ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಪು ವಾತಾವರಣ: ದಾವಣಗೆರೆ ಜಿಲ್ಲೆಯಾದ್ಯಂತ ಜ್ವರದ ಬಾಧೆ

ನೀರು, ಆಹಾರ, ಬಟ್ಟೆ ಎಲ್ಲವೂ ಬೆಚ್ಚಗಿದ್ದರೆ ವೈರಾಣು ಕಾಟ ದೂರ
Last Updated 18 ಆಗಸ್ಟ್ 2022, 5:40 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಮಳೆ ಹಾಗೂ ಶೀತ ವಾತಾವರಣ ಮುಂದುವರಿದಿದ್ದು, ಕಳೆದ ಒಂದೂವರೆ ತಿಂಗಳಿಂದ ಜನರಲ್ಲಿ ಜ್ವರದ ಬಾಧೆ ತೀವ್ರವಾಗಿದೆ.

ಆಗಸ್ಟ್‌ 1ರಿಂದ 15ರವರೆಗೆ 14 ಜನ ಡೆಂಗಿಯಿಂದ ಬಳಲಿದ್ದು, ಒಬ್ಬರಲ್ಲಿ ಟೈಪಾಯ್ಡ್‌ ಕಾಣಿಸಿಕೊಂಡಿದೆ. 294 ಮಂದಿಗೆ ಕೊರೊನಾ ಸೋಂಕಿನಿಂದ ಜ್ವರ ಬಂದಿದೆ. ಇದನ್ನು ಹೊರತುಪಡಿಸಿ 20,000ಕ್ಕೂ ಅಧಿಕ ಜನರನ್ನು ಸಾಮಾನ್ಯ ಜ್ವರ ಬಾಧಿಸಿದೆ.

‘ಮಳೆಗಾಲದಲ್ಲಿ ವಾತಾವರಣ ತಂಪಾಗುತ್ತದೆ. ಹಾಗಾಗಿ ಜೂನ್‌ನಿಂದ ಜ್ವರ ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜೂನ್‌ನಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಸುರಿದಿದ್ದರಿಂದ ಅ‌ಷ್ಟಾಗಿ ಜ್ವರ ಕಾಣಿಸಿಕೊಂಡಿರಲಿಲ್ಲ. ಜುಲೈ, ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸೊಳ್ಳೆಗಳು ಹರಡುವ ಜ್ವರವಲ್ಲದೇ, ವೈರಾಣುವಿನಿಂದಲೂ ಇದೇ ಕಾಲದಲ್ಲಿ ಜ್ವರ ಹರಡುತ್ತದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ ತಿಳಿಸಿದರು.

ಮನೆಯನ್ನು ಬೆಚ್ಚಗೆ ಇಟ್ಟುಕೊಳ್ಳುವುದರ ಜತೆಗೆ ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಂತರೆ ಅದರಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ. ಚಿಕೂನ್‌ಗುನ್ಯ, ಡೆಂಗಿ ಸಹಿತ ವಿವಿಧ ಸಾಂಕ್ರಾಮಿಕ ಜ್ವರ ಬರುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.

ಋತುಮಾನ ಆಧಾರಿತ ಜ್ವರ ಎಂದು ಈಗ ಕಾಣಿಸಿಕೊಂಡ ಜ್ವರವನ್ನು ಕರೆಯಲಾಗುತ್ತಿದೆ.ವಾತಾವರಣದಲ್ಲಿ ಏರುಪೇರು ಉಂಟಾದಾಗ ಶೀತ, ಜ್ವರ, ಕೆಮ್ಮು, ನೆಗಡಿ ಶುರುವಾಗುತ್ತದೆ. ಮಕ್ಕಳು ಮತ್ತು ವೃದ್ಧರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. ಅವರನ್ನು ತಂಪು ವಾತಾವರಣದಿಂದ ದೂರ ಇಡಲು ಕಾಳಜಿ ವಹಿಸಬೇಕು. ಬೆಚ್ಚಗಿನ ನೀರು ಕುಡಿಯಬೇಕು. ಆಹಾರವನ್ನು ಫ್ರಿಜ್‌ನಲ್ಲಿ ಇಡಬಾರದು. ಬೆಚ್ಚಗಿನ ಆಹಾರವನ್ನೇ ಸೇವಿಸಬೇಕು. ಉಡುಪು ಬೆಚ್ಚಗಿರಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ವಿವರಿಸಿದರು.

ಧಾರವಾಡ, ಬೆಳಗಾವಿ, ಬಳ್ಳಾರಿ, ದಕ್ಷಿಣ ಕನ್ನಡ ಸಹಿತ ಜ್ವರ ಹೆಚ್ಚಿರುವ ಜಿಲ್ಲೆಗಳಿಗೆ ಹೋಗಿ ಬಂದವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈರಾಣು ಜ್ವರ ಇರಲಿ, ಕೀಟಜನ್ಯ ಜ್ವರ ಇರಲಿ ಅದು ಹರಡದಂತೆ ಕ್ರಮ ವಹಿಸಲು ಈ ಪರೀಕ್ಷೆ ಉಪಯೋಗವಾಗುತ್ತದೆ ಎಂದು ಸಲಹೆ ನೀಡಿದರು.

‘ಸೊಳ್ಳೆಗಳಿಂದ ಹರಡುವ ರೋಗ ನಮ್ಮಲ್ಲಿ ಉಲ್ಬಣಗೊಂಡಿಲ್ಲ. ನಿಯಂತ್ರಣದಲ್ಲಿದೆ. ವಾತಾವರಣದ ಕಾರಣಕ್ಕೆ ವೈರಾಣು ಜ್ವರ ಹೆಚ್ಚಿದೆ’ ಎಂದು ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ. ನಟರಾಜ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT