ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕ, ಅಳತೆಯಲ್ಲಿ ಮೋಸ: 395 ದೂರು ದಾಖಲು

ಜಿಲ್ಲೆಯಲ್ಲಿ 8 ತಿಂಗಳಲ್ಲಿ ₹ 6.56 ಲಕ್ಷ ದಂಡ
Last Updated 29 ಡಿಸೆಂಬರ್ 2022, 3:23 IST
ಅಕ್ಷರ ಗಾತ್ರ

ದಾವಣಗೆರೆ: ಗ್ರಾಹಕರು ಕೊಳ್ಳುವ ವಸ್ತುಗಳ ತೂಕ, ಅಳತೆ, ಗುಣಮಟ್ಟದಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಮೋಸ ಮಾಡುವ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗುತ್ತಿವೆ.

‘ಜಿಲ್ಲೆಯ ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಕಳೆದ ಏಪ್ರಿಲ್‌ನಿಂದ ನವೆಂಬರ್‌ವರೆಗೆ 1,350 ಅಂಗಡಿಗಳನ್ನು ಸ್ವಯಂ ಪರಿಶೀಲನೆ ಮಾಡಿ 395 ದೂರುಗಳನ್ನು ದಾಖಲಿಸಿ,
₹ 6,56,800 ದಂಡ ಆಕರಿಸಿದ್ದಾರೆ. 2021ರಲ್ಲಿ 368 ಪ್ರಕರಣಗಳನ್ನು ದಾಖಲಿಸಿ, ₹ 6.70 ಲಕ್ಷ ದಂಡ ಸಂಗ್ರಹಿಸಲಾಗಿತ್ತು’ ಎಂದು ಇಲಾಖೆಯ ಸಹಾಯಕ ನಿಯಂತ್ರಕ ಎಚ್.ಎಸ್. ರಾಜು ‘ಪ್ರಜಾವಾಣಿ’ಗೆ ಮಾಹಿತಿ
ನೀಡಿದರು.

ಯಾವ ಯಾವ ಪ್ರಕರಣಗಳು?: ‘ಪ್ರಮಾಣಬದ್ಧ ತೂಕ, ಅಳತೆಯನ್ನು ನಿರ್ದಿಷ್ಟ ಅವಧಿಯಲ್ಲಿ ಮುದ್ರಿಸದೇ ಇರುವ ಪ್ರಕರಣ, ಕಡಿಮೆ ತೂಕ ಅಳೆದು ಮೋಸ, ಸಾಮಗ್ರಿಯ ಪೊಟ್ಟಣಗಳಲ್ಲಿ ಕಡ್ಡಾಯ ಘೋಷಣೆ ನಮೂದಿಸದೇ ಇರುವ ಪ್ರಕರಣಗಳಲ್ಲಿ, ಕಾನೂನು ಮಾಪನಶಾಸ್ತ್ರ ಕಾಯ್ದೆ ಹಾಗೂ ಪೊಟ್ಟಣ ಸಾಮಗ್ರಿಗಳ ನಿಯಮಗಳ ಅಡಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ನಗರದ ಅಂಗಡಿಯೊಂದರ ಅಡುಗೆ ಎಣ್ಣೆಯ ಟಿನ್ ಮೇಲೆ ಕಡ್ಡಾಯ ಘೋಷಣೆಗಳನ್ನು ನಮೂದಿಸದೇ ಇರುವ ಕಾರಣಕ್ಕೆ ಈ ವರ್ಷ ಅಂಗಡಿ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಿ ₹ 70,000 ದಂಡ ವಿಧಿಸಿರುವುದು ಜಿಲ್ಲೆಯಲ್ಲಿ ಅತಿ ದೊಡ್ಡ ಪ್ರಕರಣವಾಗಿದೆ. ಮಾಲ್‌ಗಳಲ್ಲಿ ಆಗಾಗ ತಪಾಸಣೆ ನಡೆಸಿ
ದಂಡ ವಿಧಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ದಾಖಲಾದ ಪ್ರಕರಣಗಳಲ್ಲಿ ಇಲಾಖೆಯ ಮಟ್ಟದಲ್ಲಿ ಎರಡನ್ನು ಹೊರತುಪಡಿಸಿ ಎಲ್ಲವೂ ಇತ್ಯರ್ಥವಾಗಿವೆ. ಅವು ತನಿಖೆಯ ಹಂತದಲ್ಲಿವೆ. ನಮ್ಮಲ್ಲಿ ಪ್ರಕರಣಗಳು ಇತ್ಯರ್ಥವಾಗದೇ ಇದ್ದರೆ ಜೆಎಂಎಫ್‌ಸಿ ನ್ಯಾಯಾಲಯದ ಮೊರೆಹೋಗಬಹುದು. ಜಿಲ್ಲೆಯಲ್ಲಿ ಈ ಕುರಿತು ಜಾಗೃತಿ ಹಾಗೂ ತಪಾಸಣೆ ನಿರಂತರವಾಗಿ ನಡೆಯುತ್ತಿವೆ’ ಎಂದರು.

‘ಎರಡು ಪೆಟ್ರೋಲ್ ಬಂಕ್‌ಗಳಲ್ಲಿ ಕಡಿಮೆ ತೈಲ ವಿತರಿಸಿರುವ ಪ್ರಕರಣಗಳನ್ನು ಪತ್ತೆ ಹಚ್ಚಿದ್ದೇವೆ. ಹೊನ್ನಾಳಿಯ ಕತ್ತಲಗೆರೆ ಬಳಿ ವೇ ಬ್ರಿಡ್ಜ್‌ನಲ್ಲಿ ರೈತರ ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಕಡಿಮೆ ತೂಕ ತೋರಿಸುತ್ತಿದುದು ಕಂಡುಬಂದಿತ್ತು. ಆ ವೇ ಬ್ರಿಡ್ಜ್‌ ಮಾಲೀಕರಿಗೆ ₹ 6,000
ಹಾಗೂ ರಾಜ್ಯ ಉಗ್ರಾಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಅಲ್ಲಿ
₹ 20,000 ದಂಡ ವಿಧಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ದೂರು ನೀಡುವವರು ಇಲ್ಲಿ ಸಂಪರ್ಕಿಸಿ: ಕಚೇರಿ ವಿಳಾಸ: ಅಳತೆಯಲ್ಲಿ ಮೋಸ ಮತ್ತಿತರ ಪ್ರಕರಣಗಳು ಕಂಡುಬಂದರೆ ಗ್ರಾಹಕರು ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ ಕಚೇರಿ, ಮಾಪನ ಭವನ, ರೇಷ್ಮೆ ಇಲಾಖೆ ಎದುರು, ಎಪಿಎಂಸಿ ಯಾರ್ಡ್ ದಾವಣಗೆರೆ (ಮೊಬೈಲ್‌ ದೂರವಾಣಿ ಸಂಖ್ಯೆ 8050024760) ಈ ವಿಳಾಸ ಸಂಪರ್ಕಿಸಬಹುದು.

ಗ್ರಾಹಕರಿಗೆ ಮುನ್ನೆಚ್ಚರಿಕೆ

‘ಖರೀದಿಗೆ ಹೋದ ಸಂದರ್ಭ, ಜನರು ಬುದ್ಧಿವಂತಿಕೆಯಿಂದ, ಸೂಕ್ಷ್ಮವಾಗಿ ಪೊಟ್ಟಣದ ಮೇಲಿರುವ ಬರಹಗಳನ್ನು ಗಮನಿಸಬೇಕು. ಕಿರಾಣಿ, ದಿನಸಿ ಬಗ್ಗೆ ‌‌ಇಲಾಖೆಯಿಂದ ಮುದ್ರಿಸಲಾಗಿದೆಯಾ ಎಂಬುದನ್ನು ಪರಿಶೀಲಿಸಬೇಕು. ವ್ಯಾಪಾರಸ್ಥರು ತೂಕ ಮಾಡುವ ಮೊದಲು ತಕ್ಕಡಿಯ ಎರಡೂ ತಟ್ಟೆಗಳು ಖಾಲಿಯಾಗಿದ್ದು, ಅವುಗಳ ಸಮತೋಲನ ಖಚಿತಪಡಿಸಿಕೊಳ್ಳಬೇಕು. ತೂಕ ಮಾಡುವಾಗ ತಕ್ಕಡಿಯ ಪಾಯಿಂಟ್‌ ಗಮನಿಸಬೇಕು’ ಎಂದು ರಾಜು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT