ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ ಮಹಾನಗರ ಪಾಲಿಕೆಗೆ ತಪ್ಪದ ಆರ್ಥಿಕ ಹೊರೆ

ಎಲ್‌ಇಡಿ ಬೀದಿದೀಪ ಅಳವಡಿಕೆ: ಸ್ಮಾರ್ಟ್‌ ಸಿಟಿಯಿಂದ ಟೆಂಡರ್‌ ಪ್ರಕ್ರಿಯೆಯಲ್ಲೇ ಕಾಲಹರಣ
Published : 10 ಜೂನ್ 2020, 15:29 IST
ಫಾಲೋ ಮಾಡಿ
Comments

ದಾವಣಗೆರೆ: ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ) ₹ 23.64 ಕೋಟಿ ಯೋಜನಾವೆಚ್ಚದಲ್ಲಿ ನಗರದಲ್ಲಿ ಎಲ್‌ಇಡಿ ಬೀದಿ ದೀಪ ಪರಿವರ್ತನೆ ಹಾಗೂ ಏಳು ವರ್ಷಗಳ ನಿರ್ವಹಣೆ ಕಾಮಗಾರಿ ಒಂದೂವರೆ ವರ್ಷದಿಂದ ಟೆಂಡರ್‌ ಪ್ರಕ್ರಿಯೆಯಲ್ಲೇ ನಿಂತುಹೋಗಿದೆ.

ಬೀದಿದೀಪಗಳ ವಿದ್ಯುತ್‌ ಬಿಲ್‌ ಹೆಚ್ಚು ಪಾವತಿಸುತ್ತಿರುವುದರಿಂದ ಮಹಾನಗರ ಪಾಲಿಕೆಗೆ ಆರ್ಥಿಕ ಹೊರೆಯಾಗುತ್ತಿರುವುದು ಒಂದೆಡೆಯಾದರೆ, ಕೆಟ್ಟು ಹೋಗಿರುವ ಬೀದಿ ದೀಪಗಳನ್ನು ಬದಲಾಯಿಸದೇ ಇರುವುದರಿಂದ ನಾಗರಿಕರಿಗೆ ತೊಂದರೆ ಇನ್ನೊಂದೆಡೆ.

ಪಾಲಿಕೆ ವ್ಯಾಪ್ತಿಯಲ್ಲಿನ ಸುಮಾರು 23 ಸಾವಿರ ಬೀದಿದೀಪಗಳನ್ನು ಎಲ್‌ಇಡಿಗಳಾಗಿ ಪರಿವರ್ತಿಸಬೇಕಾಗಿದೆ. ಹಳೆ ಮಾದರಿಯ ಬೀದಿದೀಪಗಳಿರುವುದರಿಂದ ವಿದ್ಯುತ್‌ ಬಳಕೆ ಹೆಚ್ಚುತ್ತಿದೆ. ಪಾಲಿಕೆಯು ಪ್ರತಿ ತಿಂಗಳು ವಿದ್ಯುತ್‌ ಬಿಲ್‌ಗೆಸುಮಾರು ₹ 60 ಲಕ್ಷ ಹಾಗೂ ಬೀದಿ ದೀಪಗಳ ನಿರ್ವಹಣೆಗೆ ₹ 20 ಲಕ್ಷ ವೆಚ್ಚ ಮಾಡುತ್ತಿದೆ. ಬೀದಿ ದೀಪಗಳಿಗಾಗಿಯೇ ವಾರ್ಷಿಕ ಸುಮಾರು ₹ 10 ಕೋಟಿ ವ್ಯಯಿಸುತ್ತಿದೆ.

ಗುತ್ತಿಗೆದಾರು ತಮ್ಮ ಬಂಡವಾಳದಲ್ಲಿ ಎಲ್‌ಇಡಿ ದೀಪಗಳನ್ನು ಹಾಕಲಿದ್ದಾರೆ. ಜೊತೆಗೆ ಸಿಸಿಎಂಎಸ್‌ ವ್ಯವಸ್ಥೆಯನ್ನು ಅಳವಡಿಸುವುದರಿಂದ ಏಕಕಾಲಕ್ಕೆ ಇಡೀ ನಗರದ ಬೀದಿ ದೀಪಗಳನ್ನು ಆನ್‌–ಆಫ್‌ ಮಾಡಬಹುದಾಗಿದೆ. ಇದರಿಂದಾಗಿ ಶೇ 50ರಷ್ಟು ವಿದ್ಯುತ್‌ ಬಿಲ್‌ ಉಳಿತಾಯವಾಗಲಿದೆ. ಈ ಉಳಿತಾಯದ ಹಣದಲ್ಲೇ ಪಾಲಿಕೆಯು ಏಳು ವರ್ಷಗಳ ಕಾಲ ಪ್ರತಿ ತಿಂಗಳು ಗುತ್ತಿಗೆದಾರ ಕಂಪನಿಗೆ ಇಎಂಐನಂತೆ ನಿಗದಿತ ಹಣ ಭರಿಸಬೇಕು.

ನಾಲ್ಕು ಬಾರಿ ಟೆಂಟರ್‌: ಎಲ್‌ಇಡಿ ಬೀದಿ ದೀಪ ಅಳವಡಿಕೆಗೆ 2019ರ ಜನವರಿ 3ರಂದು ಮೊದಲ ಬಾರಿಗೆ ಎಲ್‌ಇಡಿ ದೀಪ ಅಳವಡಿಕೆ ಹಾಗೂ 10 ವರ್ಷಗಳ ನಿರ್ವಹಣೆಗೆ ಇ–ಟೆಂಡರ್‌ ಕರೆಯಲಾಗಿತ್ತು. ಆಗ ₹ 103 ಕೋಟಿಗೆ ಒಬ್ಬ ಗುತ್ತಿಗೆದಾರರು ಮಾತ್ರ ಬಿಡ್‌ ಮಾಡಿದ್ದರು. ಬಹಳ ಹೆಚ್ಚು ಹಣವನ್ನು ನಮೂದಿಸಿದ್ದರಿಂದ ಪಾಲಿಕೆಗೆ ಲಾಭವಾಗುವುದಿಲ್ಲ ಎಂಬ ಕಾರಣಕ್ಕೆ ಟೆಂಡರ್‌ ರದ್ದುಗೊಳಿಸಲಾಯಿತು.

ಎಂಟು ತಿಂಗಳ ಬಳಿಕ ಆಗಸ್ಟ್‌ 31ರಂದು ನಿರ್ವಹಣೆ ಅವಧಿಯನ್ನು ಏಳು ವರ್ಷಗಳಿಗೆ ಇಳಿಸಿ ಎರಡನೇ ಬಾರಿಗೆ ಟೆಂಡರ್‌ ಕರೆಯಲಾಯಿತು. ಇಬ್ಬರು ಗುತ್ತಿಗೆದಾರರು ಬಿಡ್‌ ಮಾಡಿದ್ದರು. ತಾಂತ್ರಿಕ ಕಾರಣ ನೀಡಿ ಬಿಡ್‌ ತೆರೆಯದೇ ಟೆಂಡರ್‌ ರದ್ದುಗೊಳಿಸಲಾಯಿತು. ನವೆಂಬರ್‌ 27ರಂದು ಮೂರನೇ ಬಾರಿಗೆ ಟೆಂಡರ್‌ ಕರೆದಾಗ ಮೂವರು ಗುತ್ತಿಗೆದಾರರು ಬಿಡ್‌ ಮಾಡಿದ್ದರು. ಅತಿ ಕಡಿಮೆ ಬೆಲೆ ನಮೂದಿಸಿದ್ದ (ಎಲ್‌–1) ಗುತ್ತಿಗೆದಾರರಿಗೆ ಕಾಮಗಾರಿಗೆ ವಹಿಸಲು ತೀರ್ಮಾನಿಸಲಾಗಿತ್ತು. ಆದರೆ, ‘ಎಲ್‌–1’ ಗಾಜಿಯಾಬಾದ್‌ ಪಾಲಿಕೆಯಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಣೆ ಮಾಡಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಗಾಜಿಯಾಬಾದ್‌ ಪಾಲಿಕೆಯನ್ನು ಸಂಪರ್ಕಿಸಿದಾಗ, ‘ಒಂದು ವರ್ಷದಿಂದ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ’ ಎಂದು ಪ್ರಮಾಣಪತ್ರ ನೀಡಿತು. ಈ ಕಾರಣಕ್ಕೆ ಎಲ್‌–1ಗೆ ಕಾಮಗಾರಿ ನೀಡದೆ ಟೆಂಡರ್‌ ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಯಿತು. ಇದೇ ವರ್ಷ ಮಾರ್ಚ್‌ 3ಕ್ಕೆ ನಾಲ್ಕನೇ ಬಾರಿಗೆ ಟೆಂಡರ್‌ ಕರೆಯಲಾಯಿತು. ಬಿಡ್‌ ಮಾಡಲು ಜೂನ್‌ 3 ಕೊನೆಯ ದಿನವಾಗಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ ನೆಪವೊಡ್ಡಿ ಜೂನ್‌ 15ರವರೆಗೂ ಅವಧಿಯನ್ನು ವಿಸ್ತರಿಸಲಾಗಿದೆ.

‘ಮೊದಲನೇ ಬಾರಿಗೆ ಟೆಂಡರ್‌ ಕರೆದಾಗ ಅತಿ ಹೆಚ್ಚು ಬೆಲೆ ನಮೂದಿಸಿದ್ದ ಬಿಡ್‌ದಾರರಿಗೇ ಕಾಮಗಾರಿ ನೀಡಲು ಸ್ಮಾರ್ಟ್‌ ಸಿಟಿಯ ಅಧಿಕಾರಿಗಳು ಉತ್ಸುಕರಾಗಿದ್ದಾರೆ. ಹೀಗಾಗಿಯೇ ಅನಗತ್ಯವಾಗಿ ಟೆಂಡರ್‌ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದ್ದಾರೆ. ಕಡಿಮೆ ಬೆಲೆ ನಮೂದಿಸಿದ ಅರ್ಹರಿಗೆ ಕಾಮಗಾರಿ ವಹಿಸುವ ಮನಸ್ಸು ಮಾಡುತ್ತಿಲ್ಲ’ ಎಂದು ಈ ಹಿಂದಿನ ಎರಡು ಬಾರಿಯ ಟೆಂಡರ್‌ ಪ್ರಕ್ರಿಯೆಗಳಲ್ಲೂ ಭಾಗವಹಿಸಿದ್ದ ಗುತ್ತಿಗೆದಾರರೊಬ್ಬರು ಆರೋಪಿಸಿದ್ದಾರೆ.

ಫೇವರ್‌ ಮಾಡುವ ಪ್ರಶ್ನೆಯೇ ಇಲ್ಲ: ಎಂಡಿ

‘ಇ–ಟೆಂಡರ್‌ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಯಾರನ್ನೂ ಫೇವರ್‌ ಮಾಡುವ ಪ್ರಶ್ನೆಯೇ ಇಲ್ಲ. ಕಡಿಮೆ ಬೆಲೆ ನಮೂದಿಸಿದ ಅರ್ಹ ಬಿಡ್‌ದಾರರಿಗೇ ಕಾಮಗಾರಿಯನ್ನು ನೀಡಲಾಗುವುದು’ ಎಂದು ‘ಸ್ಮಾರ್ಟ್‌ ಸಿಟಿ’ಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮೊದಲ ಎರಡು ಬಾರಿ ಟೆಂಡರ್‌ ಕರೆದಾಗ ನಾನು ಸ್ಮಾರ್ಟ್‌ ಸಿಟಿಯಲ್ಲಿ ಇಲ್ಲಿರಲಿಲ್ಲ. ಮೂರನೇ ಬಾರಿ ಟೆಂಡರ್‌ ಕರೆದಾಗ ‘ಎಲ್‌–1’ ಸುಳ್ಳು ಪ್ರಮಾಣಪತ್ರ ನೀಡಿದ್ದಾರೆ ಎಂದು ‘ಎಲ್‌–2’ ದೂರು ನೀಡಿದ್ದರು. ದಾಖಲೆ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ‘ಎಲ್‌–1’ಗೆ ಗುತ್ತಿಗೆ ನೀಡದೇ ಟೆಂಡರ್‌ ರದ್ದುಗೊಳಿಸಲಾಯಿತು. ‘ಎಲ್‌–2’ ತಮಗೇ ಕಾಮಗಾರಿ ನೀಡಬೇಕು ಎಂದು ಅಪೀಲು ಹೋಗಿದ್ದರು. ಆದರೆ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಮ್ಮ ತೀರ್ಮಾನವನ್ನು ಎತ್ತಿ ಹಿಡಿದರು. ಟೆಂಡರ್‌ ಕೊನೆಯ ದಿನಾಂಕ ಮುಗಿದ ಎರಡು ದಿನಗಳಲ್ಲಿ ಟೆಕ್ನಿಕಲ್‌ ಬಿಡ್‌ ತೆರೆಯಲಾಗುವುದು. ಬಳಿಕ ಅರ್ಹರಾಗಿರುವವರ ಫೈನಾನ್ಷಿಯಲ್‌ ಬಿಡ್‌ ತೆರೆದು, ಶೀಘ್ರದಲ್ಲೇ ಕೆಲಸ

ತಾಂತ್ರಿಕ ಕಾರಣಕ್ಕೆ ಟೆಂಡರ್‌ ಪ್ರಕ್ರಿಯೆ ವಿಳಂಬವಾಗುತ್ತಿದೆ. ಎಲ್‌ಇಡಿ ಬೀದಿ ದೀಪ ಹಾಕಿದ್ದರೆ ಪಾಲಿಕೆಗೆ ಭಾರಿ ಹಣ ಉಳಿತಾಯ ಆಗುತ್ತಿತ್ತು. ಅಲ್ಲಿಯವರೆಗೂ ಕಾಯುವುದು ಅನಿವಾರ್ಯ.

– ವಿಶ್ವನಾಥ ಮುದ್ದಜ್ಜಿ, ಪಾಲಿಕೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT