ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಸಂವಿಧಾನ

‘ಹೆಜ್ಜೆ ಗುರುತುಗಳು’ ಆತ್ಮಕಥನ ಬಿಡುಗಡೆ
Last Updated 2 ಫೆಬ್ರುವರಿ 2020, 13:29 IST
ಅಕ್ಷರ ಗಾತ್ರ

ದಾವಣಗೆರೆ: ಸಂವಿಧಾನ ಮತ್ತು ಮನುಸ್ಮೃತಿ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಸಂವಿಧಾನವು ಅಸ್ತಿತ್ ವಕಳೆದುಕೊಳ್ಳುವ ಭೀತಿಯಲ್ಲಿದೆ ಎಂದು ಬಂಡಾಯ ಸಾಹಿತಿ ರಂಜಾನ್‌ ದರ್ಗಾ ಕಳವವಳ ವ್ಯಕ್ತಪಡಿಸಿದರು.

ಇಮ್ತಿಯಾಜ್ ಹುಸೇನ್ ಅವರ ‘ಹೆಜ್ಜೆ ಗುರುತುಗಳು’ ಆತ್ಮ ಕಥನವನ್ನು ಭಾನುವಾರ ನಗರದ ರೋಟರಿ ಬಾಲಭವನದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅಂಬೇಡ್ಕರ್‌ ಅವರ ಕೃಪೆಯಿಂದಾಗಿ ದೇಶದಲ್ಲಿ ಸುಮಾರು 70 ದಲಿತ ಸಂಸದರಿದ್ದಾರೆ. ಅದರಲ್ಲಿ ಹೆಚ್ಚಿನವರು ಗೋಡ್ಸೆ ಪಕ್ಷದಲ್ಲಿದ್ದಾರೆ. ಸಂವಿಧಾನದ ಸ್ಥಿತಿಯ ಬಗ್ಗೆ ಈ ಸಂಸದರು ಆಲೋಚಿಸಬೇಕಿದೆ. ದಲಿತ- ಮುಸ್ಲಿಮರು ಒಂದಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಲಿದೆ ಎಂದು ಎಚ್ಚರಿಸಿದರು.

‘ಇವ ನಮ್ಮವ ಎಂಬ ಎಲ್ಲರನ್ನು ಒಳಗೊಳ್ಳುವ ಶಿಕ್ಷಣದ ಬದಲು ಇವನಾರವ ಎನ್ನುವ ಗೋಡ್ಸೆ ಶಿಕ್ಷಣ, ಕೋಮುವಾದಿ ಶಿಕ್ಷಣ ಮುನ್ನೆಲೆಗೆ ಬರುತ್ತಿದೆ. ನಾವು ಎಲ್ಲರೂ ಭಾರತೀಯರು. ಇಲ್ಲಿನ ಮೂಲ ನಿವಾಸಿಗಳು ಎಂಬುದನ್ನು ಮರೆಯಬಾರದು. ಮಂಗೋಲಿಯನ್‌, ಕಕೇಶಿಯನ್‌, ಮತ್ತು ನೀಗ್ರೋ ಇವು ಮೂರೇ ವಂಶವಾಹಿಗಳು ಜಗತ್ತಿನಲ್ಲಿ ಇರುವುದು. ನಾವೆಲ್ಲ ನೀಗ್ರೋ ವಂಶವಾಹಿಗಳು. ಹೊಸಧರ್ಮ ಸೇರಿದ ಕೂಡಲೇ ನಮ್ಮ ಡಿಎನ್‌ಎ ಬದಲಾಗುವುದಿಲ್ಲ’ ಎಂದು ವಿಶ್ಲೇಷಿಸಿದರು.

‘ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ. ಸಂವಿಧಾನ ರಕ್ಷಿಸಿ ಎಂದು ಹೋರಾಟ ಮಾಡುವುದು ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು. ದಲಿತರು, ಮುಸ್ಲಿಮರು ಸೇರಿದಂತೆ ಎಲ್ಲರೂ ತಿರಂಗ ಹಿಡಿದು ಸಂವಿಧಾನದ ಉಳಿವಿಗಾಗಿ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.

ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ದಾದಾಪೀರ್‌ ನವಿಲೇಹಾಳ್‌ ಮಾತನಾಡಿ, ‘ನನ್ನ ಬರೆಯುವ ಕಾಲ ಮುಗಿಯಿತು ಎಂದು ಹಿರಿಯ ಲೇಖಕರೊಬ್ಬರು ಹೇಳಿದ್ದಾರೆ. ಇದೇ ಹೊತ್ತಿಗೆ ಇಮ್ತಿಯಾಜ್‌ ಹುಸೇನ್‌ ಅವರು ನಾನು ಬರೆಯಲು ಪ್ರಾರಂಭಿಸಿದ್ದೇನೆ ಎಂದು ಹೇಳಿದ್ದಾರೆ. ಕನ್ನಡದ ಮಟ್ಟಿಗೆ ಇದೆರಡೂ ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.

‘ಇಮ್ತಿಯಾಜ್‌ ಹಿಂದೊಮ್ಮೆ ಬರೆದ ಲೇಖನ ಮೂಲಭೂತವಾದಿ ಮುಸ್ಲಿಮರನ್ನು ಕೆರಳಿಸಿತ್ತು. ಅವರಿಗೆ ಹಲ್ಲೆ ಮಾಡಲು ಮುಂದಾಗಿದ್ದರು. ಇಮ್ತಿಯಾಜ್‌ ಮನೆ ಮುಂದೆ ವಾರಗಟ್ಟಲೆ ಪೊಲೀಸ್‌ ವ್ಯಾನ್‌ ನಿಲ್ಲುವಂತಾಗಿತ್ತು. ಹೇಳುವ ವಿಚಾರಗಳೇ ಜೀವ ತೆಗೆಯಲು ಬರುತ್ತವೆ ಅಂದರೆ ಯಾಕಾದರೂ ವಿಚಾರ ಮಾಡಬೇಕು ಎಂದು ಅವರು ಬರೆದುಕೊಂಡಿದ್ದಾರೆ. ವಿಚಾರವಂತರು ಚುನಾವಣೆಗೆ ನಿಲ್ಲುವುದುನ್ನು ನಮ್ಮ ಸಮಾಜ ಎಂದಿಗೂ ಒಪ್ಪಿಕೊಂಡಿಲ್ಲ. ಹಾಗಾಗಿ ಇಮ್ತಿಯಾಜ್‌ ಕೂಡ ಚುನಾವಣೆಗೆ ನಿಂತು ಸೋತಿದ್ದರು. ಇವೆಲ್ಲ ಕೃತಿಯಲ್ಲಿವೆ’ ಎಂದು ವಿಶ್ಲೇಷಿಸಿದರು.

‘ಸಂವಿಧಾನಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಮುಸ್ಲಿಮರು ಇದ್ದರು. ಹಾಗಾಗಿ ಸಂವಿಧಾನದ ಪ್ರತಿಯನ್ನು ಸುಟ್ಟರೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಯಾವಾಗ ಸಿಎಎ ಜಾರಿಗೆ ತಂದಿದ್ದರಿಂದ ತಮ್ಮ ಬುಡಕ್ಕೆ ಬಂತೋ ಆಗ ಎಚ್ಚರಕೊಂಡರು. ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.ಈ ದೇಶದಲ್ಲಿ ಸಂವಿಧಾನ ಅಪ್ರಸ್ತುತಗೊಂಡ ದಿನ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಬಾಣಲೆಯಿಂದ ಬೆಂಕಿಗೆ ಬೀಳಲಿದ್ದಾರೆ’ ಎಂದು ದಾದಾಪೀರ್‌ ನವಿಲೇಹಾಳ್‌ ಎಚ್ಚರಿಸಿದರು.

ಹಿರಿಯ ಪತ್ರಕರ್ತ ಸನತ್‌ಕುಮಾರ ಬೆಳಗಲಿ, ‘ನಮ್ಮ ಅಭಿಪ್ರಾಯಗಳನ್ನು, ಚಿಂತನೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಿಲ್ಲದ ಅಘೋಷಿತ ತುರ್ತು ಪರಿಸ್ಥಿತಿಯ ಕಾಲದಲ್ಲಿ ಇದ್ದೇವೆ. ಬಾಬಾಸಾಹೇಬರ ಸಂವಿಧಾನ ನಾಶ ಮಾಡಿ ಮನುಸ್ಮೃತಿ ತಂದು ಕೂರಿಸುವ ಕುತಂತ್ರ ನಡೆಯುತ್ತಿದೆ. ಅದರ ಭಾಗವಾಗಿಯೇ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಜಾರಿಗೆ ತರಲಾಗಿದೆ’ ಎಂದರು.

ಸಾಹಿತಿ ಪ್ರೊ. ಸಿ.ಕೆ. ಮಹೇಶ್‌ ಅಧ್ಯಕ್ಷತೆ ವಹಿಸಿದ್ದರು. ಕವಿ ಚಂದ್ರಶೇಖರ್‌ ತಾಳ್ಯ, ಹಿರೇಹಳ್ಳಿ ಮಲ್ಲಿಕಾರ್ಜುನ್‌ ಇದ್ದರು. ವೈದ್ಯ ಡಾ. ಘನಿಸಾಬ್‌, ಕಾರ್ಮಿಕ ನಾಯಕ ಎಚ್‌.ಕೆ. ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಖಲಂದರ್‌ ಪಾಷಾ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಡಕೋಳ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT