ಗುರುವಾರ , ಏಪ್ರಿಲ್ 22, 2021
30 °C
ಹರಿಹರೇಶ್ವರನ ರಥೋತ್ಸವದ ನಂತರ ನಡೆಯುವ ಸಾಂಪ್ರದಾಯಿಕ ಆಚರಣೆ

ದಾಸ ಪರಂಪರೆಯ ಮಣೇವು ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ನಗರದ ಹರಿಹರೇಶ್ವರ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಏಳು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಂತರ ಪರಿಶಿಷ್ಟ ಕಾಲೊನಿಯಲ್ಲಿ ನಡೆಸಿಕೊಂಡು ಬಂದ ಮಣೇವು ಆಚರಣೆ ಭಾನುವಾರ ನಡೆಯಿತು.

ರಥೋತ್ಸವದ ನಂತರ, ದೇವಸ್ಥಾನದಲ್ಲಿ ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ಸ್ಥಾಪಿತ ದೇವತಾ ಪೂಜೆ, ನಾಂದಿ ಕಂಕಣ ಹಾಗೂ ಧ್ವಜ ವಿಸರ್ಜನೆ, ಅವಭೃತ ಸ್ನಾನಾದಿಗಳು ಮುಗಿದ ನಂತರ, ಪರಿಶಿಷ್ಟ ಸಮುದಾಯದ ಹರಿಹರೇಶ‍್ವರ ಮುದ್ರೆ ಹಾಕಿಸಿಕೊಂಡ (ದಾಸ ಪರಂಪರೆಯ) ಮನೆಯವರು ಈ ಸಂಪ್ರದಾಯ ಆಚರಿಸುತ್ತಾರೆ.

ದೇವರ ದಾಸತ್ವ ಸ್ವೀಕರಿಸಿದ ವ್ಯಕ್ತಿಗಳು ಶ್ವೇತ ವಸ್ತ್ರಧಾರಿಗಳಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ರಾಮ, ರಾಮ ಗೋವಿಂದ.. ಹರಿ ಗೋವಿಂದ... ಎಂಬ ನಾಮಸ್ಮರಣೆ ಮಾಡುತ್ತಾ ಪ್ರತಿ ಮನೆಯ ಮುಂದೆ ವಿಶಿಷ್ಟ ರೀತಿಯಲ್ಲಿ ಸುತ್ತು ಹಾಕುತ್ತಾ ಪ್ರದಕ್ಷಣೆ ಹಾಕುತ್ತಾರೆ.

ಮನೆಗಳ ಮುಂದೆ ದಾಸರು ಬಂದಾಗ ಮನೆಯವರು ಬಾಳೆಹಣ್ಣು, ಕೊಬ್ಬರಿ, ಬೆಲ್ಲ, ಈರುಳ್ಳಿ ಹಾಗೂ ಕಾಣಿಕೆಯನ್ನು ಮಡಿ ವಸ್ತ್ರದ ಮೇಲೆ ಹಾಕಿ ನೈವೇದ್ಯ ಅರ್ಪಿಸುತ್ತಾರೆ. ನಂತರ ದಾಸ ಸಮೂಹ ನೈವೇದ್ಯದ ಸುತ್ತ ಪ್ರದಕ್ಷಿಣೆ ಹಾಕಿ ಮುಂದಿನ ಮನೆಗೆ ತೆರಳುತ್ತಾರೆ. ಈ ಆಚರಣೆಯಿಂದ ವರ್ಷ ಪೂರ್ತಿ ಮನೆತನದ ಮೇಲೆ ಸ್ವಾಮಿಯ ಆಶೀರ್ವಾದವಿರುತ್ತದೆ ಎಂಬುದು ಸ್ಥಳೀಯರ ನಂಬಿಕೆ.

‘ಹರಿಹರೇಶ್ವರನ ದಾಸತ್ವವನ್ನು ಸ್ವೀಕರಿಸದವರು ರಥೋತ್ಸವ ಹಾಗೂ ಶ್ರಾವಣ ಮಾಸದಲ್ಲಿ ಮದ್ಯ, ಮಾಂಸಾಹಾರವನ್ನು ತ್ಯಜಿಸಿ ಧಾರ್ಮಿಕ ಕಟ್ಟುಪಾಡುಗಳನ್ನು ಪಾಲಿಸುತ್ತಾರೆ. ರಥೋತ್ಸವದ ನಂತರ, ಮಣೇವು ಸಂಪ್ರದಾಯ ಆಚರಿಸುತ್ತಾರೆ’ ಎಂದು ದಾಸ ಪರಂಪರೆಯ ಎಚ್. ನಾಗಭೂಷಣ ತಿಳಿಸಿದರು.

‘ನಮ್ಮ ಸಮುದಾಯದ ಹರಿಹರೇಶ್ವರನ ಭಕ್ತರೆನಿಸಿಕೊಂಡ (ಒಕ್ಕಲಿನ) ಕುಟುಂಬದ ಒಬ್ಬ ಸದಸ್ಯನಿಗೆ ಹರಿಹರೇಶ್ವರ ಸ್ವಾಮಿಯ ಮುದ್ರೆ ಹಾಕಿಸಿ ದಾಸರನ್ನಾಗಿ ಮಾಡಲಾಗುತ್ತದೆ. ಆ ವ್ಯಕ್ತಿ ಮರಣಿಸಿದಾಗ ಕುಟುಂಬದ ಮದುವೆಯಾಗದ ಗಂಡು ಮಕ್ಕಳಿಗೆ ಈ ಮುದ್ರೆಯನ್ನು ಹಾಕಿಸಲಾಗುತ್ತದೆ. ಈ ಸಂಪ್ರದಾಯವನ್ನು ಶತಮಾಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ನಗರಸಭೆ ಸದಸ್ಯ ಪಿ.ಎನ್‍. ವಿರೂಪಾಕ್ಷ ಹೇಳಿದರು.

ಆಧುನಿಕ ಜೀವನದ ಭರಾಟೆಗೆ ಸಿಲುಕಿ ಸಂಪ್ರದಾಯಗಳು ಕಣ್ಣರೆಯಾಗುತ್ತಿರುವ ದಿನಗಳಲ್ಲಿ ಬುಡಕಟ್ಟು ಹಾಗೂ ತಳ ಸಮುದಾಯಗಳಲ್ಲಿ ಸಂಪ್ರದಾಯ ಹಾಗೂ ಆಚರಣೆಗಳು ಜೀವಂತವಾಗಿರುವುದಕ್ಕೆ ಈ ಆಚರಣೆ ಸಾಕ್ಷಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು