ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ | ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ತಹಶೀಲ್ದಾರ್ ಎಚ್ಚರಿಕೆ

ಪೆಟ್ರೋಲ್ ಬಂಕ್, ಅಡುಗೆ ಅನಿಲ ಸಂಪರ್ಕ ಕೇಂದ್ರಗಳ ಮಾಲೀಕರ ಸಭೆ
Published 9 ಆಗಸ್ಟ್ 2023, 7:11 IST
Last Updated 9 ಆಗಸ್ಟ್ 2023, 7:11 IST
ಅಕ್ಷರ ಗಾತ್ರ

ಚನ್ನಗಿರಿ: ‘ಪೆಟ್ರೋಲ್ ಬಂಕ್ ಹಾಗೂ ಅಡುಗೆ ಅನಿಲ ಸಂಪರ್ಕ ಕೇಂದ್ರಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು. ಸರ್ಕಾರದ ನಿಯಮ ಉಲ್ಲಂಘಿಸುವ ಬಂಕ್ ಹಾಗೂ ಸಂಪರ್ಕ ಕೇಂದ್ರಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ’ ಎಂದು ತಹಶೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಎಚ್ಚರಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮಂಗಳವಾರ ನಡೆದ ಪೆಟ್ರೋಲ್ ಬಂಕ್ ಹಾಗೂ ಅಡುಗೆ ಅನಿಲ ಸಂಪರ್ಕ ಕೇಂದ್ರಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

10 ಕೆ.ಜಿ. ತೂಕದ ಸಂಪೂರ್ಣ ಸುರಕ್ಷತೆ ಹೊಂದಿರುವ ಫೈಬರ್ ಸಿಲಿಂಡರ್ ₹800ಕ್ಕೆ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ. ಅನಿಲವನ್ನು ತುಂಬಿದಾಗ 16.4 ಕೆ.ಜಿ. ತೂಕ ಇರುತ್ತದೆ. ಇದು ತುಂಬಾ ಹಗುರವಾಗಿದ್ದು, ಸುಲಭವಾಗಿ ಎತ್ತಿಕೊಂಡು ಹೋಗಬಹುದು. ಅಗ್ನಿ ಆಕಸ್ಮಿಕ ಸಂಭವಿಸಿದರೆ ಈ ಸಿಲಿಂಡರ್ ಸಿಡಿಯುವುದಿಲ್ಲ, ಬದಲಿಗೆ ಸಂಪೂರ್ಣವಾಗಿ ಸುಟ್ಟು ಹೋಗುತ್ತದೆ. ಸಿಲಿಂಡರ್‌ನಲ್ಲಿ ಎಷ್ಟು ಪ್ರಮಾಣ ಬಳಕೆಯಾಗಿದೆ ಎಂಬ ಮಾಹಿತಿಯೂ ಸಿಗಲಿದೆ. ಸುರಕ್ಷತೆಯ ದೃಷ್ಟಿಯಿಂದ ಹಗುರ ಫೈಬರ್ ಸಿಲಿಂಡರ್‌ಗಳನ್ನು ಗ್ರಾಹಕರು ಬಳಸಬೇಕು ಎಂದು ಅವರು ಮನವಿ ಮಾಡಿದರು.

‘ಇನ್ನುಮುಂದೆ ಕಲ್ಯಾಣ ಮಂಟಪ, ಹೋಟೆಲ್‌ಗಳಲ್ಲಿ ಗೃಹಬಳಕೆಯ ಸಿಲಿಂಡರ್‌ಗಳನ್ನು ಉಪಯೋಗಿಸುವಂತಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನೇ ಬಳಸಬೇಕು. ಕಲ್ಯಾಣ ಮಂಟಪ, ಹೋಟೆಲ್‌ಗಳಿಗೆ ಭೇಟಿ ನೀಡಿ, ನಿಯಮ ಉಲ್ಲಂಗಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. 15 ಕಿ.ಮೀ. ವ್ಯಾಪ್ತಿಯಲ್ಲಿರುವ ಗ್ರಾಹಕರಿಂದ ಹೆಚ್ಚುವರಿ ಹಣ ತೆಗೆದುಕೊಳ್ಳುವ ಏಜೆನ್ಸಿಗಳ ಪರವಾನಗಿ ರದ್ದು ಮಾಡಲಾಗುವುದು’ ಎಂದರು.

‘ಪೆಟ್ರೋಲ್ ಬಂಕ್‌ಗಳಲ್ಲಿ ಶೌಚಾಲಯ ಇರುವುದು ಕಡ್ಡಾಯ. ಪ್ರತಿದಿನ  ದರ ಪಟ್ಟಿ ನಮೂದಿಸಬೇಕು. ಬೆಳಿಗ್ಗೆ 6ರಿಂದ ರಾತ್ರಿ 11 ಗಂಟೆಯವರೆಗೆ ತೆರೆದಿರಬೇಕು. ಪಟ್ಟಣದಲ್ಲಿ 5 ಬಂಕ್‌ಗಳಿದ್ದು, ಇನ್ನು ಮುಂದೆ ಒಂದೊಂದು ಬಂಕ್‌ ಮಾಲೀಕರು ಪ್ರತಿ ತಿಂಗಳು ಸರದಿಯಂತೆ 24 ಗಂಟೆ ಸೇವೆಯನ್ನು ನೀಡಬೇಕು. ಬಂಕ್‌ಗಳಲ್ಲಿ ಕ್ಯಾನ್‌ಗಳಿಗೆ ಇಂಧನ ತುಂಬಬಾರದು’  ಎಂದು ಹೇಳಿದರು.

ಆಹಾರ ಇಲಾಖೆ ಶಿರಸ್ತೇದಾರ್ ಜಯರಾಂ ನಾಯ್ಕ, ಸಹಾಯಕ ಅಧಿಕಾರಿ ಗಂಗಾಧರ್, ಸಂಪರ್ಕ ಕೇಂದ್ರಗಳ ಮಾಲೀಕರಾದ ರವಿಕುಮಾರ್, ಶಶಿಧರ್, ಅನಿಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT