ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರ, ಸಂಸ್ಕೃತಿಯುತ ಜ್ಞಾನಕ್ಕೆ ಹೊಳಪು ಹೆಚ್ಚು

ರಾಜ್ಯಮಟ್ಟದ ಕಾಮರ್ಸ್‌ ಪ್ರದರ್ಶನ ಉದ್ಘಾಟಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 28 ಫೆಬ್ರುವರಿ 2021, 5:33 IST
ಅಕ್ಷರ ಗಾತ್ರ

ದಾವಣಗೆರೆ: ಏನೂ ಇಲ್ಲದವ ಬಹಳ ಎತ್ತರಕ್ಕೆ ಬೆಳೆಯಬಹುದು. ಅದು ಜ್ಞಾನದಿಂದ ಮಾತ್ರ ಸಾಧ್ಯ. ಜ್ಞಾನದ ಜತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯೂ ಇದ್ದರೆ ಅದಕ್ಕೆ ಹೊಳಪು ಹೆಚ್ಚು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಹೈಟೆಕ್ ಎಜುಕೇಶನ್‌ನ ಕಾಮರ್ಸ್‌ ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ‘ವಾಣಿಜ್ಯೋತ್ಸವ–2021’ ರಾಜ್ಯಮಟ್ಟದ ಕಾಮರ್ಸ್‌ ಎಕ್ಸಿಬಿಷನ್‌ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ದೊಡ್ಡ ಸಾಧನೆಗಳು ಸಣ್ಣ ಬಿಂದುವಿನಿಂದ, ಸಣ್ಣ ಹೆಜ್ಜೆಗಳಿಂದ ಆರಂಭವಾಗಿರುತ್ತದೆ. ಆತ್ಮವಿಶ್ವಾಸವನ್ನು ರೂಢಿಸಿಕೊಂಡು ದೊಡ್ಡ ಕನಸು ಕಾಣಬೇಕು. ಕನಸು ಅಂದರೆ ಅದು ಸಾಮಾನ್ಯವಾಗಿರಬಾರದು. ಬದುಕಿನಲ್ಲಿ ನನಸು ಮಾಡಿಕೊಳ್ಳುವ ಕನಸಾಗಿರಬೇಕು. ಆ ಕನಸಿಗಾಗಿ ನಿತ್ಯ ತುಡಿಯುತ್ತಿರಬೇಕು ಎಂದು ಹೇಳಿದರು.

"ಇರುವುದರ ಪರದೆ ಸರಿಸಿ ತೋರಿಸುವುದನ್ನು ಸಂಶೋಧನೆ ಎಂದು ಕರೆಯಲಾಗುತ್ತದೆ. ಇಲ್ಲದೇ ಇರುವ ವಸ್ತುವನ್ನು ತಯಾರಿಸುವುದಕ್ಕೆ ಆವಿಷ್ಕಾರ ಎನ್ನುತ್ತೇವೆ. ವಿಮಾನ ಹಿಂದೆ ಇರಲಿಲ್ಲ. ಅದನ್ನು ತಯಾರಿಸಲಾಯಿತು. ಅದುವೇ ಆವಿಷ್ಕಾರ. ನೀವೆಲ್ಲ ಹೊಸತನ್ನು ಹುಡುಕುವವರಾಗಬೇಕು' ಎಂದು ಸಲಹೆ ನೀಡಿದರು.

‘ನಾನು ಜಾತ್ರೆಯಲ್ಲಿ ಉತ್ತತ್ತಿ ಮಾರುತ್ತಿದ್ದ ಕಾಲದಲ್ಲೂ, ಹೊತ್ತಿನ ತುತ್ತಿಗೆ ಪರದಾಡುತ್ತಿದ್ದಾಗಲೂ ಜಿಲ್ಲಾಧಿಕಾರಿ ಆಗುವ ಕನಸು ಕಂಡಿದ್ದೆ. ಪ್ರತಿದಿನ ಆ ಕನಸು ನನಸು ಮಾಡಲು ಪ್ರಯತ್ನದಲ್ಲಿದ್ದೆ’ ಎಂದು ತನ್ನ ಬಾಲ್ಯದ ಅನುಭವದ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಸಂಸ್ಥೆಯ ಅಧ್ಯಕ್ಷ ಅಥಣಿ ವೀರಣ್ಣ, ‘ನಾನು ಪಿಯುಸಿಯಲ್ಲಿ ಅನುತ್ತೀರ್ಣನಾಗಿದ್ದೆ. ಬಳಿಕ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಸಿಎ ಮಾಡಬೇಕು ಎಂಬ ಕನಸು ಹುಟ್ಟಿಕೊಂಡಿತು. ಐಎಎಸ್‌, ಐಪಿಎಸ್‌ ಮಾಡುವಷ್ಟೇ ಕಷ್ಟ ಸಿಎ ಮಾಡುವುದಕ್ಕೂ ಇದೆ. ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧಕರಾದರೆ ಜಗತ್ತಿನಾದ್ಯಂತ ಉದ್ಯೋಗವಕಾಶಗಳಿವೆ’ ಎಂದು ತಿಳಿಸಿದರು.

ರಾಜ್ಯದ ವಿವಿಧ ಕಾಮರ್ಸ್‌ ಕಾಲೇಜುಗಳ ಪಿಯು ಮತ್ತು ಪದವಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಶೋಧನೆಯ ವಸ್ತು ಪ್ರದರ್ಶನ, ಪೋಸ್ಟರ್‌ ಪ್ರದರ್ಶನ, ವಿವಿಧ ದೇಶಗಳ ಕರೆನ್ಸಿ ‍ಪ್ರದರ್ಶನ, ಭಾರತದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಬಂದ ನಾಣ್ಯ, ನೋಟುಗಳ ಪ್ರದರ್ಶನ ನೀಡಿದರು. ಕ್ವಿಜ್‌ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು.

ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಹೈಟೆಕ್ ಎಜುಕೇಶನ್‌ ಪ್ರಾಚಾರ್ಯ ಡಾ.ಬಿ. ವೀರಪ್ಪ ಇದ್ದರು. ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಎಚ್‌.ವಿ. ಸ್ವಾಗತಿಸಿದರು. ಸ್ವಾತಿ, ತಾನ್ವಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಸಹನಾ ಸಿ.ವೈ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT