ದೇಶ ಸೇವೆಗೆ ಮಕ್ಕಳ ಅರ್ಪಣೆ ಶ್ಲಾಘನೀಯ

7
ಕುಂಚೂರು ಗ್ರಾಮದಲ್ಲಿ ವೀರಯೋಧರ ನಮನ ಕಾರ್ಯಕ್ರಮ

ದೇಶ ಸೇವೆಗೆ ಮಕ್ಕಳ ಅರ್ಪಣೆ ಶ್ಲಾಘನೀಯ

Published:
Updated:
Deccan Herald

ಹರಪನಹಳ್ಳಿ: ದೇಶದ ರಕ್ಷಣೆಗಾಗಿ ಶತ್ರುಗಳನ್ನು ಸದೆಬಡೆಯಲು ಪ್ರಾಣದ ಹಂಗುತೊರೆದು ಹೋರಾಡುವ ಸೈನಿಕರ ಸ್ಮರಣೆ ಮಾಡುವುದು ಎಲ್ಲರ ಆದ್ಯ ಕರ್ತವ್ಯ. ಹೆತ್ತ ತಾಯಿ ತನ್ನ ಮಕ್ಕಳನ್ನು ದೇಶ ಸೇವೆಗೆ ಅರ್ಪಿಸುವುದು ಅವಿಸ್ಮರಣೀಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಿರಿರಾಜ ರೆಡ್ಡಿ ಹೇಳಿದರು.

ತಾಲ್ಲೂಕಿನ ಕುಂಚೂರು ಗ್ರಾಮದ ಹುತಾತ್ಮ ಯೋಧ ಮಲ್ದಾರ್ ನಜೀರ್ ಅಹಮದ್ ಅವರ ನೆನಪಿಗಾಗಿ ಶುಕ್ರವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ವೀರಯೋಧರ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿ ಸೈನಿಕ ಹರಪನಹಳ್ಳಿ ರಾಜಣ್ಣ ಮಾತನಾಡಿ, ಯೋಧರಿಗೆ ಎಂದೂ ಸಾವಿಲ್ಲ. ಅವರು ಹುತಾತ್ಮರು. ಅವರು ಜನಮಾನಸದಲ್ಲಿ ಸದಾ ಉಳಿದುಕೊಂಡಿರುತ್ತಾರೆ. ದೇಶಕ್ಕಾಗಿ ಪ್ರಾಣತೆತ್ತ ಸೈನಿಕರ ಹೆಸರಲ್ಲಿ ಇಂತಹ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಯೋಜಿಸಿರುವುದು ಶ್ಲಾಘನೀಯ’ ಎಂದರು.

ಕರ್ನಾಟಕ ವಿವಿಯ ಕನ್ನಡ ವಿಭಾಗದ ಉಪನ್ಯಾಸಕ ನಿಟ್ಟೂರು ಶಿವಸೋಮಪ್ಪ ಮಾತನಾಡಿ, ‘ದೇಶಪ್ರೇಮ ಇಮ್ಮಡಿಗೊಳಿಸುವ ಈ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ನೀಡಬೇಕು. ಶಿಸ್ತಿಗೆ ಹೆಸರಾದ ಸೈನಿಕರಲ್ಲಿ ಹೆಸರಲ್ಲಿ ನಡೆಯುವ ಕಾರ್ಯಕ್ರಮಗಳು ಬಹಳಷ್ಟು ಅಚ್ಚುಕಟ್ಟಾಗಿ ನೆರವೇರಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ರೈತ ಸಂಘದ ಎಚ್.ಎಂ. ಮಹೇಶ್ವರಸ್ವಾಮಿ, ‘ಜೈ ಜವಾನ್ ಜೈ ಕಿಸಾನ್’ ಎಂಬಂತೆ ರೈತ ಮತ್ತು ಸೈನಿಕ ದೇಶದ ಬೆನ್ನೆಲುಬು. ಇಬ್ಬರಿಗೂ ಸಮನಾದ ಗೌರವ ಮನ್ನಣೆ ಸಿಗಬೇಕು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಸುಧಾಕರ್ ಮಾತನಾಡಿ, ವೀರಯೋಧ ನಜೀರ್ ಅಹಮದ್ ಅವರು ನಮ್ಮೂರಿನವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆ ವಿಷಯ. ಗ್ರಾಮದಿಂದ ಇನ್ನೂ ಹೆಚ್ಚೆಚ್ಚು ಸೈನ್ಯ ಸೇರಲು ಮುಂದಾಗಬೇಕು ಎಂದರು.

ಮದ್ರಾಸ್ ರೆಜಿಮೆಂಟ್ ಬೆಳಗಾವಿ ವಿಭಾಗದ ಸುಬೇದಾರ ಮಂಜುನಾಥ ರೆಡ್ಡಿ ಮಾತನಾಡಿ, ಕುಂಚೂರು ಶಾಲೆಗೆ ಕೊಳವೆ ಬಾವಿ ಅಥವಾ ಒಂದು ಕೊಠಡಿ ನಿರ್ಮಾಣಕ್ಕೆ 6 ಲಕ್ಷ ಧನ ಸಹಾಯ, ಯೋಧ ನಜೀರ್ ಅಹಮದ್ ಕುಟುಂಬಕ್ಕೆ 2 ಲಕ್ಷ ಹಣ ನೀಡಲಾಗುತ್ತದೆ ಎಂದರು.

ಸೈನಿಕ ನಜೀರ್ ಅಹಮದ್ ತಾಯಿ ಪ್ಯಾರಿಮಾಂಬಿ ಮಾಲ್ದಾರ್ ಅವರಿಗೆ 5 ಸಾವಿರ ರೂ.ಗಳ ಚೆಕ್ ನೀಡಿ ಗೌರವಿಸಲಾಯಿತು. ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಶಫಿಪುಲ್ಲಾ, ಸಿಪಿಐ ಮುಖಂಡ ಎಚ್.ರಾಜಪ್ಪ, ರಾಜ್ಯ ರೈತ ಸಂಘದ ಎಚ್.ಎಂ.ಮಹೇಶ್ವರಸ್ವಾಮಿ, ಮುಖಂಡರಾದ ಸಂಜೀವಪ್ಪ, ಸುಭಾನ್‌ಸಾಬ್, ಶಾರದಾ ಉದಾಶಿಮಠ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !