ಸೋಮವಾರ, ಜನವರಿ 24, 2022
20 °C
‘ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ಅಭಿಮತ

ಭಾರತದ ಸಂವಿಧಾನಕ್ಕಿದೆ ಮಾನವೀಯತೆ, ಜೀವಂತಿಕೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಬೇರೆ ದೇಶಗಳ ಸಂವಿಧಾನವು ಕಾನೂನು, ಕರ್ತವ್ಯಗಳ ಬಗ್ಗೆ ಮಾತ್ರ ಹೇಳುತ್ತವೆ. ಭಾರತದ ಸಂವಿಧಾನವು ಮಾನವೀಯ ಗುಣಗಳಿರುವ ಜೀವಂತಿಕೆಯುಳ್ಳ ಶ್ರೇಷ್ಠ ಸಂವಿಧಾನವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ‘ಸಂವಿಧಾನದ ಪ್ರಸ್ತಾವನೆ’ ವಾಚಿಸಿದ ಬಳಿಕ ಅವರು ಮಾತನಾಡಿದರು.

‘ಕೆಲವು ದೇಶಗಳಲ್ಲಿ ಸಂವಿಧಾನವನ್ನು ಬರೆದು ಕೈಬಿಟ್ಟಿದ್ದಾರೆ. ಭಾರತದ ಸಂವಿಧಾನವು ಜೀವಂತಿಕೆ ಉಳಿಸಿಕೊಂಡಿದೆ. ಸ್ವಾತಂತ್ರ್ಯ ಬಂದ ಬಳಿಕ ತಂತ್ರಜ್ಞಾನ, ಶಿಕ್ಷಣ, ಆಡಳಿತ ಕ್ಷೇತ್ರಗಳಲ್ಲಿ ಹಲವು ಬದಲಾವಣೆಯಾಗಿವೆ. ನಮ್ಮ ಆಡಳಿತ, ಹಕ್ಕಿನ ಮೇಲೂ ಇದರ ಪರಿಣಾಮ ಆಗುತ್ತಿದೆ. ಇಂಥ ಸಂದರ್ಭಗಳಲ್ಲಿ ಬದುಕಿನ ಬದಲಾವಣೆಗೆ ಅನುಗುಣವಾಗಿ ಸ್ಪಂದಿಸಲು ನಮಗೆ ಬೇಕಾದ ತಿದ್ದುಪಡಿಗಳನ್ನು ಮಾಡಲು ಅವಕಾಶ ಮಾಡಿಕೊಡುವ ಮೂಲಕ ಸಂವಿಧಾನಕ್ಕೆ ಜೀವಂತಿಕೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ವಿಶ್ಲೇಷಿಸಿದರು.

‘ಬ್ರಿಟಿಷರಿಂದ ಸ್ಫೂರ್ತಿ ಪಡೆದು ಭಾರತದ ಸಂವಿಧಾನ ರಚಿಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಇಂಗ್ಲೆಂಡ್‌ನ ಕಾನೂನಿಗಿಂತ ನಮ್ಮ ಕಾನೂನುಗಳೇ ಅತ್ಯಂತ ಶ್ರೇಷ್ಠವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಸ್ವಾತಂತ್ರ್ಯದ ಜೊತೆಗೆ ಸಮಾನತೆ ಮತ್ತು ಭ್ರಾತೃತ್ವ ಮತ್ತು ಎಲ್ಲಾ ಧರ್ಮಿಯರಿಗೆ ಗೌರವ ನೀಡುವ ವಿಚಾರಗಳಿರುವ ಪ್ರಸ್ತಾವನೆ ಒಳಗೊಂಡಿರುವ ನಮ್ಮ ಸಂವಿಧಾನ ಅಂತ್ಯಂತ ಶ್ರೇಷ್ಠವಾಗಿದೆ’ ಎಂದರು.

‘ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳೇನು ಎಂಬುದನ್ನು ನೆನಪಿಟ್ಟುಕೊಳ್ಳುವುದೂ ಮುಖ್ಯ. ಯಾವ ದೇಶದಲ್ಲಿ ನಾಗರಿಕರು ಕರ್ತವ್ಯವನ್ನು ಸರಿಯಾಗಿ ಪಾಲಿಸುತ್ತಾರೋ ಆ ದೇಶ ಬಲಿಷ್ಠವಾಗಿರುತ್ತದೆ. ನಾಗರಿಕರು ಕರ್ತವ್ಯಗಳನ್ನು ಮರೆತಾಗ ಅರಾಜಕತೆ ಬರುತ್ತದೆ; ಪ್ರಜಾಪ್ರಭುತ್ವ ಉಳಿಯುವುದಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರಜೆಗಳು ಜಾಗ್ರತರಾಗಿರಬೇಕು. ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

‘ಸಂವಿಧಾನ ರಚಿಸಿದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ದೊಡ್ಡ ಮಾನವತಾವಾದಿ. ಬುದ್ಧ, ಬಸವ ಹಾಗೂ ಇತರ ತತ್ವಜ್ಞಾನಿಗಳ ಪ್ರಭಾವ ಅವರ ಮೇಲಾಗಿದ್ದು, ಸಂವಿಧಾನದಲ್ಲೂ ಈ ದಾರ್ಶನಿಕರ ವಿಚಾರಧಾರೆಗಳನ್ನು ಕಾಣಬಹುದಾಗಿದೆ. ಅಂಬೇಡ್ಕರ್‌ ಆಧುನಿಕ ಭಾರತದ ಪಿತಾಮಹ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಬಂದರೂ ನಮ್ಮ ದೇಶದಲ್ಲಿ ಇನ್ನೂ ಅಂತಃಕರಣ ಉಳಿದಿದೆ. ಅಂತಃಕರಣ ಇಂದು ಉಳಿದಿರುವುದು ಸಂವಿಧಾನದ ಬಲದಿಂದಲೇ’ ಎಂದು ಹೇಳಿದರು. 

‘ಧ್ವನಿ ಇಲ್ಲದ ಅತ್ಯಂತ ಕಟ್ಟಕಡೆಯ ಮನುಷ್ಯ, ಶೋಷಿತವರ್ಗದವರು ಕೂಡ ಧ್ವನಿ ಎತ್ತಿ ತಮ್ಮ ಹಕ್ಕನ್ನು ಪ್ರತಿಪಾದಿಸುವ ಅವಕಾಶವನ್ನು ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಮಾಡಿಕೊಟ್ಟಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲೂ ಆಧುನಿಕ ಭಾರತದಲ್ಲಿ ಮಾನವೀಯ ಗುಣಗಳು ಕಡಿಮೆಯಾಗಬಾರದು ಎಂಬ ಅಂಶವನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಮಾನವೀಯ ಗುಣ ಇಲ್ಲದಿದ್ದರೆ ಯಾವ ಕಾನೂನು ಇದ್ದರೇನು ಬಂತು? ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಲು ಅಂತಃಕರಣ ಮತ್ತು ತ್ಯಾಗ ಕಾರಣವಾಗಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ದಿನವನ್ನು ಆಚರಿಸಲು ಆರಂಭಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಸಂವಿಧಾನವನ್ನು ಪಾಲಿಸಬೇಕು. ಸಂವಿಧಾನದ ಮೂಲಕ ಬದುಕಿನ, ನಾಡಿನ ಅಭಿವೃದ್ಧಿ ಕಂಡುಕೊಳ್ಳಬೇಕು. ದೇಶದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು’ ಎಂದು ಮುಖ್ಯಮಂತ್ರಿ ಆಶಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎಸ್‌.ವಿ. ರಾಮಚಂದ್ರ, ಮಾಡಾಳ್‌ ವಿರೂಪಾಕ್ಷಪ್ಪ, ಪ್ರೊ. ಎನ್‌. ಲಿಂಗಣ್ಣ, ನಾರಾಯಣಸ್ವಾಮಿ, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್‌, ಮೇಯರ್‌ ಎಸ್‌.ಟಿ. ವೀರೇಶ್‌, ಐಜಿಪಿ ರವಿ ಎಸ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್‌ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು