ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕೋವಿಡ್ ತ್ಯಾಜ್ಯ ವಿಲೇವಾರಿ ಮರೀಚಿಕೆ

Last Updated 7 ಜೂನ್ 2021, 19:30 IST
ಅಕ್ಷರ ಗಾತ್ರ

ದಾವಣಗೆರೆ: ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಇಂದು ದೊಡ್ಡ ಸವಾಲಾಗಿದೆ. ಕೋವಿಡ್‌ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಆದರ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರುಗಳು ಇವೆ.

ಕೋವಿಡ್ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ಕೊಠಡಿ ಇರಬೇಕು. ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದಂತೆ ಅದನ್ನು ಸಂಗ್ರಹಿಸಿ ಎರಡು ಲೇಯರ್ ಇರುವ ಹಳದಿ ಕವರ್‌ಗೆ ಹಾಕಿ ಅದಕ್ಕೆ ಸೋಡಿಯಂ ಹೈಪೊಕ್ಲೋರೈಡ್ ದ್ರಾವಣ ಸಿಂಪಡಿಸಿ ಇಡಬೇಕು. ಆದರೆ ಬಹುತೇಕ ಆಸ್ಪತ್ರೆಗಳಲ್ಲಿ ಈ ಕೆಲಸವನ್ನು ಮಾಡುತ್ತಿಲ್ಲ. ಜಿಲ್ಲೆಯ ಕೋವಿಡ್ ಆಸ್ಪತ್ರೆಯಾದ ಚಿಗಟೇರಿ ಆಸ್ಪತ್ರೆಯಲ್ಲಿ ತ್ಯಾಜ್ಯ ಸಂಗ್ರಹಕ್ಕಾಗಿಯೇ ಪ್ರತ್ಯೇಕ ಕೊಠಡಿ ಇದ್ದರೂ ಕಸ ಮಾತ್ರ ಹೊರಗಡೆಯೇ ಬಿದ್ದಿರುತ್ತದೆ. ಕೆಲವು ಖಾಸಗಿ ಆಸ್ಪತ್ರೆಗಳಂತೂ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಬಿಸಾಡಲಾಗುತ್ತಿದೆ.

ಜಿಲ್ಲೆಯಲ್ಲಿ, ಜಿಲ್ಲಾ ಕೋವಿಡ್ ಆಸ್ಪತ್ರೆ, 12 ಖಾಸಗಿ ಆಸ್ಪತ್ರೆಗಳು, 5 ತಾಲ್ಲೂಕು ಆಸ್ಪತ್ರೆಗಳು, 4 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 26 ಕೋವಿಡ್‌ ಕೇರ್ ಸೆಂಟರ್‌ಗಳು ಇವೆ. ಇಲ್ಲಿ ಉತ್ಪತ್ತಿಯಾಗುವ ಪಿಪಿಇ ಕಿಟ್, ಮಾಸ್ಕ್, ಕೈಗವಸುಗಳನ್ನು ವಿಲೇವಾರಿ ಮಾಡಬೇಕಿದೆ. ಹೋಂ ಐಸೊಲೇಷನ್‌ ಆಗಿರುವ ಮನೆಯಿಂದಲೂ ತ್ಯಾಜ್ಯ ವಿಲೇವಾರಿ ಮಾಡಲು ಸಿದ್ಧತೆ ನಡೆದಿದೆ.

ಜಿಲ್ಲೆಯಲ್ಲಿ 2005ರಿಂದಲೂ ಜೈವಿಕ ವೈದ್ಯಕೀಯ ತ್ಯಾಜ್ಯದ ನಿರ್ವಹಣೆ ಹೊತ್ತಿರುವಸುಶಾಂತ್ ಎನ್ವಿರಾನ್‌ಮೆಂಟಲ್ ಟೆಕ್ನಾಲಜೀಸ್ ಸಂಸ್ಥೆಗೆ ಕೋವಿಡ್ ತ್ಯಾಜ್ಯ ನಿರ್ವಹಣೆಯನ್ನೂ ವಹಿಸಲಾಗಿದೆ.ತ್ಯಾಜ್ಯ ವಿಲೇವಾರಿಗೆ ಈ ಸಂಸ್ಥೆಯು 3 ವಾಹನಗಳು ಹಾಗೂ 16 ಸಿಬ್ಬಂದಿಯನ್ನು ಮೀಸಲಿಟ್ಟಿದೆ.

ಕೋವಿಡ್ ಹಾಗೂ ಇತರೆ ಕಾಯಿಲೆಯಿಂದ ಸೃಷ್ಟಿಯಾದ ತ್ಯಾಜ್ಯದ ಸಂಗ್ರಹ ಹಾಗೂ ವಿಲೇವಾರಿಯನ್ನು ಪ್ರತ್ಯೇಕವಾಗಿ ಮಾಡುವಂತೆ ಮಾರ್ಗಸೂಚಿ ರೂಪಿಸಲಾಗಿದೆ. ಹರಿಹರ ತಾಲ್ಲೂಕಿನ ಅಮರಾವತಿ ಹೊರವಲಯದಲ್ಲಿರುವ ಕಸ ಸಂಸ್ಕರಣ ಘಟಕದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ. ಕೆಲವನ್ನು 1200 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಸುಟ್ಟು ಹಾಕಲಾಗುತ್ತದೆ.

’ಕೋವಿಡ್ ನಿಯಮದಂತೆ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಈ ಬಗ್ಗೆ ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು’ ಎನ್ನುತ್ತಾರೆಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ.

‘ಹೋಂ ಐಸೊಲೇಷನ್ ಆಗುವವರ ಬಳಿ ತ್ಯಾಜ್ಯವನ್ನು ಸಂಗ್ರಹಿಸಬೇಕಿದೆ. ನಗರ ಪಾಲಿಕೆಯಿಂದ ವರ್ಕ್ ಆರ್ಡರ್ ಕೊಟ್ಟರೆ ಶುರು ಮಾಡುತ್ತೇವೆ. ಕೋವಿಡ್‌ ಹಾಗೂ ಇತರೆ ತ್ಯಾಜ್ಯವನ್ನು ವಿಲೇವಾರಿ ಮಾಡಲು ಬೇರೆ ಬೇರೆ ಮಾರ್ಗಸೂಚಿಗಳು ಇವೆ. ಅದರಂತೆ ವಿಲೇವಾರಿ ಮಾಡಲಾಗುವುದು’ ಎನ್ನುತ್ತಾರೆ ಸುಶಾಂತ್ ಎನ್ವಿರಾನ್‌ಮೆಂಟಲ್ ಟೆಕ್ನಾಲಜೀಸ್ ಮ್ಯಾನೇಜಿಂಗ್ ಪಾರ್ಟ್‌ನರ್‌ ಮಹೇಶ್ ಜಿ.ಪಿ.

‘ನಗರದಲ್ಲಿ ಹೋಂ ಐಸೊಲೇಷನ್‌ನಲ್ಲಿ ಇರುವವರ ಬಳಿಯಿಂದಲೂ ತ್ಯಾಜ್ಯ ಸಂಗ್ರಹಿಸಲು ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಅವರಿಗೆ ವರ್ಕ್ ಆರ್ಡರ್ ನೀಡಲಾಗುವುದು’ ಎಂದು ಮಹಾನಗರ ಪಾಲಿಕೆ ಎಇಇ ಜಗದೀಶ್ ಮಾಹಿತಿ ನೀಡಿದರು.

ಸಮರ್ಪಕವಾಗಿ ಆಗದ ತ್ಯಾಜ್ಯ ವಿಲೇವಾರಿ

ಚನ್ನಗಿರಿ: ಪಟ್ಟಣ ಸೇರಿ ತಾಲ್ಲೂಕಿನಲ್ಲಿ ಒಟ್ಟು 23 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಹಾಗೆಯೇ ಕೋವಿಡ್ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡುವ ಸಲುವಾಗಿ 6 ಕೋವಿಡ್ ಕೇರ್ ಸೆಂಟರ್‌ ಸೆಂಟರ್‌ಗಳಿವೆ.

ಪ್ರತಿ ದಿನ ಒಂದು ಕೋವಿಡ್ ಕೇರ್ ಸೆಂಟರ್‌ನಲ್ಲಿ ಕನಿಷ್ಠ 1 ಕ್ವಿಂಟಲ್‌ಗಿಂತಲೂ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತದೆ. ಇನ್ನು ಪಟ್ಟಣದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ 2 ಕ್ವಿಂಟಲ್‌ಗಿಂತಲೂ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತದೆ. ಕೆಲವು ಬಿಟ್ಟರೆ ಬಹುತೇಕ ಆರೋಗ್ಯ ಕೇಂದ್ರ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ.

ಪಟ್ಟಣದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ದೊಡ್ಡ ಗುಂಡಿಯನ್ನು ತೆಗೆದು ಅದರಲ್ಲಿ ಪ್ರತಿ ದಿನ ಸಂಗ್ರಹವಾಗುವ ತ್ಯಾಜ್ಯವನ್ನು ಹಾಕುವ ಕಾರ್ಯ ನಡೆದಿದೆ. ಇನ್ನು ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ತ್ಯಾಜ್ಯ ನಿರ್ವಹಣೆಯಾಗುತ್ತಿಲ್ಲ. ಆರೋಗ್ಯ ಕೇಂದ್ರದ ಖಾಲಿ ಜಾಗದಲ್ಲಿ ತ್ಯಾಜ್ಯವನ್ನು ಸುರಿಯಲಾಗುತ್ತಿದೆ.

ಕೆಲವು ಕೋವಿಡ್ ಕೇರ್ ಸೆಂಟರ್ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಗ್ರಾಮದ ಹೊರಗೆ ಕೆರೆ ಹಾಗೂ ಹಳ್ಳಕೊಳ್ಳಗಳ ಬದಿಗೆ ಹಾಕಿ ಬರುವ ಕಾರ್ಯ ನಡೆದಿದೆ.

ಅವಳಿ ತಾಲ್ಲೂಕಿನಲ್ಲಿ 1,400 ಕೆ.ಜಿ. ತ್ಯಾಜ್ಯ ಉತ್ಪತ್ತಿ

ಹೊನ್ನಾಳಿ: ‘ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ಒಟ್ಟು 5 ಕೋವಿಡ್ ಕೇರ್ ಸೆಂಟರ್‌ಗಳಿದ್ದು, 770 ಬೆಡ್‌‌‌ಗಳಿವೆ. ಒಂದು ಬೆಡ್‌ಗೆ ಕನಿಷ್ಠ 2ರಿಂದ 3 ಕೆ.ಜಿ ತ್ಯಾಜ್ಯ ಸಂಗ್ರಹವಾದರೂ 1,400 ಕೆ.ಜಿ. ಸಂಗ್ರಹವಾಗುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಹೇಳುತ್ತಾರೆ.

‘ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ದಿನ 25ರಿಂದ 30 ಕೆ.ಜಿ ಕೋವಿಡ್ ತ್ಯಾಜ್ಯ ಸಂಗ್ರಹವಾಗುತ್ತದೆ. ಬರುವ ರೋಗಿಗಳನ್ನು ಅವಲಂಬಿಸಿರುವುದರಿಂದ ಇದು ಹೆಚ್ಚು ಅಥವಾ ಕಡಿಮೆಯೂ ಆಗಬಹುದು’ ಎಂದು ಆಡಳಿತಾಧಿಕಾರಿ ಡಾ. ಚಂದ್ರಪ್ಪ ಮಾಹಿತಿ ನೀಡಿದರು.

ಕೋವಿಡ್‍ ವಾರ್ಡ್‌ನ ಕಸಕ್ಕೆ ಬೆಂಕಿ: ದೂರು

ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜೈವಿಕ ತಾಜ್ಯ ಸಂಗ್ರಹಾಲಯದ ಹಿಂಭಾಗದಲ್ಲಿ ಕೋವಿಡ್‍ ವಾರ್ಡ್‌ನ ಕಸ ಹಾಗೂ ವೈದ್ಯರು ಬಳಸಿದ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ‘ಡಿ’ ದರ್ಜೆ ಸಿಬ್ಬಂದಿ ಬೆಂಕಿ ಹಚ್ಚುತ್ತಿದ್ದಾರೆ.

ಇದರಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಆರೋಪಿಸಿ ಆಸ್ಪತ್ರೆ ಸುತ್ತಲಿನ ವಸತಿ ಪ್ರದೇಶದ ಸಾರ್ವಜನಿಕರು ನಗರಸಭೆಗೆ ದೂರು ನೀಡಿದ್ದಾರೆ.

ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಲ್‍. ಹನುಮನಾಯಕ್‌, ‘ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್‍ ಸೋಂಕಿತರಿಗಾಗಿ 60 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಸೋಂಕಿತರ ವಾರ್ಡ್‌ಗಳಿಂದ ಉತ್ಪಾದನೆಯಾಗುವ ಕಸ ಹಾಗೂ ವೈದ್ಯರು ಬಳಸುವ ಪಿಪಿಇ ಕಿಟ್‍, ಲಸಿಕೆಯ ವೇಲ್ಸ್, ಮಾಸ್ಕ್‌ ಹಾಗೂ ಫೇಸ್‍ಶೀಲ್ಡ್‌ಗಳನ್ನು ವಿಂಗಡಿಸಿ ವಿಲೇವಾರಿ ಮಾಡಲಾಗುವುದು. ಆಹಾರ ತಾಜ್ಯವನ್ನು ನಗರಸಭೆ ಸಿಬ್ಬಂದಿ ಮೂಲಕ ವಿಲೇವಾರಿಗೊಳಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT