ಹರಿಹರ: ಕಾಂಗ್ರೆಸ್ ಸರ್ಕಾರವು ಕ್ಷೇತ್ರಾಭಿವೃದ್ಧಿಗೆ ಅನುದಾನ ನೀಡದ್ದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನೆಡೆ ಉಂಟಾಗಿದೆ ಎಂದು ಶಾಸಕ ಬಿ.ಪಿ.ಹರೀಶ್ ಆರೋಪಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ನೇತೃತ್ವದ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲೇ ಸುಸ್ತಾಗುತ್ತಿದೆ. ನನ್ನ ಕ್ಷೇತ್ರಕ್ಕೂ ₹ 2 ಕೋಟಿ ಕ್ಷೇತ್ರಾಭಿವೃದ್ಧಿ ಅನುದಾನ ಮಾತ್ರ ಆಧಾರವಾಗಿದ್ದು, ಬೇರೆ ಯಾವುದೇ ಮೂಲದಿಂದ ಅನುದಾನ ಸಿಗುತ್ತಿಲ್ಲ’ ಎಂದರು.
‘ಆಸ್ಪತ್ರೆಗೆ ರೋಗಿಗಳು ಸಂಚರಿಸುವ ಈ ರಸ್ತೆ ಗುಂಡಿಮಯವಾಗಿದ್ದು, ಹೊಸ ರಸ್ತೆ ನಿರ್ಮಾಣ ಅಗತ್ಯವಾಗಿತ್ತು. ನಗರಸಭೆಯು ಈ ರಸ್ತೆ ಕಾಮಗಾರಿಗೆ ಆದ್ಯೆತೆ ನೀಡಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದರು.
‘ಆಸ್ಪತ್ರೆ ರಸ್ತೆ ಅವ್ಯವಸ್ಥೆ ಇರುವ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ನಗರಸಭಾ ಸದಸ್ಯರೆಲ್ಲರೂ ಸೇರಿ ಪೌರಾಯುಕ್ತರಿಗೆ ಮನವರಿಕೆ ಮಾಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹೇಳಿದರು.