ಗುರುವಾರ , ಜನವರಿ 28, 2021
18 °C
ಬಿಜೆಪಿ ಪ್ರಕೋಷ್ಠ ಸಂಚಾಲಕರ ಸಭೆ ಉದ್ಘಾಟಿಸಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌

ಗುರಿ, ದಾರಿ ಮರೆತ ಕಾಂಗ್ರೆಸ್‌: ನಳಿನ್‌ ಕುಮಾರ್‌ ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಾಂಗ್ರೆಸ್‌ ತನ್ನ ಗುರಿ ಮತ್ತು ದಾರಿಯನ್ನು ಮರೆತ ಕಾರಣದಿಂದಾಗಿ ವಿರೋಧ ಪಕ್ಷವಾಗಿ ಕುಳಿತುಕೊಳ್ಳುವ ಅರ್ಹತೆಯನ್ನೂ ಕಳೆದುಕೊಂಡಿತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಅಪೂರ್ವ ರೆಸಾರ್ಟ್‌ನಲ್ಲಿ ಮಂಗಳವಾರ ನಡೆದ ರಾಜ್ಯ ಬಿಜೆಪಿಯ 20 ಪ್ರಕೋಷ್ಠಗಳ ಸಂಚಾಲಕ ಮತ್ತು ಸಹಸಂಚಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಾಗ ಭ್ರಷ್ಟಾಚಾರ ಮಾಡಿತು. ಸಂಘಟನೆಯನ್ನು ಮರೆತರು, ಕಾರ್ಯಕರ್ತರನ್ನು ಮರೆತರು. ದೇಶವನ್ನು ಪರಿವರ್ತಿಸುವ ಅಭಿವೃದ್ಧಿಯನ್ನು ಮರೆತರು. ಕುಟುಂಬ ರಾಜಕಾರಣ ಮಾಡಿದರು. ಹಾಗಾಗಿ ಒಂದು ಕಾಲದಲ್ಲಿ ಕಾಂಗ್ರೆಸ್‌ನಿಂದ ಲೈಟ್‌ಕಂಬ ನಿಂತರೂ ಗೆಲ್ಲುತ್ತದೆ ಎಂಬ ಮಾತಿದ್ದ ಪಕ್ಷ ಇವತ್ತು ಹೀನಾಯ ಸ್ಥಿತಿಗೆ ಹೋಗಿದೆ. ಆ ಪಕ್ಷದ ಕಾರ್ಯಕರ್ತರಲ್ಲಿ ಅವರ ಉದ್ದೇಶ ಏನು ಎಂದು ಕೇಳಿದರೆ ಅಧಿಕಾರ ಎಂದು ಹೇಳುತ್ತಾರೆ. ಅದರ ಆಚೆಗೆ ಇಲ್ಲ. ಅದೇ ಬಿಜೆಪಿ ಕಾರ್ಯಕರ್ತರಲ್ಲಿ ಕೇಳಿದರೆ ಜಗತ್ತು ನಮಿಸುವ ದೇಶ ನಿರ್ಮಾಣ ಎಂದು ಹೇಳುತ್ತಾರೆ. ಇದೇ ಎರಡು ಪಕ್ಷಗಳ ನಡುವಿನ ವ್ಯತ್ಯಾಸ ಎಂದು ತಿಳಿಸಿದರು.

ಅಂತ್ಯೋದಯದ ಪರಿಕಲ್ಪನೆಯನ್ನು ದೀನದಯಾಳ್‌ ಉಪಾಧ್ಯಾಯರು ನೀಡಿದರು. ಕಟ್ಟಕಡೆಯ ವ್ಯಕ್ತಿಗೂ ಬದುಕುವ ಹಕ್ಕು ಇದೆ ಎಂದು ಹೇಳಿದರು. ದೇಶದಲ್ಲಿ ಒಂದೇ ಧ್ವಜ, ಒಂದೇ ಸಂವಿಧಾನ, ಒಂದೇ ಪ್ರಧಾನಿ ಇರಬೇಕು ಎಂದು ಶ್ಯಾಮ್‌ ಪ್ರಸಾದ್‌ ಮುಖರ್ಜಿ ಹೇಳಿದರು. ಅಲ್ಲಿಂದ ಸುಮಾರು 75 ವರ್ಷಗಳ ಕಾಲ ನಾವು ಅಧಿಕಾರಕ್ಕೆ ಬಂದಿಲ್ಲ. ಈಗ ಅಧಿಕಾರಕ್ಕೆ ಬಂದಾಗ ಜನ ಸಾಮಾನ್ಯರಿಗೆ ಸರ್ಕಾರದ ಯೋಜನೆಯನ್ನು ತಲುಪಿಸಿದರು. ಬಡವರ ಖಾತೆಗಳಿಗೆ ಹಣ ಹಾಕಿದರು. ಆಯುಷ್ಮಾನ್‌ ಭಾರತ್‌ ಮೂಲಕ ಆರೋಗ್ಯಕ್ಕೆ ₹ 5 ಲಕ್ಷ ವರೆಗೆ ವಿಮೆ ನೀಡಿದರು. ನೂರಾರು ಯೋಜನೆಗಳನ್ನು ಜಾರಿಗೆ ತಂದರು. 75 ವರ್ಷದ ಹಿಂದಿನ ಅಂತ್ಯೋದಯದ ಮಾತು ಮರೆಯಲಿಲ್ಲ. ಒಂದೇ ಧ್ವಜ, ಒಂದೇ ಸಂವಿಧಾನ, ಒಂದೇ ಪ್ರಧಾನಿ ಎಂಬ ಮಾತನ್ನು ಮರೆಯಲಿಲ್ಲ. ಕಾಶ್ಮೀರಕ್ಕೆ ನೀಡಿದ ವಿಶೇಷ ಅಧಿಕಾರ ತೆಗೆದರು ಎಂದು ವಿವರಿಸಿದರು.

90ನೇ ದಶಕದಲ್ಲಿ ದೇಶದಲ್ಲಿ ಕಾಂಗ್ರೆಸ್‌ ಪಕ್ಷದ 1,800 ಶಾಸಕರು ಇದ್ದರು. ಆಗ ಬಿಜೆಪಿಯ ಶಾಸಕರಿದ್ದುದು 100. ಇವತ್ತು ಬಿಜೆಪಿಯ 1,800 ಶಾಸಕರಿದ್ದಾರೆ. ಕಾಂಗ್ರೆಸ್‌ನ 700 ಶಾಸಕರಷ್ಟೇ ಇದ್ದಾರೆ ಎಂದು ತಿಳಿಸಿದರು.

ನಮ್ಮ ಪಕ್ಷದ ಅಭಿಮಾನಗಳು ಪಕ್ಷದ ಹೊರಗೆ ಬಹಳ ಮಂದಿ ಇದ್ದಾರೆ. ಹಾಗೆ ಹೊರಗೆ ಇರುವವರನ್ನು ಒಳಗೆ ತರುವ ಕಾರ್ಯವೇ ಪ್ರಕೋಷ್ಠ. ವೈದ್ಯರು, ಉದ್ಯಮಶೀಲರು, ವ್ಯಾಪಾರಿಗಳು ಎಲ್ಲರನ್ನೂ ಒಳಗೊಳ್ಳಲು ಆಗಿದೆ. 20 ಪ್ರಕೋಷ್ಠ ಘೋಷಣೆಯಾಗಿದೆ. ಇನ್ನು ಐದು ಪ್ರಕೋಷ್ಠ ರಚನೆಯಾಗಲಿವೆ. 90 ಸಾವಿರ ಕಾರ್ಯಕರ್ತರಿಗೆ ಪ್ರಕೋಷ್ಠದಲ್ಲಿ ಜವಾಬ್ದಾರಿ ಸಿಗಲಿದೆ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕರಾದ ಎಸ್‌.ಎ. ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಮಾಡಾಳ್‌ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಭಾಗವಹಿಸಿದ್ದರು. ವಿವಿಧ ಗೋಷ್ಠಿಗಳು ನಡೆದವು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಸ್ವಾಗತಿಸಿದರು. ಪ್ರಕೋಷ್ಠದ ರಾಜ್ಯ ಸಂಯೋಜಕ ಎಂ.ಬಿ. ಭಾನುಪ್ರಕಾಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಯೋಜಕ ಡಾ. ಎ.ಎಚ್‌. ಶಿವಯೋಗಿ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು