗರಿಕ ಸಮಿತಿ ಸದಸ್ಯ ರಾಜಣ್ಣ ಕಸಾಪ ಸದಸ್ಯ ಚುಟುಕು ರಾಜಣ್ಣ ಹೇಳುತ್ತಾರೆ.

ಹೊನ್ನಾಳಿ -ನ್ಯಾಮತಿ ತಾಲ್ಲೂಕಿನಲ್ಲಿ ಅನೇಕ ಗ್ರಾಮಗಳು ಸ್ವಾತಂತ್ರ್ಯ ಬಂದಾಗಿನಿಂದಲೂ ಬಸ್ ಸೌಲಭ್ಯವನ್ನೆ ಕಂಡಿಲ್ಲ. ನ್ಯಾಮತಿಯಿಂದ ಕುದುರೆಕೊಂಡ, ಚಟ್ನಹಳ್ಳಿ, ಮುಸ್ಸೆನಾಳ್, ಚೀಲೂರು, ಗೋವಿನಕೋವಿ, ಯರಗನಾಳ್, ಆರುಂಡಿ, ಕೆಂಚಿಕೊಪ್ಪ ಸೇರಿದಂತೆ ಬಹುತೇಕ ಭಾಗದ ಜನರು ಆಟೊಗಳಿಗೆ ಅವಲಂಬಿತರಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಟೊಗಳಿದ್ದು, ಚಾಲಕನಿಗೆ ಚಾಲನೆ ಮಾಡಲು ಸಹ ಅವಕಾಶವಿರದಷ್ಟು ಜನರನ್ನು ತುಂಬಿಕೊಂಡು ಆಟೊಗಳು ಸಂಚರಿಸುತ್ತವೆ.
ಸಾರ್ವಜನಿಕರು, ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಆಟೋಗಳ ಮೇಲೆ ಕೂತು ಪ್ರಯಾಣ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಆಗೊಮ್ಮೆ, ಈಗೊಮ್ಮೆ ಆಟೋ ಮಾಲೀಕರಿಗೆ ದಂಡ ವಿಧಿಸಿ ಸುಮ್ಮನಾಗುತ್ತಾರೆ.

ಗ್ರಾಮೀಣ ಪ್ರದೇಶಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡ ಹೊನ್ನಾಳಿ ಸಾರಿಗೆ ಘಟಕ. ಗ್ರಾಮಾಂತರ ಜನತೆಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸಲು ಮುಂದಾಗಬೇಕಿದೆ ಎಂಬುದು ಜನತೆಯ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT