ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಎಳನೀರಿನ ದರ ₹50ಕ್ಕೆ ಏರಿಕೆ

ಮಳೆ ಕೊರತೆ, ಏರುತ್ತಿರುವ ಬಿಸಿಲು; ಜನರ ಪರದಾಟ
Published 12 ಮೇ 2024, 5:27 IST
Last Updated 12 ಮೇ 2024, 5:27 IST
ಅಕ್ಷರ ಗಾತ್ರ

ಹರಿಹರ: ಹೆಚ್ಚಿದ ಬೇಡಿಕೆ ಹಾಗೂ ಇಳುವರಿ ಕುಸಿದ ಪರಿಣಾಮ, ಎಳನೀರಿನ ಬೆಲೆ ಗಗನಕ್ಕೇರಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.

₹35ರಂತೆ ಮಾರಾಟವಾಗುತ್ತಿದ್ದ ಒಂದು ಎಳನೀರಿನ ಬೆಲೆ ಈಗ ₹50ಕ್ಕೇರಿದೆ. ಒಂದೇ ಬಾರಿಗೆ ಎಳನೀರಿನ ಬೆಲೆ ದಾಖಲೆಯ ₹15ಯಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಏರುತ್ತಿರುವ ಬಿಸಿಲಿನ ಬೇಗೆಯ ಜೊತೆಗೆ ಜೇಬಿಗೆ ಆಗುತ್ತಿರುವ ಭಾರವನ್ನೂ ತಡೆದುಕೊಳ್ಳಬೇಕಾಗಿದೆ.

ವರ್ಷಪೂರ್ತಿಯೂ ಬಹುತೇಕರ ನೆಚ್ಚಿನ ಪಾನೀಯ ಎಳನೀರು. ರೋಗಿಗಳು ಶೀಘ್ರ ಚೇತರಿಸಿಕೊಳ್ಳಲು ಎಳನೀರು ನೀಡಲಾಗುತ್ತದೆ. ವ್ಯಾಯಾಮ ಮಾಡುವವರು, ಬಿಸಿಲಿನ ಬೇಗೆಯಿಂದ ಪಾರಾಗಲು ಬಯಸುವವರು ಪ್ರಕೃತಿದತ್ತ ಹಾಗೂ ಆರೋಗ್ಯಯುತ ಎಳನೀರನ್ನು ಸೇವಿಸುತ್ತಾರೆ.

ಕಳೆದ ವರ್ಷ ಮಳೆಗಾಲ ಕೈ ಕೊಟ್ಟಿರುವುದು, ಈ ಬಾರಿಯ ಬೇಸಿಗೆಯ ಬಿಸಿಲು ದಾಖಲೆಯ ಪ್ರಮಾಣಕ್ಕೇರಿರುವುದು ಸಹಜವಾಗಿ ಎಳನೀರಿಗೆ ಬೇಡಿಕೆ ಹೆಚ್ಚಾಗಲು ಕಾರಣ. ಒಮ್ಮೊಮ್ಮೆ  ಗರಿಷ್ಟ ₹5 ಏರಿಕೆಯಾಗುತ್ತಿತ್ತು. ಆದರೆ ಈಗ ಒಮ್ಮೆಲೆ ₹15 ಏರಿಕೆಯಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ನಗರದಲ್ಲಿ ಆರೇಳು ಜನ ಎಳನೀರು ಮಾರಾಟಗಾರರಿದ್ದಾರೆ. ಈ ಪೈಕಿ ಈಗ ಮೂರ‍್ನಾಲ್ಕು ಜನರು ಎಳನೀರನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಉಳಿದವರು ಸದ್ಯಕ್ಕೆ ಎಳನೀರ ಉಸಾಬರಿ ಬೇಡ ಎಂದು ಮನೆಯಲ್ಲಿ ಕುಳಿತಿದ್ದಾರೆ.

ಹರಿಹರ-ದಾವಣಗೆರೆ ಸೇರಿದಂತೆ ಹೊರ ಜಿಲ್ಲೆಗಳಿಗೆ ದಾವಣಗೆರೆ ತಾಲ್ಲೂಕಿನ ಜರೀಕಟ್ಟೆ ಮಾರುಕಟ್ಟೆಯಿಂದ ಎಳನೀರು ಮಾರಾಟಗಾರರು ಖರೀದಿ ಮಾಡುತ್ತಿದ್ದರು. ಆದರೀಗ ಜರೀಕಟ್ಟೆ ಮಾರುಕಟ್ಟೆಯಲ್ಲೂ ಎಳನೀರಿನ ಲಭ್ಯತೆ ಇಲ್ಲದಂತಾಗಿದೆ.

ಈಗ ಹರಿಹರ-ದಾವಣಗೆರೆ ತಾಲ್ಲೂಕಿನ ವ್ಯಾಪಾರಿಗಳಿಗೆ ಜರೀಕಟ್ಟೆಯ ಎಳನೀರಿನ ದಾಸ್ತಾನು ಸಿಗುತ್ತಿಲ್ಲ. ದೂರದ ಭದ್ರಾವತಿ, ಶಿವಮೊಗ್ಗ, ಚೆನ್ನಗಿರಿ ಹಾಗೂ ಇತರೆ ತಾಲ್ಲೂಕುಗಳಲ್ಲಿ ಅಲ್ಪಸ್ವಲ್ಪ ಎಳನೀರು ಸಿಗುತ್ತಿದೆ. ಹೀಗಾಗಿ ಖರೀದಿ ಹಾಗೂ ಸಾಗಣೆ ದರ ಹೆಚ್ಚಾಗಿದ್ದರಿಂದ ಎಳನೀರು ಮಾರಾಟ ದರವೂ ಏರಿಕೆಯಾಗಿದೆ.

ಕೈಕೊಟ್ಟ ಮಳೆ ಹಾಗೂ ಬಿಸಿಲಿನ ತಾಪ

ಎಳನೀರಿನ ದರ ಹೆಚ್ಚಾಗಲು ಪ್ರಮುಖ ಕಾರಣ. ದಾಖಲೆಯ ಬಿಸಿಲಿನ ತಾಪದಿಂದ ಒಂದೆಡೆ ಬೇಡಿಕೆ ಹೆಚ್ಚಾಗಿದೆ ನೀರಿನ ಲಭ್ಯತೆ ಇಲ್ಲದೆ ಇನ್ನೊಂದೆಡೆ ಇಳುವರಿ ಕಡಿಮೆಯಾಗಿದೆ ಇದರಿಂದಾಗಿ ಎಳನೀರಿನ ದರ ಹೆಚ್ಚಾಗಿದೆ. ಒಂದೆರಡು ಉತ್ತಮ ಮಳೆಯಾದರೆ ಇಳುವರಿ ಹೆಚ್ಚಾಗಿ ದರ ಇಳಿಕೆಯಾಗಲಿದೆ ಎನ್ನುತ್ತಾರೆ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶಶಿಧರ ಎಚ್.ಎನ್.

ಸಮೀಪದಲ್ಲಿ ಸಿಗದ ಕಾರಣ ದೂರದ ಭದ್ರಾವತಿ ಶಿವಮೊಗ್ಗ ಚೆನ್ನಗಿರಿ ಕಡೆಯ ತೋಟಗಳಿಂದ ಮಾಲು ತರಿಸುತ್ತಿದ್ದೇವೆ. ಖರೀದಿ ದರ ನಮಗೆ ರೂ.40 ಬೀಳುತ್ತಿದೆ ಅದರಲ್ಲಿ ಅತ್ಯಂತ ಸಣ್ಣ ಎಳನೀರು ಬರುತ್ತಿದ್ದು ಅದನ್ನು ಕಡಿಮೆ ದರಕ್ಕೆ ಮಾರಬೇಕಿದೆ ಎನ್ನುತ್ತಾರೆ ಇಲ್ಲಿನ ಗಾಂಧಿ ಸರ್ಕಲ್‌ನ ಎಳನೀರ ವ್ಯಾಪಾರಿ ಅತಾಉಲ್ಲಾ.

ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಾಗೂ ದುಬಾರಿ ಡ್ರಿಂಕ್ಸ್ಗಳಿಗೆ ಹೋಲಿಸಿದರೆ ಎಳನೀರಿನ ಸೇವನೆ ಉತ್ತಮ ಮಳೆಯಾಗುವವರೆಗೆ ಸಾರ್ವಜನಿಕರು ಎಳನೀರಿಗೆ ಹೆಚ್ಚಿನ ದರ ನೀಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದ ಪ್ರಗತಿಪರ ರೈತ ಕುಂದೂರು ಮಂಜಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT