ಮಂಗಳವಾರ, ಜನವರಿ 26, 2021
20 °C

ಆಸ್ಪತ್ರೆಯಲ್ಲಿ ಮಗು ಅದಲು ಬದಲು: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಗಂಡು ಮಗು ಹೆರಿಗೆಯಾಗಿದೆ ಎಂದು ಮೊದಲು ಗಂಡು ಮಗುವನ್ನು ಕೈಗೆ ಇರಿಸಿ, ಬಳಿಕ ಹೆಣ್ಣು ಮಗು ಆಗಿದೆ ಎಂದು ಹೆತ್ತವರಿಗೆ ಆಸ್ಪತ್ರೆಯವರು ತಿಳಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಮಗು ಮಾರಾಟದ ಜಾಲವೇ ಈ ರೀತಿ ಅದಲು ಬದಲಿಗೆ ಕಾರಣ ಎಂದು ಹೆತ್ತವರು ಆರೋಪಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಮಾಕನಡುಕು ಗ್ರಾಮದ ನಾಗರಾಜ್ ಮತ್ತು ಮಾರಕ್ಕ ಅವರಿಗೆ ಮದುವೆಯಾಗಿ 20 ವರ್ಷಗಳಾಗಿವೆ. ಈವರೆಗೆ 8 ಮಕ್ಕಳಾಗಿದ್ದು, ಎಂಟು ಕೂಡ ಮೃತಪಟ್ಟಿವೆ. ಮತ್ತೆ ಗರ್ಭಿಣಿಯಾಗಿದ್ದ ಮಾರಕ್ಕ ಅವರನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಶನಿವಾರ ಸಂಜೆ ದಾಖಲಿಸಲಾಗಿತ್ತು. ರಾತ್ರಿ ಹೆರಿಗೆಯಾಗಿತ್ತು. ನಾಗರಾಜ್‌ ಅವರ ತಾಯಿಯ ಕೈಗೆ ಗಂಡು ಮಗುವನ್ನು ತಂದು ಕೊಟ್ಟಿದ್ದರು. ನಾಗರಾಜ್‌ ಮತ್ತು ತಾಯಿ ಮಗುವನ್ನು ಮುದ್ದಾಡಿದ್ದರು. ಬಳಿಕ ಸಿಬ್ಬಂದಿ ಬಂದು, ‘ಇದು ನಿಮ್ಮ ಮಗು ಅಲ್ಲ. ನಿಮಗೆ ಹೆಣ್ಣು ಮಗುವಾಗಿದ್ದು, ಅದು ಐಸಿಯುನಲ್ಲಿದೆ’ ಎಂದು ಆ ಮಗುವನ್ನು ಒಯ್ದಿದ್ದಾರೆ.

‘ನನಗೆ ಹೆಣ್ಣು ಮಗುವಾದರೂ ಸಮಸ್ಯೆ ಇಲ್ಲ. ಶಸ್ತ್ರಚಿಕಿತ್ಸೆ ಮೂಲಕ ಗಂಡು ಪಾಪು ಹೆರಿಗೆಯಾಗಿದೆ ಎಂದು ಕೈಗೆ ನೀಡಿದ್ದರು. ತುಂಬಾ ಹೊತ್ತು ನಮ್ಮ ಕೈಯಲ್ಲೇ ಮಗು ಇತ್ತು. ಆಮೇಲೆ ಕಿತ್ತುಕೊಂಡಿದ್ದಾರೆ. ಹೆಣ್ಣು ಮಗುವನ್ನು ತೋರಿಸಿಲ್ಲ. ದುಡಿದು ತಿನ್ನುವ ನಮ್ಮಂಥ ಬಡವರಿಗೆ ಮೋಸ ಮಾಡಿದ್ದಾರೆ’ ಎಂದು ನಾಗರಾಜ್‌ ಆರೋಪಿಸಿದ್ದಾರೆ.

‘ಮಗು ಮಾರಾಟ ಜಾಲ ಇದರ ಹಿಂದೆ ಇದೆ. ಮಾರಕ್ಕ ಅವರಿಗೆ ಹೆಣ್ಣು ಮಗು ಎಂದಷ್ಟೇ ಬರೆದ ಚೀಟಿಯೊಂದನ್ನು ಕೊಟ್ಟಿದ್ದು ಬಿಟ್ಟರೆ ಹೆರಿಗೆ ಮಾಡಿದ ವೈದ್ಯರು ಯಾರು, ಮಾರಕ್ಕ ಅವರ ವಿಳಾಸ ಯಾವುದು? ಎಂಬ ಮಾಹಿತಿಯೇ ಆ ಚೀಟಿಯಲ್ಲಿ ಇಲ್ಲ. ಹಾಗಾಗಿ ಬಡಾವಣೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇವೆ’ ಎಂದು ನಾಗರಾಜ್‌ ಅವರ ಸಂಬಂಧಿ ವಸಂತ ಕುಮಾರ್‌ ತಿಳಿಸಿದ್ದಾರೆ.

ಮಗು ಅದಲು ಬದಲು ಮಾಡಿದ್ದಾರೆ ಎಂದು ‍ಪೋಷಕರು ಆಸ್ಪತ್ರೆಯ ಮುಂದೆಯೇ ಪ್ರತಿಭಟನೆ ನಡೆಸಿದರು. ಸಂಬಂಧಿಕರು, ಲಿಂಗತ್ವ ಅಲ್ಪಸಂಖ್ಯಾತರು ಬೆಂಬಲ ನೀಡಿದರು.

ಹೆಸರಿನ ಗೊಂದಲ: ಸರ್ಜನ್‌
‘ಮಾರಕ್ಕ, ಮಾರಮ್ಮ ಎಂಬ ಹೆಸರುಗಳು ಆಚೀಚೆಯಾಗಿ ಬೇರೆಯವರ ಮಗುವನ್ನು ಇವರದ್ದೆಂದು ಸಿಬ್ಬಂದಿ ಭಾವಿಸಿದ್ದೇ ಗೊಂದಲಕ್ಕೆ ಕಾರಣ. ಮಾರಕ್ಕ ಅವರ ಕುಟುಂಬದವರಿಗೆ ಮಗುವನ್ನು ತೋರಿಸುವ ಹೊತ್ತಿಗೆ ಮಾರಕ್ಕ ಅವರಿಗೆ ಹೆರಿಗೆಯೇ ಆಗಿರಲಿಲ್ಲ. ಬಳಿಕ ಅವರಿಗೆ ಹೆರಿಗೆಯಾಗಿದೆ. ಅದು ಹೆಣ್ಣು ಮಗು. ಐಸಿಯುನಲ್ಲಿದೆ. ದೂರು ಬಂದ ಕೂಡಲೇ ಒಂದು ಸಮಿತಿ ಮಾಡಿದ್ದೇನೆ. ಅವರು ತನಿಖೆ ನಡೆಸುತ್ತಾರೆ’ ಎಂದು ಜಿಲ್ಲಾ ಸರ್ಜನ್‌ ಡಾ. ಜಯಪ್ರಕಾಶ್‌, ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.