ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಅಪರಾಧ ಹೆಚ್ಚಳ: ಎಸ್ಪಿ ಕಳವಳ

ಸೈಬರ್‌ ಅಪರಾಧ ಜಾಗೃತಿ ಅಭಿಯಾನ ವಿಡಿಯೊ ಬಿಡುಗಡೆ
Last Updated 25 ಸೆಪ್ಟೆಂಬರ್ 2020, 15:25 IST
ಅಕ್ಷರ ಗಾತ್ರ

ದಾವಣಗೆರೆ: ತಂತ್ರಜ್ಞಾನದ ಅಭಿವೃದ್ಧಿಯ ಜೊತೆಯಲ್ಲೇ ಸೈಬರ್ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಕಳವಳ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸೈಬರ್‌ ಅಪರಾಧ ಜಾಗೃತಿ ಅಭಿಯಾನದ ವಿಡಿಯೊ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬದಲಾದ ಜೀವನ ಶೈಲಿಯಿಂದ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ಹೊಸ ಹೊಸ ರೀತಿಯ ಸಂವಹನ ವ್ಯವಸ್ಥೆಗಳು ಬಳಕೆಯಾಗುತ್ತಿದ್ದು, ಇದರಿಂದ ಅಕ್ರಮ ಚಟುವಟಿಕೆ ನಡೆಯುತ್ತಿವೆ. ಇದನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ’ ಎಂದರು.

105 ಸೈಬರ್‌ ಪ್ರಕರಣ: 2018ರಲ್ಲಿ 15 ಸೈಬರ್‌ ಪ್ರಕರಣಗಳು, 2019ರಲ್ಲಿ 44 ಪ್ರಕರಣಗಳು ಹಾಗೂ 2020ರಲ್ಲಿ 46 ಸೈಬರ್‌ ಪ್ರಕರಣಗಳು ಸೇರಿ ಒಟ್ಟು 105 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ. ಸೈಬರ್‌ ಅಪರಾಧದ ಬಗ್ಗೆ ಮಾಹಿತಿ ಇದ್ದವರು ಮಾತ್ರ ದೂರು ನೀಡಲು ಮುಂದೆ ಬರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹೈಟೆಕ್ ಸೈಬರ್ ಲ್ಯಾಬ್: ಸೈಬರ್ ಅಪರಾಧ ಎಸಗುವವರು ರೈತರು, ಅವಿದ್ಯಾವಂತರು, ಸಣ್ಣಪುಟ್ಟ ವ್ಯಾಪಾರಿಗಳು, ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಸೈಬರ್ ಪ್ರಕರಣ ನಿಯಂತ್ರಿಸುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ದೇಶದ ಮೊದಲ ಹೈಟೆಕ್ ಸೈಬರ್ ಲ್ಯಾಬ್‌ ತೆರೆಯಲಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಬಿ.ಜಿ.ಅಜಯಕುಮಾರ್, ‘ತಂತ್ರಜ್ಞಾನ ಮುಂದುವರಿದಿದ್ದು, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಎಟಿಎಂ, ಬ್ಯಾಂಕ್ ಅಕೌಂಟ್, ಲಾಟರಿ, ಗಿಫ್ಟ್ ಬಂದಿರುವ ಬಗ್ಗೆ, ಉದ್ಯೋಗ ಹಾಗೂ ಸಾಲ ಕೊಡಿಸುವುದಾಗಿ ಸೈಬರ್‌ ಅಪರಾಧ ಎಸಗಲಾಗುತ್ತಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಬೇಕಾಗಿದೆ’ ಎಂದು ಹೇಳಿದರು.

ನಗರದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸುವ ಕುರಿತು ಹಾಗೂ ವಾಣಿಜ್ಯ ಮಳಿಗೆ ಕಟ್ಟಿಕೊಳ್ಳುವವರಿಗೆ ಪರವಾನಗಿ ನೀಡುವ ವೇಳೆ ಕಡ್ಡಾಯವಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂಬ ಷರತ್ತು ವಿಧಿಸುವ ಬಗ್ಗೆ ಪಾಲಿಕೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಸೈಬರ್‌ ಅಪರಾಧ ಕುರಿತು ವಾರ್ಡ್‌ ಮಟ್ಟದಲ್ಲಿ ಜಾಗೃತಿ ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸೈಬರ್ ಪೊಲೀಸ್‌ ಇನ್‌ಸ್ಪೆಕ್ಟರ್‌ ಮುಸ್ತಾಕ್ ಅಹಮದ್ ಸೈಬರ್‌ ಅಪರಾಧ ಕುರಿತು ಮಾಹಿತಿ ನೀಡಿದರು.

ಉಪ ಮೇಯರ್ ಸೌಮ್ಯಾ ನರೇಂದ್ರಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ.ವೀರೇಶ್, ಪ್ರಸನ್ನಕುಮಾರ್, ಗೌರಮ್ಮ ಗಿರಿರಾಜ್, ಜಯಮ್ಮ ಗೋಪಿನಾಥ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿವೈಎಸ್ಪಿ ಬಸವರಾಜ್, ಪಾಲಿಕೆಯ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT