ಬುಧವಾರ, ನವೆಂಬರ್ 25, 2020
22 °C
ಮಾರಾಟವಾಗದ ಸಿದ್ಧ ಉತ್ಪನ್ನ; ಬಾರದ ಹೊಸ ಆರ್ಡರ್‌...

ದಾವಣಗೆರೆ: ಕೈಗಾರಿಕೆಗಳಿಗೆ ಕವಿದಿದೆ ಕೋವಿಡ್‌ ಕಾರ್ಮೋಡ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸರ್ಕಾರದ ಆರ್ಥಿಕ ನೀತಿಗಳಿಂದ ನಲುಗಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಇನ್ನೇನು ಚೇತರಿಸಿಕೊಳ್ಳುತ್ತಿವೆ ಎನ್ನುವಾಗ ಸಿಡಿಲಿನಂತೆ ಅಪ್ಪಳಿಸಿದ ‘ಕೋವಿಡ್‌ ಸಂಕಷ್ಟ’ ಇವುಗಳನ್ನು ಮತ್ತೆ ಪ್ರಪಾತಕ್ಕೆ ನೂಕಿದೆ.

ಆರ್ಥಿಕ ಹಿಂಜರಿಕೆಯ ಪರಿಣಾಮ ಜಿಲ್ಲೆಯಲ್ಲಿ ಕೆಲ ಕೈಗಾರಿಕೆಗಳು ಇನ್ನೂ ಬಾಗಿಲು ತೆರೆದಿಲ್ಲ. ಮತ್ತೆ ಕೆಲವು ಮುಚ್ಚುವ ಸ್ಥಿತಿಯತ್ತ ಸಾಗುತ್ತಿವೆ. ಕೆಲವೇ ಕೆಲವು ಕೈಗಾರಿಕೆಗಳು ಮಾತ್ರ ಗತವೈಭವದತ್ತ ಅಂಬೆಗಾಲು ಇಡುತ್ತಿವೆ.

ನಿರೀಕ್ಷಿತ ಪ್ರಮಾಣದಲ್ಲಿ ಹೊಸದಾಗಿ ಆರ್ಡರ್‌ ಬರುತ್ತಿಲ್ಲ. ಈಗಾಗಲೇ ಉತ್ಪಾದಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲೂ ಆಗದ ಸ್ಥಿತಿ ಎದುರಾಗಿದೆ. ಇದರಿಂದಾಗಿ ಸಾಲದ ಕಂತು ಕಟ್ಟಲು, ನೌಕರರ ಸಂಬಳಕ್ಕೆ ಹಣ ಹೊಂದಿಸಲು ಉದ್ಯಮಿಗಳು ಹೆಣಗಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಗಾರ್ಮೆಂಟ್ಸ್‌, ಎಂಜಿನಿಯರಿಂಗ್‌, ರೈಸ್‌ ಮಿಲ್‌, ಫೌಂಡರಿ, ಆಹಾರ ಸಂಸ್ಕರಣಾ ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳ ಪೈಕಿ ಕೃಷಿ ಆಧಾರಿತ ಕೈಗಾರಿಕೆಗಳು, ಎಂಜಿನಿಯರಿಂಗ್‌ ವರ್ಕ್‌ಶಾಪ್‌ಗಳು ಈಗ ತುಸು ಚೇತರಿಸಿಕೊಂಡಿವೆ.

ಕೋವಿಡ್‌ ಸಂಕಷ್ಟದಿಂದಾಗಿ ದೇಶದ ಪ್ರತಿಷ್ಠಿತ ಕಂಪನಿಯೊಂದು ತನ್ನ ಬ್ರ್ಯಾಂಡ್‌ನಲ್ಲಿ ಸಿದ್ಧ ಉಡುಪು ತಯಾರಿಸಿಕೊಡುವಂತೆ ಲಾಕ್‌ಡೌನ್‌ ಪೂರ್ವದಲ್ಲಿ ನಗರದ ಗಾರ್ಮೆಂಟ್‌ಗೆ ನೀಡಿದ್ದ ಆರ್ಡರ್‌ ಕ್ಯಾನ್ಸಲ್‌ ಮಾಡಿದೆ. ಆ ಕಂಪನಿಯ ಬ್ರ್ಯಾಂಡ್‌ನಲ್ಲಿ ತಯಾರಿಸಿದ್ದ ಉಡುಪನ್ನು ಬೇರೆ ಕಡೆ ಮಾರಾಟ ಮಾಡಲಾಗದ ಸ್ಥಿತಿ ಆ ಗಾರ್ಮೆಂಟ್ಸ್‌ನದ್ದಾಗಿದೆ. ಇನ್ನೂ ಕೆಲ ಕೈಗಾರಿಕೆಗಳದ್ದೂ ಇದೇ ಸ್ಥಿತಿಯಾಗಿದೆ.

ನಗರದ ಕರೂರು ಹಾಗೂ ಲೋಕಿಕೆರೆ ರಸ್ತೆಯಲ್ಲಿನ ಕೈಗಾರಿಕೆ ಪ್ರದೇಶಗಳಲ್ಲಿನ ಉದ್ಯಮಿಗಳಲ್ಲಿ ಈಗ ಮೊದಲಿನಂತೆ ಉತ್ಸಾಹ ಕಂಡುಬರುತ್ತಿಲ್ಲ. ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿರುವ ಕೈಗಾರಿಕೆ ಪ್ರದೇಶಗಳಲ್ಲೂ ಜೀವಕಳೆ ಇನ್ನಷ್ಟೇ ಬರಬೇಕಿದೆ.

ಶೇ 50ರಷ್ಟು ಉತ್ಪಾದನೆ: ‘ಜಿಲ್ಲೆಯಲ್ಲಿ 8,000ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳಿವೆ. ಈಗ ಶೇ 25ರಷ್ಟು ಸಣ್ಣ ಕೈಗಾರಿಕೆಗಳು ಮಾತ್ರ ತಮ್ಮ ಸಾಮರ್ಥ್ಯದ ಶೇ 50ರಷ್ಟನ್ನು ಉತ್ಪಾದಿಸಲು ಆರಂಭಿಸಿವೆ. ಶೇ 100ರಷ್ಟು ಉತ್ಪಾದನೆ ಮಾಡಲು ಇನ್ನೂ ಒಂದು ವರ್ಷ ಬೇಕಾಗಬಹುದು. ನಷ್ಟ ಅನುಭವಿಸಿದ್ದರಿಂದ ಈಗಾಗಲೇ ಹಲವು ಸಣ್ಣ ಕೈಗಾರಿಕೆಗಳು ಮುಚ್ಚಿವೆ. ವಹಿವಾಟು ನಡೆಸಲಾಗದೇ ಮುಂಬರುವ ದಿನಗಳಲ್ಲಿ ಶೇ 25ರಷ್ಟು ಸಣ್ಣ ಕೈಗಾರಿಕೆಗಳು ಶಾಶ್ವತವಾಗಿ ಮುಚ್ಚುವ ಸಾಧ್ಯತೆಗಳಿವೆ. ಕೆಲವರು ಉದ್ಯಮ ಕೈಬಿಟ್ಟು ಪರ್ಯಾಯ ದುಡಿಮೆಯ ಸಾಧ್ಯತೆಯನ್ನು ಹುಡುಕುತ್ತಿದ್ದಾರೆ’ ಎಂದು ದಾವಣಗೆರೆ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಬಸವನಾಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬಡ್ಡಿ ಮನ್ನಾ ಮಾಡಲಿ: ‘ಲಾಕ್‌ಡೌನ್‌ ಅವಧಿಯಲ್ಲಿ ಉತ್ಪಾದನೆ ಸ್ಥಗಿತಗೊಂಡಿತ್ತು. ಬಂದಿದ್ದ ಆರ್ಡರ್‌ಗಳೂ ರದ್ದಾಗಿದ್ದವು. ಬ್ಯಾಂಕ್‌ನಲ್ಲಿ ಚಾಲ್ತಿಯಲ್ಲಿದ್ದ ಸಾಲದ ಆಧಾರದಲ್ಲಿ ಶೇ 20ರಷ್ಟು ಹೆಚ್ಚುವರಿ ಸಾಲವನ್ನು ಶೇ 7.5ರ ಬಡ್ಡಿದರದಲ್ಲಿ ಕೊಡಿಸಲು ಸರ್ಕಾರ ವ್ಯವಸ್ಥೆ ಮಾಡಿತ್ತು. ನಗದು ಹಣ ಕೈಗೆ ಸಿಕ್ಕಿದ್ದರಿಂದ ಕಚ್ಚಾ ವಸ್ತು ಖರೀದಿಸಲು, ವಿದ್ಯುತ್‌ ಶುಲ್ಕ ಪಾವತಿಸಲು ಹಾಗೂ ಸಿಬ್ಬಂದಿಗೆ ವೇತನ ನೀಡಲು ಅನುಕೂಲವಾಯಿತು’ ಎಂದು ಅವರು ಹೇಳಿದರು.

‘ಇಎಂಐ ಪಾವತಿಸದಿರಲು ಆಗಸ್ಟ್‌ವರೆಗೆ ವಿನಾಯಿತಿ ನೀಡಲಾಗಿತ್ತು. ಈಗ ಸಾಲದ ಕಂತು ಹಾಗೂ ಬಡ್ಡಿಯನ್ನು ಕಟ್ಟಬೇಕಾಗಿದೆ. ಈಗಲೂ ನಿರೀಕ್ಷಿತ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಲಾಕ್‌ಡೌನ್‌ ಹೇರಿದ್ದ ಮೂರು ತಿಂಗಳ ಅವಧಿಯ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದರೆ ಕೈಗಾರಿಕೆಗಳು ಬದುಕುಳಿಯಲು ಅನುಕೂಲವಾಗಲಿದೆ’ ಎಂದು ಬಸವನಾಳ ಅಭಿಪ್ರಾಯಪಟ್ಟರು.

ಜನವರಿ ಬಳಿಕ ಚೇತರಿಕೆ: ಡಿಸೆಂಬರ್‌ ವೇಳೆಗೆ ಮುಂಗಾರು ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬರಲಿವೆ. ಹೀಗಾಗಿ ಜನವರಿಯಿಂದ ಆರ್ಥಿಕತೆ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಕೃಷಿ ಆಧಾರಿತ ಕೈಗಾರಿಕೆಗಳು ಆ ವೇಳೆಗೆ ಸಹಜ ಸ್ಥಿತಿಯತ್ತ ಮರಳುವ ಸಾಧ್ಯತೆ ಇದೆ ಎಂಬುದು ಕಾಸಿಯಾ ಸದಸ್ಯರೂ ಆಗಿರುವ ಬಾಪೂಜಿ ಎಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಅವರ ಅಭಿಪ್ರಾಯ.

‘ಪ್ರತಿ ವರ್ಷ ಮಾರ್ಚ್‌ನಿಂದ ಮಲ್ಟಿ ಕ್ರಾಪ್‌ ಕ್ರಷರ್‌ ಯಂತ್ರಗಳನ್ನು ತಯಾರಿಸಿಕೊಳ್ಳುತ್ತಿದ್ದೆವು. ಈ ಬಾರಿ ಲಾಕ್‌ಡೌನ್‌ ಇದ್ದುದರಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಸೀಸನ್‌ ಆರಂಭವಾದರೂ ನಮ್ಮ ಬಳಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇಲ್ಲ. ಹೀಗಾಗಿ ಈ ಬಾರಿ ಹೆಚ್ಚಿನ ಆದಾಯ ಬರುವುದಿಲ್ಲ’ ಎಂದು ಕರೂರಿನ ಜ್ಯೋತಿ ಎಂಜಿನಿಯರಿಂಗ್‌ ವರ್ಕ್ಸ್‌ನ ಇಮ್ರಾನ್‌ ಬೇಸರ ವ್ಯಕ್ತಪಡಿಸಿದರು.

‘ಸಣ್ಣ ಕೈಗಾರಿಕೆಗಳು ಕಚ್ಚಾವಸ್ತು, ಕಾರ್ಮಿಕರ ಸಮಸ್ಯೆಗಳನ್ನು ಎದುರಿಸುತ್ತಿವೆ. ನಿರೀಕ್ಷಿತ ಪ್ರಮಾಣದಲ್ಲಿ ಆರ್ಡರ್‌ಗಳು ಬರುತ್ತಿಲ್ಲ. ಶೇ 50ರಿಂದ 70ರಷ್ಟು ಮಾತ್ರ ಉತ್ಪಾದನೆಯಾಗುತ್ತಿವೆ. ಜಿಲ್ಲೆಯ ಅಕ್ಕಿ ಗಿರಣಿಗಳಲ್ಲಿ ಸಿದ್ಧವಾದ ಅಕ್ಕಿಗೂ ಹೆಚ್ಚಿನ ಬೇಡಿಕೆ ಇಲ್ಲ. ಉದ್ಯಮಿಗಳು ಸ್ಥಳೀಯ ಮಾರುಕಟ್ಟೆ ಹುಡುಕಿಕೊಳ್ಳಲು ಯತ್ನಿಸುತ್ತಿದ್ದಾರೆ. ಚೇತರಿಸಿಕೊಳ್ಳಲು ಇನ್ನೂ ಆರು ತಿಂಗಳಾದರೂ ಬೇಕಾಗಬಹುದು’ ಎನ್ನುತ್ತಾರೆ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಬಿ.ಕೆ. ಮಂಜುನಾಥ.

ಕಚ್ಚಾವಸ್ತುಗಳ ಬೆಲೆ ಏರಿಕೆ

‘ಒಂದು ಕೆ.ಜಿ. ಕಬ್ಬಿಣದ ಬೆಲೆ ₹ 7ರಿಂದ ₹ 8 ಹೆಚ್ಚಾಗಿದೆ. ಟ್ರ್ಯಾಕ್ಟರ್‌ ಟೈಲರ್‌ನ ಒಂದು ಜೊತೆ ಟೈರ್‌ಗೆ ₹ 4000 ಹೆಚ್ಚಾಗಿದೆ. ಆಕ್ಸಿಜನ್‌ ಸಿಲಿಂಡರ್‌ ಬೆಲೆಯೂ ₹ 200ರಷ್ಟು ಹೆಚ್ಚಾಗಿದ್ದು, ಆರ್ಡರ್‌ ನೀಡಿದ ಒಂದು ವಾರದ ಬಳಿಕ ಬರುತ್ತಿದೆ. ಬ್ಲ್ಯಾಕ್‌ ಮಾರುಕಟ್ಟೆಯಲ್ಲಿ ಖರೀದಿಸುವಂತಾಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ನಮ್ಮ ಆದಾಯ ಕಡಿಮೆಯಾಗುತ್ತಿದೆ. ರೈತರಿಗೆ ಟ್ರಾಲಿ, ಕಲ್ಟಿವೇಟರ್‌ನಂತಹ ಕೃಷಿ ಉಪಕರಣ ಮಾಡಿಕೊಡಲು ವಿಳಂಬವಾಗುತ್ತಿದೆ’ ಎಂದು ಆವರಗೆರೆಯ ನ್ಯೂ ಓಂಕಾರೇಶ್ವರ ಇಂಡಸ್ಟ್ರೀಸ್‌ನ ಪಂಚಾಕ್ಷರಯ್ಯ ಅಳಲು ತೋಡಿಕೊಂಡರು.

ನೆಲಕಚ್ಚಿದ ತಟ್ಟೆ ಉದ್ಯಮ

‘₹ 12 ಲಕ್ಷ ಬಂಡವಾಳ ಹೂಡಿ ಉದ್ಯಮ ಆರಂಭಿಸಿದ್ದೆವು. ಕೋವಿಡ್‌ ಪೂರ್ವದಲ್ಲಿ ತಿಂಗಳಿಗೆ 15 ಸಾವಿರ ಅಡಿಕೆ ಹಾಳೆ ತಟ್ಟೆಗಳನ್ನು ತಯಾರಿಸುತ್ತಿದ್ದೆವು. ಈಗ ನಮ್ಮ ತಟ್ಟೆಗಳನ್ನು ಕೇಳುವವರೇ ಇಲ್ಲ. ಆರು ತಿಂಗಳಿನಿಂದ ಉತ್ಪಾದನೆ ಸ್ಥಗಿತಗೊಳಿಸಿದ್ದೇವೆ. ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಚನ್ನಗಿರಿ ತಾಲ್ಲೂಕಿನ ಹೊನ್ನೆಬಾಗಿಯ ಮಾರುತಿ ಎಂಟರ್‌ಪ್ರೈಸಸ್‌ನ ಶಿವಲಿಂಗಪ್ಪ ಅಳಲು ತೋಡಿಕೊಂಡರು.

ಹರಿಯಿತು ಜವಳಿ ಉದ್ಯಮದ ದಾರ...

‘ನಮ್ಮ ಗಾರ್ಮೆಂಟ್ಸ್‌ನಲ್ಲಿ ನೂರು ಜನರ ಬದಲು ಕೇವಲ 50 ಜನ ಕೆಲಸ ಮಾಡುತ್ತಿದ್ದಾರೆ. ಹೊಸದಾಗಿ ಆರ್ಡರ್‌ ಬರುತ್ತಿಲ್ಲ. ಶೇ 8ರಷ್ಟು ಮಾರ್ಜಿನ್‌ ಇಟ್ಟುಕೊಂಡು ಶರ್ಟ್‌ ತಯಾರಿಸಿಕೊಡುತ್ತಿದ್ದೆವು. ಈ ಹಿಂದೆ ನೀಡಿರುವ ಆರ್ಡರ್‌ಗೆ ಶೇ 15ರಷ್ಟು ಕಡಿಮೆ ಬೆಲೆಯಲ್ಲಿ ಕೇಳುತ್ತಿದ್ದಾರೆ. ನೌಕರರಿಗೆ ಸಂಬಳ ನೀಡುವುದು ಕಷ್ಟವಾಗುತ್ತಿದೆ. ಈ ಬಾರಿ ಹಬ್ಬಕ್ಕೆ ಬೋನಸ್‌ ಕೊಡಲೂ ಆಗಿಲ್ಲ. ಇದೇ ಸ್ಥಿತಿ ಮುಂದುವರಿದರೆ ಮುರ್ನಾಲ್ಕು ತಿಂಗಳಲ್ಲಿ ಕೆಲ ಗಾರ್ಮೆಂಟ್ಸ್‌ ಮುಚ್ಚುವ ಸ್ಥಿತಿಗೆ ಬರಲಿದೆ’ ಎಂದು ಕರೂರಿನ ಎಸ್‌.ಟಿ.ಬಿ. ಕ್ರಿಯೇಷನ್ಸ್‌ನ ಮಾಲೀಕರಾದ ಶ್ರೀನಿವಾಸ್‌ ನಾಯಕ ಹಾಗೂ ವಿಶ್ವನಾಥ ಎ.ಎಸ್‌. ಅವರು ಜವಳಿ ಉದ್ಯಮದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.

‘ಸರ್ಕಾರದಿಂದ ನಮಗೆ ₹ 50 ಲಕ್ಷ ಸಹಾಯಧನ ಬರಬೇಕಾಗಿದೆ. ಎರಡು ವರ್ಷಗಳಿಂದ ಬಾಕಿ ಇರುವ ಸಹಾಯಧನ ಸಂಕಷ್ಟ ಕಾಲದಲ್ಲಿ ಬಂದಿದ್ದರೆ ಚೇತರಿಸಿಕೊಳ್ಳಲು ಅನುಕೂಲವಾಗುತ್ತಿತ್ತು’ ಎಂದರು.

‘ನೌಕರರ ಪಿಎಫ್‌, ಇಎಸ್‌ಐ ಕಂತು ಕಟ್ಟಲು ಸಾಧ್ಯವಾಗುತ್ತಿಲ್ಲ. ಉದ್ಯಮವನ್ನು ಉಳಿಸಲು ಒಂದು ವರ್ಷದ ಅವಧಿಗಾದರೂ ಕನಿಷ್ಠ ಕೂಲಿ ನಿಯಮವನ್ನು ಸಡಿಲಗೊಳಿಸಬೇಕು’ ಎಂಬುದು ಅವರ ಕೋರಿಕೆ.

ಹೊರೆಯಾದ ವಿದ್ಯುತ್‌ ಕನಿಷ್ಠ ಶುಲ್ಕ

ಎಲ್‌ಟಿ ಹಾಗೂ ಎಚ್‌ಟಿ ಲೈನ್‌ ವಿದ್ಯುತ್‌ ಸಂಪರ್ಕಕ್ಕೆ ಬೆಸ್ಕಾಂ ನಿಗದಿಗೊಳಿಸಿರುವ ಕನಿಷ್ಠ ಶುಲ್ಕ ಕೈಗಾರಿಕೆಗಳಿಗೆ ಹೊರೆಯಾಗಿ ಪರಿಣಮಿಸಿದೆ ಎಂಬುದು ಉದ್ಯಮಿಗಳ ಅಳಲು.

ವಿದ್ಯುತ್‌ ಬಳಸದಿದ್ದರೆ ಕನಿಷ್ಠ ಶುಲ್ಕವನ್ನು ಪಡೆದುಕೊಳ್ಳಲಿ. ಆದರೆ, ಹೆಚ್ಚಿನ ವಿದ್ಯುತ್‌ ಬಳಸಿದ ಬಳಿಕವೂ ಬಿಲ್‌ನಲ್ಲಿ ಕನಿಷ್ಠ ಶುಲ್ಕವನ್ನು ಪಡೆಯುತ್ತಿರುವುದು ಸರಿಯಲ್ಲ. ಎಚ್‌ಟಿ ಲೈನ್‌ ಪಡೆದ ಕೆಲ ಕೈಗಾರಿಕೆಗಳಿಗೆ ತಿಂಗಳಿಗೆ ₹ 20 ಸಾವಿರದವರೆಗೂ ಕನಿಷ್ಠ ಶುಲ್ಕ ಬರುತ್ತಿದೆ. ಕನಿಷ್ಠ ಶುಲ್ಕ ಪದ್ಧತಿಯನ್ನು ಕೈಬಿಡಬೇಕು ಎಂದು ಕಾಸಿಯಾ ಮೂಲಕ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿದೆ ಎಂದು ಉದ್ಯಮಿಗಳು ‘ವಿದ್ಯುದಾಘಾತ’ದಿಂದ ತಮಗೆ ಆಗುತ್ತಿರುವ ನೋವನ್ನು ಹೇಳಿಕೊಂಡಿದ್ದಾರೆ.

ಕೈಗಾರಿಕೆಗಳ ಪುನಶ‍್ಚೇತನಕ್ಕೆ ಬೇಕು ಪೂರಕ ನೀತಿ

ಅಚ್ಚು ಹಾಗೂ ಯಂತ್ರೋಪಕರಣಗಳ ಬಿಡಿಭಾಗದ ತಯಾರಿಕೆ, ಉತ್ಪಾದನೆ ಮತ್ತು ಗುಣಮಟ್ಟಕ್ಕೆ ಖ್ಯಾತಿ ಪಡೆದಿದ್ದ ಹರಿಹರ ನಗರದ ಕೈಗಾರಿಕಾ ವಸಾಹತು ಪ್ರದೇಶ ಇದೀಗ ಸರ್ಕಾರದ ಅವೈಜ್ಞಾನಿಕ ಕೈಗಾರಿಕಾ ನೀತಿ, ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಜೊತೆಗೆ ಕೋವಿಡ್‌ನಿಂದಾಗಿಯೂ ಬಳಲುವಂತಾಗಿದೆ.

200ಕ್ಕೂ ಹೆಚ್ಚು ಸಣ್ಣ ಕೈಗಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಘಟಕಗಳು ಯಂತ್ರೋಪಕರಣಗಳ ಬಿಡಿಭಾಗದ ತಯಾರಿಕೆಯನ್ನೇ ಅವಲಂಬಿಸಿವೆ. ಕೋವಿಡ್‍ನಿಂದಾಗಿ ಕೈಗಾರಿಕಾ ವಲಯ ಸ್ಥಗಿತಗೊಂಡಿದ್ದರಿಂದ ಬೇಡಿಕೆ ಕುಸಿದು ಘಟಕಗಳ ಮಾಲೀಕರು ಆರ್ಥಿಕ ಹಿಂಜರಿತ ಅನುಭವಿಸುವಂತಾಗಿದೆ.

ಬೇಡಿಕೆ ಕುಸಿತ, ಕಾರ್ಮಿಕರ ವೇತನ, ಅನಿಯಮಿತ ವಿದ್ಯುತ್‍ ಪೂರೈಕೆ, ಸಾಲ ವಸೂಲಾತಿ ಬ್ಯಾಂಕ್‍ಗಳ ಒತ್ತಡ, ಹೊಸ ಹೂಡಿಕೆಗಳಿಗೆ ಬಂಡವಾಳದ ಕೊರತೆ, ಸರ್ಕಾರದ ನೀತಿಗಳ ಅಸಮರ್ಪಕ ಅನುಷ್ಠಾನ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕೈಗಾರಿಕಾ ವಲಯದ ಸಂಕಷ್ಟವನ್ನು ಹೆಚ್ಚಿಸಿದ್ದು, ಮಾಲೀಕರನ್ನು ಹೈರಾಣಾಗಿಸಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಚೀನಾ ಉತ್ಪನ್ನ ಬಹಿಷ್ಕರಿಸುವ ನೀತಿಯಿಂದಾಗಿ ಭಾರತದ ಕೈಗಾರಿಕಾ ವಲಯದ ಬೆಳವಣಿಗೆಗೆ ಆಶಾಕಿರಣವಾಗಿದೆ. ಆದರೆ, ಬೇಡಿಕೆ, ಪೂರೈಕೆ, ದರ ಪೈಪೋಟಿ ಮತ್ತು ಹೂಡಿಕೆಗೆ ಸರ್ಕಾರದ ಸ್ಪಷ್ಟ ಕೈಗಾರಿಕಾ ನೀತಿ ಅಗತ್ಯವಿದೆ. ರಫ್ತು ಮಾಡುವ ಮೂಲಕ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ವಲಯಗಳಿಗೆ ನೆರವು ನೀಡಲು ಸರ್ಕಾರ ಚಿಂತನೆ ನಡೆಸಬೇಕು ಎಂಬುದು ಮಧ‍್ಯಮ ಕೈಗಾರಿಕೆ ಮಾಲೀಕ ಎಂ.ಎಸ್‍. ಅರುಣ್‍ ಅಭಿಪ್ರಾಯ.

‘ಸರ್ಕಾರ, ಹರಿಹರ ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಕೈಗಾರಿಕಾ ಘಟಕಗಳ ತಯಾರಿಕೆ ಹಾಗೂ ಆರ್ಥಿಕ ಸ್ಥಿತಿ–ಗತಿಗಳ ಸರ್ವೆ ಮಾಡಿ ಸ್ಥಳೀಯ ಸಮಸ್ಯೆಗಳನ್ನು ಅರಿತು, ಕೈಗಾರಿಕೆಗಳ ಉಳಿವಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಯೋಜನೆ ತಯಾರಿಸಬೇಕು’ ಎಂದು ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಸಿದ್ದನಗೌಡ ಡಿ. ಮುದ್ದೇಗೌಡರ ಮನವಿ ಮಾಡಿದರು.

ಸರ್ಕಾರವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೂರು ತಿಂಗಳ ವಿದ್ಯುತ್‍ ಬಿಲ್‍ ಮನ್ನಾ ಮಾಡುವ ಜತೆಗೆ ಬ್ಯಾಂಕ್‍ ಹಾಗೂ ಕೈಗಾರಿಕೆಗಳ ಮಾಲೀಕರ ಸಭೆ ನಡೆಸಿ, ಕೈಗಾರಿಕೆಗಳ ಪುನಶ್ಚೇತನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘದ ಕಾರ್ಯದರ್ಶಿ ಎನ್‍.ಸಿ. ಹನುಮಂತ ರಾವ್‍ ಒತ್ತಾಯಿಸಿದರು.

ಸರ್ಕಾರ, ಕೈಗಾರಿಕೆಗಳ ಅಭಿವೃದ್ಧಿಗೆ ರಚನೆಗೊಂಡಿರುವ ಕೆಐಎಡಿಬಿ ಹಾಗೂ ಕೆಎಸ್ಎಸ್‍ಐಡಿಸಿ ಸಂಸ್ಥೆಗಳನ್ನು ಸರ್ಕಾರ ಲಾಭದಾಯಕ ಸಂಸ್ಥೆಗಳೆಂದು ಪರಿಗಣಿಸದೆ, ಕೈಗಾರಿಕೆಗಳ ಪುನಶ‍್ಚೇತನಕ್ಕೆ ಅಗತ್ಯ ಆರ್ಥಿಕ ಹಾಗೂ ಮಾರುಕಟ್ಟೆ ನೀತಿ ರೂಪಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳ ಉಳಿವಿಗೆ ಕ್ರಮ ಜರುಗಿಸಬೇಕು ಎಂಬುದು ಉದ್ಯಮಿಗಳ ಕೂಗು.

ಪ್ರತಿಕ್ರಿಯೆಗಳು

ರೈತರು ದೇಶದ ಬೆನ್ನೆಲುಬಾಗಿರುವಂತೆ ಸಣ್ಣ ಕೈಗಾರಿಕೆಗಳೂ ಆರ್ಥಿಕತೆಯ ಪಕ್ಕೆಲುಬುಗಳಾಗಿವೆ. ಸಣ್ಣ ಕೈಗಾರಿಕೆಗಳು ಚೆನ್ನಾಗಿ ನಡೆದಾಗ ಮಾತ್ರ ದೇಶದ ಆರ್ಥಿಕತೆಯೂ ಸದೃಢವಾಗಿರಲು ಸಾಧ್ಯ.

– ಶಂಬುಲಿಂಗಪ್ಪ ಬಸವನಾಳ, ಅಧ್ಯಕ್ಷ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ

 

ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ದೇಶಕ್ಕೆ ಅಗತ್ಯವಿರುವ ಉತ್ಪನ್ನಗಳನ್ನು ನಮ್ಮ ಕೈಗಾರಿಕೆಗಳೇ ತಯಾರಿಸಿದಾಗ ದೇಶದ ಆರ್ಥಿಕತೆ ಇನ್ನಷ್ಟು ಸದೃಢಗೊಳ್ಳಲು ಸಾಧ್ಯ.

– ಪ್ರೊ.ವೈ.ವೃಷಭೇಂದ್ರಪ್ಪ, ಕಾಸಿಯಾ ಸದಸ್ಯ

 

ಇಂದು ಉದ್ಯೋಗದಾತರನ್ನು ಉಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಉದ್ಯೋಗದಾತ ಉಳಿದಾಗ ಉದ್ಯೋಗಿಗಳೂ ಬದುಕುತ್ತಾರೆ. ಉದ್ಯೋಗದಾತರನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿ.

– ಎ.ಎಸ್‌.ವಿಶ್ವನಾಥ, ಸಹ ಮಾಲೀಕ, ಎಸ್‌.ಟಿ.ಬಿ. ಕ್ರಿಯೇಷನ್ಸ್‌

 

ಕೇಂದ್ರ ಸರ್ಕಾರ ಸಣ್ಣ ಹಾಗೂ ಮಧ‍್ಯಮ ಕೈಗಾರಿಕೆಗಳ ಉತ್ತೇಜನಕ್ಕೆ ರೂಪಿಸಿರುವ ಯೋಜನೆಯಲ್ಲಿ ಶೇ 5ರಷ್ಟು ಬೃಹತ್‌ ಕೈಗಾರಿಕೆಗಳ ಪಾಲಾಗುತ್ತಿದೆ. ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಕೈಗಾರಿಕಾ ಪ್ರದೇಶಕ್ಕೆ ಬಂದು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಬೇಕು.

– ಸಿದ್ದನಗೌಡ ಡಿ. ಮುದ್ದೇಗೌಡರ, ಅಧ್ಯಕ್ಷ, ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲೀಕರ ಸಂಘ

 

ಕೋವಿಡ್‌ನಿಂದಾಗಿ ಕೈಗಾರಿಕೆಗಳ ವೆಚ್ಚ ಕಡಿತ ನೀತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಅವಸಾನಕ್ಕೆ ಕಾರಣವಾಗುತ್ತಿದೆ. ನೂತನ ಆವಿಷ್ಕಾರ ಹಾಗೂ ವಿಧಾನಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

– ಎನ್‌.ಸಿ.ಹನುಮಂತ ರಾವ್‌, ಕಾರ್ಯದರ್ಶಿ, ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲೀಕರ ಸಂಘ, ಹರಿಹರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು